ಎಚ್ಡಿಕೆ ಕುಟುಂಬದಿಂದ ಸಾಗುವಳಿದಾರರಿಗೆ ಅನ್ಯಾಯ : ಶಾಸಕ ಇಕ್ಬಾಲ್ ಹುಸೇನ್
ಸರ್ಕಾರಿ ಜಮೀನುಗಳಲ್ಲಿ 25 -30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರ ಸಾವಿರಾರು ಅರ್ಜಿಗಳನ್ನು ಈ ಹಿಂದೆ ಶಾಸಕರಾಗಿದ್ದ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಸಮರ್ಪಕವಾಗಿ ವಿಲೇವಾರಿ ಮಾಡದೆ ಅನ್ಯಾಯ ಮಾಡಿದ್ದಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಟೀಕಿಸಿದರು.
ರಾಮನಗರ : ಸರ್ಕಾರಿ ಜಮೀನುಗಳಲ್ಲಿ 25 -30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರ ಸಾವಿರಾರು ಅರ್ಜಿಗಳನ್ನು ಈ ಹಿಂದೆ ಶಾಸಕರಾಗಿದ್ದ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಸಮರ್ಪಕವಾಗಿ ವಿಲೇವಾರಿ ಮಾಡದೆ ಅನ್ಯಾಯ ಮಾಡಿದ್ದಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಟೀಕಿಸಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬಗರ್ ಹುಕುಂ ಸಾಗುವಳಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ತಾಲೂಕಿನ ಕಸಬಾ ಮತ್ತು ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ ಕಳೆದ 19 ವರ್ಷಗಳಲ್ಲಿ ಸ್ವೀಕೃತವಾದ ಸಾವಿರಾರು ಅರ್ಜಿಗಳಲ್ಲಿ ಕೇವಲ 7 ಅರ್ಜಿಗಳಷ್ಟೇ ವಿಲೇವಾರಿ ಆಗಿವೆ. ಇದು ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೆ ರೈತರ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.
ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವಂತೆ ಕೋರಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ನಮೂನೆ 50 ಮತ್ತು ನಮೂನೆ 53ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗಿಲ್ಲ. ಇನ್ನು ನಮೂನೆ 57ರ ಅಡಿಯಲ್ಲಿ 2499 ಅರ್ಜಿಗಳು ಬಂದಿದ್ದು, ಇದರಲ್ಲಿ 1564 ಅರ್ಜಿಗಳು ತಿರಸ್ಕೃತವಾಗಿವೆ. ಬಾಕಿ ಉಳಿದಿರುವ 935 ಅರ್ಜಿಗಳ ಪೈಕಿ 355 ಅರ್ಜಿಗಳು ಜಿಲ್ಲಾಕಾರಿಗಳಿಗೆ ರವಾನೆಯಾಗಿದ್ದರೆ, 580 ಅರ್ಜಿಗಳು ಬಾಕಿ ಉಳಿದಿವೆ ಎಂದು ಹೇಳಿದರು.
ನಾನು ಮೊದಲ ಬಾರಿ ಬಗರ್ ಹುಕುಂ ಸಾಗುವಳಿಯ ಸಭೆ ನಡೆಸಿದಾಗ ಈ ಎಲ್ಲ ಸಾಗುವಳಿ ಅರ್ಜಿಗಳನ್ನು ಪುನರ್ ಪರಿಶೀಲನೆಯ ನೆಪವೊಡ್ಡಿ ತಡೆ ಹಿಡಿದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಈ ಹಿಂದೆ ಶಾಸಕರಾಗಿದ್ದ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿರವರು ಬಗರ್ ಹುಕುಂ ಸಾಗುವಳಿ ಸಭೆಗಳನ್ನೇ ನಡೆಸದೆ ಲೋಪ ಎಸಗಿದ್ದಾರೆ ಎಂದು ದೂರಿದರು.
