Asianet Suvarna News Asianet Suvarna News

ಆಹಾರವಿಲ್ಲದೆ ನಡು ರಸ್ತೆಯಲ್ಲೇ ಪ್ರಾಣಬಿಟ್ಟ ಚಿರತೆ

ಆಹಾರವಿಲ್ಲದೆ ನಿತ್ರಾಣಗೊಂಡು ನಡು ರಸ್ತೆಯಲ್ಲೇ ಸಾವು| ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಸಮೀಪದ ಕಡವಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ| ವೈದ್ಯಕೀಯ ತಪಾಸಣೆ ನಂತರ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸಿದ ಅರಣ್ಯ ಇಲಾಖೆ| 

Injured Leopard Dies at Hosadurga in Chitradurga grg
Author
Bengaluru, First Published Jan 25, 2021, 9:34 AM IST

ಹೊಸದುರ್ಗ(ಜ.25):  ಬೇಟೆಯಾಡುವ ವೇಳೆ ಗಾಯಗೊಂಡಿದ್ದ ಚಿರತೆಯೊಂದು ಆಹಾರವಿಲ್ಲದೆ ನಿತ್ರಾಣಗೊಂಡು ನಡು ರಸ್ತೆಯಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ತಾಲೂಕಿನ ಶ್ರೀರಾಂಪುರ ಸಮೀಪದ ಕಡವಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಸಾವನ್ನಪ್ಪಿರುವ ಚಿರತೆ ಸುಮಾರು ಒಂದೂವರೆ ವರ್ಷದ್ದಾಗಿದ್ದು, ಕಾಡಿನಲ್ಲಿ ಆಹಾರಕ್ಕಾಗಿ ಬೇಟೆಯಾಡುವ ಸಮಯದಲ್ಲಿ ನೆಗೆದು ಒಣಗಿದ ಮರದ ಕಟ್ಟಿಗೆಯಿಂದ ಗಂಟಲಿಗೆ ಗಾಯ ಮಾಡಿಕೊಂಡಿರಬಹುದು ಇಲ್ಲವೇ ಯಾವುದಾದರೂ ಪ್ರಾಣಿ ತಿವಿದು ಗಾಯಗೊಳಿಸಿರಬಹುದೆಂದು ಶಂಕಿಸಲಾಗಿದೆ.

ಗಂಗಾವತಿ: ಅಡುಗೆಭಟ್ಟನನ್ನ ತಿಂದು ತೇಗಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ಚಿರತೆ ಗಾಯಗೊಂಡು ಸುಮಾರು ನಾಲ್ಕೈದು ದಿನಗಳಾಗಿದ್ದು, ಇಂದು ಬೆಳಗ್ಗೆ ನಿತ್ರಾಣಗೊಂಡು ಕಡವಿಗೆರೆ ವಜ್ರದಲ್ಲಿರುವ ಸಸ್ಯಕ್ಷೇತ್ರದ ಸಮೀಪವಿರುವ ಶ್ರೀರಾಂಪುರ- ಕಂಚೀಪುರ ರಸ್ತೆಗೆ ನರಳುತ್ತಾ ಬಂದಿದ್ದು, ನಡು ರಸ್ತೆಯಲ್ಲೇ ಪ್ರಾಣಬಿಟ್ಟಿದೆ. ಈ ವೇಳೆ ಸಸ್ಯ ಕ್ಷೇತ್ರದ ಸಿಬ್ಬಂದಿ ಚಿರತೆ ಮಲಗಿರುವುದನ್ನು ಗಮನಿಸಿ ಗಾಬರಿಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಚಿರತೆ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ. ಆದರೆ, ಚಿರತೆ ಪ್ರತಿರೋಧ ವ್ಯಕ್ತಪಡಿಸದೆ ಇರುವುದನ್ನು ಗಮಿನಿಸಿದ ಸಿಬ್ಬಂದಿ ಹತ್ತಿರ ಹೋಗಿ ನೋಡಿದಾಗ ಚಿರತೆ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಯೋಗೀಶ್‌ ತಿಳಿಸಿದರು.

ಚಿರತೆಯ ಶವವನ್ನು ಹೊಸದುರ್ಗಕ್ಕೆ ತೆಗೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಂತರ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸಲಾಯಿತು. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲಕಂಠಪ್ಪ, ವಲಯ ಅರಣ್ಯಾಧಿಕಾರಿ ಸುಜಾತ, ಉಪ ವಲಯ ಅರಣ್ಯಾಧಿಕಾರಿ ಯೋಗೇಶ್‌, ವನಪಾಲಕ ಹರೀಶ್‌ ಹಾಗೂ ಸಿಬ್ಬಂದಿ ಇದ್ದರು.
 

Follow Us:
Download App:
  • android
  • ios