ಸೈಬರ್ ಕೆಫೆ, ಕಾಫಿ ಕೆಫೆ ಗೊತ್ತು: ಆದರೆ ಕೀಟಗಳಿಗೂ ಕೆಫೆನಾ, ಏನಿದು 'ಇನ್‌ಸೆಕ್ಟ್ ಕೆಫೆ'
ಸೈಬರ್ ಕೆಫೆ, ಕಾಫಿ ಕೆಫೆ, ಆ ಕೆಫೆ... ಈ ಕೆಫೆ ಎಂದು ಬಗೆಬಗೆಯ ಕೆಫೆಗಳ ಬಗ್ಗೆ ಕೇಳಿರುತ್ತೀರಿ. ಆದರೆ, ಕೀಟ ಕೆಫೆ ಕುರಿತು ಕೇಳಿರುವಿರಾ? ಹೌದು, ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ‘ಕೀಟ ಕೆಫೆ’ಯೊಂದು ತಲೆ ಎತ್ತಿದ್ದು, ಶುಕ್ರವಾರ ಲಾಲ್‍ಬಾಗ್ ಬ್ಯಾಂಡ್ ಸ್ಟ್ಯಾಂಡ್ ಬಳಿ ತೋಟಗಾರಿಕೆ ನಿರ್ದೇಶಕ ಡಿ.ಎಸ್.ರಮೇಶ್ ಅವರು ಅನಾವರಣಗೊಳಿಸಿದರು.

ಬೆಂಗಳೂರು (ಅ.14): ಸೈಬರ್ ಕೆಫೆ, ಕಾಫಿ ಕೆಫೆ, ಆ ಕೆಫೆ... ಈ ಕೆಫೆ ಎಂದು ಬಗೆಬಗೆಯ ಕೆಫೆಗಳ ಬಗ್ಗೆ ಕೇಳಿರುತ್ತೀರಿ. ಆದರೆ, ಕೀಟ ಕೆಫೆ ಕುರಿತು ಕೇಳಿರುವಿರಾ? ಹೌದು, ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ‘ಕೀಟ ಕೆಫೆ’ಯೊಂದು ತಲೆ ಎತ್ತಿದ್ದು, ಶುಕ್ರವಾರ ಲಾಲ್‍ಬಾಗ್ ಬ್ಯಾಂಡ್ ಸ್ಟ್ಯಾಂಡ್ ಬಳಿ ತೋಟಗಾರಿಕೆ ನಿರ್ದೇಶಕ ಡಿ.ಎಸ್.ರಮೇಶ್ ಅವರು ಅನಾವರಣಗೊಳಿಸಿದರು.
ಕೀಟಗಳಿಗೆ ಸರ್ವ ರೀತಿಯಲ್ಲೂ ಪೂರಕವಾಗಿರಬಲ್ಲ ಹೊಸ ಪರಿಕಲ್ಪನೆಯಲ್ಲಿ ಈ ಕೀಟ ಕೆಫೆಯನ್ನು ನಿರ್ಮಿಸಲಾಗಿದೆ. ಹುಲ್ಲು, ಗಿಡಗಳ ನಡುವೆ, ಎಲೆಗಳ ಮರೆಯಲ್ಲಿ, ಮರಗಳ ರಂಧ್ರ, ಪೊಟರೆಯಲ್ಲಿ ವಾಸವಾಗಿರುವ ದುಂಬಿ, ಕೀಟ ಇತ್ಯಾದಿಗಳಿಗಾಗಿ ಕೀಟ ಕೆಫೆ ಮೂಲ ಆಶ್ರಯ ತಾಣವಾಗಲಿದೆ. ನಗರೀಕರಣದ ದೆಸೆಯಿಂದ ಪ್ರಕೃತಿ ದತ್ತವಾಗಿದ್ದ ಹಸಿರು ತಾಣಗಳು, ಹುಲ್ಲುಗಾವಲು ಮರೆಯಾಗುತ್ತಿದ್ದು, ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೀಟ ಕೆಫೆ ತಲೆ ಎತ್ತಿದೆ.
ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಬಿಜೆಪಿ ಕೊಟ್ಟ ಅನುದಾನವೆಷ್ಟು: ಸಚಿವ ರಾಮಲಿಂಗಾರೆಡ್ಡಿ
ಏನಿದು ಕೀಟ ಕೆಫೆ: ಮರದ ಫ್ರೇಮ್‍ಗಳಿಂದ ಸಣ್ಣ ಮನೆಯಾಕಾರದಲ್ಲಿ ವಿನ್ಯಾಸಗೊಳಿಸಿ ಅದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ನಾನಾ ರೀತಿಯ ಸಸ್ಯಗಳ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಟಿಕೊಂಡಿರುವಂತೆ ಜೋಡಿಸಿ ಭದ್ರಪಡಿಸಿ, ವೇದಿಕೆ ಸಿದ್ಧಪಡಿಸಲಾಗಿದೆ. ಈ ರಚನೆಯು ಎಲ್ಲ ಬಗೆಯ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಕಲ್ಪಿಸಿ, ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಕಾರಣವಾಗಲಿದೆ.
ಕೀಟ-ದುಂಬಿಗಳಿಗೆ ಸರ್ವ ರೀತಿಯಲ್ಲಿಯೂ ಸಹಾಯಕಾರಿ ಆಗುವಂತೆ ಒಣ ಮರ ಕೊರೆಯುವ ದುಂಬಿ ಪ್ರಬೇಧಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಪೆಂಟರ್ ಬೀ, ಬಿಂಬಲ್ ಬೀ ಇತ್ಯಾದಿ ಪ್ರಭೇದಗಳಲ್ಲಿ ಪ್ರಮುಖವಾದವುಗಳು. ಗೂಡು ಕಟ್ಟಿ ಜೇನು ಸಂಗ್ರಹಿಸುವ ದುಂಬಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಒಂಟಿ-ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಅವು ಗೂಡು ಕಟ್ಟುವುದರ ಬದಲು ಒಂಟಿಯಾಗಿ ಒಣ ಮರ ಕೊರೆದು ರಂದ್ರ ಮಾಡಿ ಅಲ್ಲೇ ಬದುಕುತ್ತವೆ.
ಹಿಂದೂಗಳ ಹತ್ಯೆ ಕಂಡು ಹೊಟ್ಟೆ ಉರಿಯುತ್ತಿದೆ: ಕೆ.ಎಸ್.ಈಶ್ವರಪ್ಪ
50ಕ್ಕೂ ಹೆಚ್ಚು ಕೀಟ ಕೆಫೆ ಗುರಿ: ಮುಂದಿನ ದಿನಗಳಲ್ಲಿ ಕಬ್ಬನ್ ಉದ್ಯಾನವನ, ನಂದಿ ಗಿರಿಧಾಮ, ಕೃಷ್ಣರಾಜೇಂದ್ರ ಗಿರಿಧಾಮ, ರಾಜ್ಯವ್ಯಾಪ್ತಿಯ ಎಲ್ಲಾ ಹೊಸ ಸಸ್ಯಶಾಸ್ತ್ರೀಯ ತೋಟಗಳಲ್ಲಿಯೂ ಈ ಹೊಸ ಪರಿಕಲ್ಪನೆಯಡಿ 50ಕ್ಕೂ ಹೆಚ್ಚು ಇನ್‍ಸೆಕ್ಟ್ ಕೆಫೆಗಳನ್ನು ನಿರ್ಮಿಸಲು ಚಿಂತಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ (ಉದ್ಯಾನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಜಂಟಿ ನಿರ್ದೇಶಕ ಡಾ। ಎಂ. ಜಗದೀಶ್ ತಿಳಿಸಿದರು. ವಿಭಿನ್ನ ಇಂಡಿಯಾ ಫೌಂಡೇಷನ್ (ವಿಭಿನ್ನ) ಸಂಸ್ಥೆಯ ಸಿಇಒ ಆಗಿರುವ ಡೇವಿಡ್ ಕುಮಾರ್ ಅವರು ಸಾರ್ವಜನಿಕ ಸಹಭಾಗಿತ್ವದಡಿ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಕವಾಗಿ ಒಂದು ಇನ್‍ಸೆಕ್ಟ್ ಕೆಫೆ ಲಾಲ್‍ಬಾಗ್‍ನಲ್ಲಿ ಸ್ಥಾಪಿಸಿದ್ದಾರೆ.