ಶಾಸಕರಾಗಿದ್ದಾಗ ಕುಮಾರಸ್ವಾಮಿರವರು 14 ವರ್ಷಗಳಲ್ಲಿ 3ರಿಂದ 4 ಸಭೆ ನಡೆಸಿದ್ದರೆ, 2 ಸಭೆಯಲ್ಲಿ ಮಾತ್ರ ಸಹಿ ಹಾಕಿದ್ದಾರೆ. 2018-19ರಲ್ಲಿ ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ 5 ವರ್ಷಗಳ ಅವಧಿಯಲ್ಲಿ 1 ಬಾರಿ ಮಾತ್ರ ಸಭೆ ನಡೆಸಿ, 7 ಮಂದಿಗೆ ಸಾಗುವಳಿ ಚೀಟಿ ವಿತರಣೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಅಧಿಕಾರಿಗಳು ಪುನರ್ ಪರಿಶೀಲನೆಯ ನೆಪವೊಡ್ಡಿ ಸಾವಿರಾರು ಸಾಗುವಳಿ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಜಮೀನು ಸಿಗುವ ಆಸೆಯಲ್ಲಿ ಇದ್ದರು. ಹಿಂದಿನ ಶಾಸಕರು ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿಲ್ಲ. ತಾವು ಸಾಗುವಳಿದಾರರಿಗೆ ಅನ್ಯಾಯವಾಗದಂತೆ ಕಾನೂನು ಚೌಕಟ್ಟಿನಲ್ಲಿ ಸಾಗುವಳಿ ಚೀಟಿ ವಿತರಣೆಗೆ ಕ್ರಮ ವಹಿಸುವುದಾಗಿ ಹೇಳಿದರು.
ಸಾಗುವಳಿಗಾಗಿ ನಮೂನೆ 50, ನಮೂನೆ 53 ಹಾಗೂ ನಮೂನೆ 57ರಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಿ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ ವಸ್ತು ಸ್ಥಿತಿ ಅರಿಯುವ ಕೆಲಸ ಮಾಡುತ್ತೇವೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯರಾದ ಸೌಭಾಗ್ಯಮ್ಮ, ಯಲಚವಾಡಿ ರಾಮಕೃಷ್ಣ ಇದ್ದರು.
ಮುಂದಿನ ದಿನಗಳಲ್ಲಿ ರೈತರು, ಬಡವರ ಕಷ್ಟ ಸುಖ ಆಲಿಸಲು ಪ್ರತಿ ಮಂಗಳವಾರ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಜರುಗಲಿದ್ದು, ಆಯಾಯ ಇಲಾಖೆ ಅಧಿಕಾರಿಗಳಿಂದಲೇ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು. ಕಂದಾಯ, ಆರೋಗ್ಯ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು.
-ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ
ಭೂ ಕಂದಾಯ ಕಾಯ್ದೆಯಲ್ಲಿ ಏನಿದೆ ?
ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವಂತೆ ಕೋರಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ನಮೂನೆ 50, ನಮೂನೆ 53 ಹಾಗೂ ನಮೂನೆ 57ರ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಾಥಮಿಕ ಹಂತದ ಪರಿಶೀಲನೆ ಪೂರ್ಣಗೊಳಿಸಿ ಅರ್ಜಿಗಳನ್ನು ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸಬೇಕು. ಸಮಿತಿಯು ಗುರುತಿಸಿದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಬೇಕು. ಹಾಗೊಂದು ವೇಳೆ ಅನರ್ಹ ಅರ್ಜಿಗಳಿದ್ದರೆ ಅಂತಹ ಅರ್ಜಿದಾರರ ವಶದಲ್ಲಿರುವ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅನಧಿಕೃತ ಸಾಗುವಳಿಯನ್ನು ಬಗರ್ ಹುಕುಂ ಅಡಿಯಲ್ಲಿ ಸಕ್ರಮಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕೃತವಾದರೆ ಅಂತಹ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕು ಎಂಬ ಅಂಶ ಭೂ ಕಂದಾಯ ಕಾಯ್ದೆಯಲ್ಲೇ ಇದೆ.
ಗೋಮಾಳ, ಮೀಸಲು ಅರಣ್ಯ, ದೇವರ ಕಾಡು, ಗುಂಡು ತೋಪು, ಕೆರೆಯಂಗಳ, ಫೂಟ್ ಖರಾಬು, ಸ್ಮಶಾನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶ ಇಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಿ ಆ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ನಮೂನೆ - 57ರ ಅರ್ಜಿಗಳ ವಿವರ
ಹೋಬಳಿ ಸ್ವೀಕೃತ ಅರ್ಜಿಗಳು ತಿರಸ್ಕೃತ ಅರ್ಜಿಗಳು ಬಾಕಿ ಅರ್ಜಿಗಳು
ಕಸಬಾ 1449 957 492
ಕೈಲಾಂಚ 1050 607 443
ಒಟ್ಟು 2499 1564 935
25ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿ ಸಭೆ ನಡೆಯಿತು.