ವಿಜಯಪುರ(ಮಾ.04): ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹವಾಮಾನ ಅಪಾಯಗಳಿಗೆ ಸ್ಪಂದಿಸಲು ಮತ್ತು ಹೊಂದಿಕೊಳ್ಳಲು ಪರಿಣಾಮಕಾರಿ ಸಿದ್ಧತೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದರನ್ವಯ ವಿವಿಧ ಇಲಾಖೆಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಪ್ಪದೇ ಪಾಲಿಸಿ, ಬೇಸಿಗೆ ಕಾಲದ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಮುನ್ನೆಚರಿಕೆ ಕ್ರಮದ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವಂತೆ ಸೂಚನೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಎಚ್ಚರಿಕೆಯಂತೆ ಪ್ರಸಕ್ತ ಬೇಸಿಗೆ ಕಾಲದಲ್ಲಿ ಜಿಲ್ಲೆಯ ಇಂಡಿ ಮತ್ತು ಚಡಚಣ ಭಾಗಗಳಲ್ಲಿ ಗರಿಷ್ಠ ಪ್ರಮಾಣದ ಉಷ್ಣಾಂಶದ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಈ ಕುರಿತು ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದು, ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಮಧ್ಯಾಹ್ನ ಸಮಯದಲ್ಲಿ ಹಿರಿಯ ನಾಗರಿಕರು, ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಅವಶ್ಯಕ ಜಾಗೃತಿ ವಹಿಸಬೇಕು. ಈ ಸಮಯದಲ್ಲಿ ವಿರಾಮ ವಹಿಸುವುದರ ಜೊತೆಗೆ ಉರಿ ಬಿಸಿಲಿನಿಂದ ಆಗುವಂತಹ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.

ಬೇಸಿಗೆ ಕಾಲದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವಿವಿಧ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸೂಚಿಸಲು ತಿಳಿಸಿದ ಅವರು, ಇಲಾಖಾವಾರು ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಪಾಲಿಕೆ ಹಾಗೂ ಪುರಸಭೆಗಳಿಂದ ತೀವ್ರ ಉಷ್ಣಾಂಶ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ವೃತ್ತಗಳಲ್ಲಿ ನೆರಳಿಗಾಗಿ ಸೂಕ್ತ ಚಾವಣಿ ವ್ಯವಸ್ಥೆಯನ್ನು ವಿವಿಧ ನಗರ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಮಾಡಬೇಕು. 

ಮಹಾನಗರ ಪಾಲಿಕೆಯಿಂದ ತುರ್ತು ಕಂಟ್ರೋಲ್‌ ರೂಂ ತೆರೆಯಬೇಕು. ಆರೋಗ್ಯ ಇಲಾಖೆ ಮೂಲಕ 108 ಆಂಬ್ಯುಲೆನ್ಸ್‌, ತುರ್ತು ಚಿಕಿತ್ಸಾ ವಾರ್ಡ್‌ಗಳ ಸೌಲಭ್ಯ, ಅವಶ್ಯಕ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮನೆಮನೆಗೆ ಕೈಗೊಳ್ಳಬೇಕಾದ ಅವಶ್ಯಕ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಬಿಸಿಲಿನ ತಾಪಮಾನದಿಂದ ಸಾವು ನೋವುಗಳಾದ್ದಲ್ಲಿ, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಸಹಾಯವಾಣಿ 1077ಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ವಿಪತ್ತು ನಿರ್ವಹಣಾಧಿಕಾರಿ ಜೈನಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೇಸಿಗೆಯಲ್ಲಿ ಹೀಗೆ ಮಾಡಿ

ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆಧರಿಸಿರಿ.
ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಿ.
ಆಗಾಗ್ಗೆ ನಿಧಾನವಾಗಿ ಧಾರಾಳವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ.
ಕಾರ್ಬೊನೇಟೆಡ್‌ ಪಾನಿಯಗಳನ್ನು ವರ್ಜಿಸಿ.
ಕಾಫಿ, ಟೀ ಇತ್ಯಾದಿ ಆದಷ್ಟೂ ಕಡಿಮೆ ಕುಡಿಯಿರಿ.
ಹತ್ತಿಯ ನುಣುಪಾದ ಬಟ್ಟೆ, ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿ.
ನೀರು, ಮಜ್ಜಿಗೆ, ಎಳೆ ನೀರು ಕುಡಿಯಬಹುದು.
ಬೆಚ್ಚಗಿನ, ಮಸಾಲೆ ರಹಿತ, ಶುದ್ಧ ಸಾತ್ವಿಕ ಆಹಾರ ಸೇವಿಸಿರಿ.
ಗಾಳಿಯಾಡುವಂತಹ ಪಾದರಕ್ಷೆಗಳನ್ನು ಧರಿಸಿರಿ.
ತೊದಲು ಮಾತು ಅಥವಾ ಅರ್ಥರಹಿತವಾಗಿ ವ್ಯಕ್ತಿ ಬಡಬಡಿಸಿದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು.
ಆಘಾತಕ್ಕೊಳಗಾದ ವ್ಯಕ್ತಿಯ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ ತೆಗೆಯಿರಿ.
ತಂಪಾದ ನೆರಳಿರುವ ಜಾಗಕ್ಕೆ ಸ್ಥಳಾಂತರಿಸಿ, ಗಾಳಿ ಹಾಕಿರಿ, ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಿರಿ.
ಯಾವುದೇ ಔಷಧಿ ನೀಡಬೇಡಿ, ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡಬೇಡಿ.
ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸಿರಿ.
ಚರ್ಮ ಕೆಂಪಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ ದೀರ್ಘವಾದ ತೀವ್ರ ಉಸಿರಾಟವಿದ್ದಲ್ಲಿ ಬೆವರಿನ ಪ್ರಮಾಣ ಕಡಿಮೆಯಾದರೆ ತುರ್ತಾಗಿ ವೈದ್ಯರನ್ನು ಸಂಪರ್ಕಿಸಿ.

ಬೇಸಿಗೆಯಲ್ಲಿ ಹೀಗೆ ಮಾಡಬೇಡಿ

ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್‌ ಬಟ್ಟೆಧರಿಸಬಾರದು.
ಕುಷನ್‌ಯುಕ್ತ ಕುರ್ಚಿಯಲ್ಲಿ ಕೂರಬೇಡಿ.
ಬಾಯಾರಿಕೆಯಾದಾಗಲೆಲ್ಲ ಕಡ್ಡಾಯವಾಗಿ ನೀರನ್ನು ಕುಡಿಯಿರಿ.
ಸೋಡಾ, ಇತ್ಯಾದಿ ಕಾರ್ಬೋನೇಟೆಡ್‌ ತಂಪು ಪಾನೀಯಗಳನ್ನು ಕುಡಿಯಬೇಡಿ.
ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ.
ಕಾಫಿ, ಟೀ ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬೇಡಿ.
ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬೇಡಿ.
ಮಾಂಸಾಹಾರ ವರ್ಜಿಸಿ ಮತ್ತು ಮದ್ಯಪಾನ ನಿಷೇಧಿಸಿದೆ.

ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ, ಶೀತಲೀಕರಿಸಿದ ನೀರಿನಿಂದ ಒರೆಸಬೇಡಿ. ಇದರಿಂದ ವ್ಯಕ್ತಿಯ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ, ದೇಹದೊಳಗೆ ಬಂಧಿತವಾಗಿ ಆತನ ಅಂಗಾಂಗಳನ್ನು ನಿಷ್ಕ್ರೀರಯಗೊಂಡು ಹೆಚ್ಚಿನ ಹಾನಿಯಾಗಬಹುದು.

ವ್ಯಕ್ತಿ ತೊದಲು ತೊದಲಾಗಿ, ವಿಚಿತ್ರವಾಗಿ ಮಾತನಾಡಿದರೆ ಆತಂಕಪಡಬೇಡಿ. ಶಾಂತಿ, ಸಮಾಧಾನದಿಂದ ಶೀಘ್ರವಾಗಿ ಕ್ರಮ ಕೈಗೊಳ್ಳಿರಿ. ಸುಡು ಬಿಸಿಲಿನಲ್ಲಿ ಕಾಯಿಸಬೇಡಿ. ಈ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ.