ಧಾರವಾಡ(ಜ.26): ಮರದ ಮೇಲಿಂದ ಹಾರಿ ವಿಚಾರಣಾಧೀನ ಕೈದಿಯೊಬ್ಬ ಸಾವನ್ನಪ್ಪಿದ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತ ಕೈದಿಯನ್ನ ಚೇತನ್‌ಕುಮಾರ(29) ಎಂದು ಗುರುತಿಸಲಾಗಿದೆ.

ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ವಿಚಾರಣಾಧೀನ ಕೈದಿ ಚೇತನ್ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದವನಾಗಿದ್ದಾನೆ. 2015 ರಲ್ಲಿ ಅತ್ಯಾಚಾರದ ಆರೋಪದಲ್ಲಿ ಚೇತನ್ ಬಂಧಿತನಾಗಿದ್ದ. ಚೇತನ್ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಎಂದ ಆರೋಪಿಸಲಾಗಿತ್ತು. 

ಆರೋಪಿ ಚೇತನ್‌ಗೆ ಜಿಲ್ಲಾ ನ್ಯಾಯಾಲಯದಲ್ಲಿ 10 ವರ್ಷ ಶಿಕ್ಷೆಯಾಗಿತ್ತು. ಈ ತೀರ್ಪು ಪ್ರಶ್ನಿಸಿ ಆರೋಪಿ ಚೇತನ್‌ ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದನು. ಕಳೆದ ಐದು ವರ್ಷಗಳಿಂದ ಜೈಲಿನಲ್ಲಿದ್ದ. ಆರೋಪಿ ಚೇತನ್‌ನನ್ನು ಬಳ್ಳಾರಿ ಜೈಲಿನಿಂದ ಆರು ತಿಂಗಳ ಹಿಂದೆ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದ. 

ಗುಣಮಟ್ಟದ ಊಟಕ್ಕಾಗಿ ಆಗ್ರಹ: ತೆಂಗಿನ ಮರ ಏರಿ ಕುಳಿತ ವಿಚಾರಣಾಧೀನ ಕೈದಿ 

ಮೃತ ಕೈದಿ ಚೇತನ್‌ ಕಳೆದ ವಾರವೂ ತೆಂಗಿನ ಮರವೇರಿ ಕುಳಿತಿದ್ದ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಗುಣಮಟ್ಟದ ಆಹಾರ ನೀಡಬೇಕು ಎಂದು ಆಗ್ರಹಿಸಿ ಚೇತನ್‌ ತೆಂಗಿನ ಮರವೇರಿ ಪ್ರತಿಭಟನೆ ನಡೆಸಿದ್ದನು. ಇಂದೂ ಸಹ ತೆಂಗಿನ ಮರವೇರಿದ್ದ ಚೇತನ್ ಮೇಲಿನಿಂದ ಜಿಗಿದು ಸಾವನ್ನಪ್ಪಿದ್ದಾನೆ. ತಲೆಗೆ ತೀವ್ರ ತೆರನಾದ ಪೆಟ್ಟಾಗಿತ್ತು. ತಕ್ಷಣ ಅವನನ್ನ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. 

ಕೈದಿ ಸಾವನ್ನಪ್ಪಿದ ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿದ ಜೈಲು ಕಾರಾಗೃಹ ಅಧೀಕ್ಷಕಿ ಡಾ.ಅನಿತಾ ಆರ್ ಅವರು, ಇಂದು ಜೈಲಿನಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೆವು. ಈ ವೇಳೆ ಆರೋಪಿ‌ ಚೇತನ ಮರವೇರಿದ್ದನು. ಮರ ಏರುವುದರಲ್ಲಿ ಆತ ಎಕ್ಸ್ಪರ್ಟ್ ಇರಬೇಕು, ಈ ಹಿಂದೆ ಕೂಡ ಚೇತನ ಮರವೇರಿದ್ದ. ಆದರೆ, ಇಂದು ಮರವೇರಿದ್ದ ಆರೋಪಿ ತೆಂಗಿನ ಮರದಿಂದ ಜಿಗಿದು ಸಾವನ್ನಪ್ಪಿದ್ದಾನೆ. ಇವತ್ತು ಗಣರಾಜ್ಯೋತ್ಸವಕ್ಕೆ ಎಲ್ಲರನ್ನು ಹೊರ ಬಿಡಲಾಗಿತ್ತು, ಈ‌ ವೇಳೆ ಮರವೇರಿ ಕೆಳಗೆ ಚೇತನ್ ಕೆಳಗೆ ಬಿದ್ದಿದ್ದಾನೆ. ತಕ್ಷಣ ಚೇತನ್‌ನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.