ಮುಂಗಾರು ಹಂಗಾಮಿನ ಬೆಳೆಗೆ ವಿಮೆ ಮಾಡಿಸಿ: ಪೂಜಾ
ತಾಲೂಕಿನ ರೈತಾಪಿಗಳು 2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಮಾಡಿಸುವಂತೆ ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದ್ದಾರೆ.
ತುರುವೇಕೆರೆ : ತಾಲೂಕಿನ ರೈತಾಪಿಗಳು 2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಮಾಡಿಸುವಂತೆ ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಮತ್ತು ಗುಡುಗು-ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡಗಳಿಂದ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ.
ತುರುವೇಕೆರೆ ತಾಲೂಕಿನಲ್ಲಿ 2023ನೇ ಸಾಲಿನ ಮುಂಗಾರು ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದೆ. ನೋಂದಣಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಗ್ರಾಮ ಪಂಚಾಯಿತಿ ಮಟ್ಟದ ವಿಮಾ ಘಟಕಕ್ಕೆ ತಾಲೂಕಿಗೆ ಭತ್ತ (ನೀರಾವರಿ), ರಾಗಿ (ಮಳೆಯಾಶ್ರಿತ) ಬೆಳೆಗಳನ್ನು ಬೆಳೆ ವಿಮೆಗೆ ಅಧಿಸೂಚನೆ ಮಾಡಲಾಗಿದೆ. ಹೋಬಳಿ ಮಟ್ಟದ ವಿಮಾ ಘಟಕಗಳಿಗೆ ಹಲಸಂದೆ (ಮಳೆಯಾಶ್ರಿತ), ರಾಗಿ (ನೀರಾವರಿ), ಹುರುಳಿ (ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ), ಟೊಮೆಟೊ ಬೆಳೆಗಳಿಗೆ ವಿಮೆಗೆ ನೋಂದಾಯಿಸಲು ಅಧಿಸೂಚನೆ ಮಾಡಲಾಗಿದೆ.
ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ಆಸಕ್ತ ರೈತರು ಬೆಳೆವಿಮೆಗೆ ನೊಂದಣಿ ಮಾಡಲು ಹಲಸಂದೆ (ಮಳೆಯಾಶ್ರಿತ) ಬೆಳೆಗೆ ಹಾಗೂ ಟೊಮೆಟೋಗೆ ಜು.15, ಭತ್ತ (ನೀರಾವರಿ) ಮತ್ತು ರಾಗಿ (ಮಳೆಯಾಶ್ರಿತ) ಬೆಳೆಗಳಿಗೆ ಆ.16ರಂದು ಹಾಗೂ ರಾಗಿ (ನೀರಾವರಿ), ಹುರುಳಿ (ಮಳೆಯಾಶ್ರಿತ) ಬೆಳೆಗಳಿಗೆ ಆ.16 ರಂದು ನೋಂದಣಿಗೆ ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತ ರೈತರುಗಳು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ, ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ಬೆಳೆ ವಿಮೆಗೆ ನೋಂದಣಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸೇವಾ ಕೇಂದ್ರಗಳನ್ನು ಭೇಟಿ ಮಾಡುವಂತೆ ಪೂಜಾರವರು ತಿಳಿಸಿದ್ದಾರೆ.