ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. 

ದೊಡ್ಡಬಳ್ಳಾಪುರ (ಜ.02): ಇನ್ಫೋಸಿಸ್ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್)ಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿಎಸ್ಆರ್ ಅನುದಾನದಡಿ ಸರ್ಕಾರಿ ಶಾಲಾ ಕಟ್ಟಡಗಳ ಅಭಿವೃದ್ಧಿ ಪಡಿಸುವ ಸಲುವಾಗಿ ಚರ್ಚಿಸಲು ನಡೆದ ಸಭೆಯಲ್ಲಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಮೂಲ ಸೌಕರ್ಯ, ಲ್ಯಾಬ್ ವ್ಯವಸ್ಥೆ, ಗ್ರಂಥಾಲಯ, ಆಟದ ಮೈದಾನ ಮತ್ತು ಶಿಕ್ಷಕರನ್ನು ಒದಗಿಸುವುದಾಗಿ ಸಂಸ್ಥೆ ಹೇಳಿದೆ. ಮೊದಲ ಹಂತದಲ್ಲಿ ದೇವನಹಳ್ಳಿ ತಾಲೂಕಿನ 33 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಳಿಕ ಹಂತ ಹಂತವಾಗಿ ಇನ್ನುಳಿದ ಮೂರು ತಾಲೂಕುಗಳ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಂಸ್ಥೆ ರೂಪುರೇಷೆ ಸಿದ್ದಪಡಿಸಿದೆ ಎಂದು ಹೇಳಿದರು. ಸಿಎಸ್ಆರ್ ಅನುದಾನದಡಿ ನಿರ್ಮಾಣಗೊಳ್ಳಲಿರುವ ಶಾಲಾ ಕಟ್ಟಡಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಸಾಕಷ್ಟು ವರ್ಷ ಕಟ್ಟಡ ಬಾಳಿಕೆ ಬರಬೇಕು. ಆ ರೀತಿಯಲ್ಲಿ ಯೋಜನೆ ರೂಪಿಸಿ ಶಾಲಾ ಕಟ್ಟಡ ನಿರ್ಮಾಣ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಮಾನತೆ ಕಾಣಬೇಕಾದರೆ ಒಳ ಮೀಸಲಾತಿ ಅನಿವಾರ್ಯವಾಗಿ ಜಾರಿಯಾಗಬೇಕು: ಸಚಿವ ಮುನಿಯಪ್ಪ ಮನವಿ

ಜಿಲ್ಲೆಯಲ್ಲಿ ಸಾಕಷ್ಟು ರೈತರು ಕೈಗಾರಿಕಾ ಪ್ರದೇಶದಿಂದ ಕೃಷಿಭೂಮಿ ಕಳೆದುಕೊಂಡಿದ್ದಾರೆ. ಆ ರೈತ ಕುಟುಂಬಗಳುಈಗ ಕೈಗಾರಿಕೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವುದು ವಾಸ್ತವ. ಅಂತಹ ಪರಿಸ್ಥಿತಿ ಮುಂದಿನ ಪೀಳಿಗೆಯ ಮಕ್ಕಳಿಗೆ ಬರಬಾರದು. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಬಡತನದಿಂದ ಬೆಳೆದ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆಯಲು ಸಹಕಾರಿ ಆಗಬೇಕು. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಮರಳಿ ಸರ್ಕಾರಿ ಶಾಲೆಗಳತ್ತ ಬರಬೇಕು ಎಂಬುದು ನನ್ನ ಆಶಯ. ಕೆಪಿಎಸ್ ಶಾಲೆಗಳನ್ನು ಸಹ ಉನ್ನತ

ಶ್ರೇಣಿಯಲ್ಲಿ ನವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಬಳಸಿಕೊಳ್ಳಲು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಪ್ರತಿಷ್ಠೆಗೋ, ಇಂಗ್ಲಿಷ್‌ ವ್ಯಾಮೋಹಕ್ಕೋ ಬಿದ್ದು ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಹಾಳು ಮಾಡಬೇಡಿ. ಸರ್ಕಾರದ ಸೌಲಭ್ಯಗಳ ಸೂಕ್ತ ಮಾಹಿತಿ ಅರಿವು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಸಹಕರಿಸಬೇಕು. ಎಲ್ಲವನ್ನು ಸರ್ಕಾರದ ಮೇಲೆಯೇ ಹೊರೆಸಿ ಕೂರಬಾರದು. ಕೆಲವು ಯೋಜನೆಗಳಿಗೆ ಗ್ರಾಮಸ್ಥರ ಸಹಕಾರ ತುಂಬಾ ಮುಖ್ಯ ಎಂದು ಹೇಳಿದರು.

ಪ್ರವಾಸಿ ತಾಣವಾಗಿ ಇತಿಹಾಸ ಪ್ರಸಿದ್ದ ತಲಕಾಯಲಬೆಟ್ಟ: ಸಚಿವ ಮುನಿಯಪ್ಪ ಭರವಸೆ

ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್‌ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಷ್ಟೇ ಮುಖ್ಯ. ಶಾಲೆಗಳಿಗೆ ಕೌಶಲ್ಯಾಧಾರಿತ ಶಿಕ್ಷಕರನ್ನು ನೇಮಿಸುವುದರೊಂದಿಗೆ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ , ಇನ್ಫೋಸಿಸ್ ಸಂಸ್ಥೆ ಅಧಿಕಾರಿ ಗಗನ್ ಮಟ್ಟಿ ಹಾಗೂ ತಂಡ, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.