Asianet Suvarna News Asianet Suvarna News

Mandya: ಚುನಾವಣಾ ಯಾತ್ರೆಯಾದ ಧರ್ಮಸ್ಥಳ ಯಾತ್ರೆ: ಜೆಡಿಎಸ್‌ನಲ್ಲೇ ಧಾರ್ಮಿಕ ಯಾತ್ರೆಗೆ ಪೈಪೋಟಿ

ಕ್ಷೇತ್ರದ ಮತದಾರರನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯುವ ಮೂಲಕ ಭಾವನಾತ್ಮಕವಾಗಿ ಅವರ ಮನಸ್ಸನ್ನು ಗೆಲ್ಲುವ ಕಸರತ್ತಿಗೆ ಮುಂದಿನ ಚುನಾವಣಾ ಟಿಕೆಟ್‌ ಆಕಾಂಕ್ಷಿಗಳು ಇಳಿದಿದ್ದಾರೆ. ಧಾರ್ಮಿಕ ಯಾತ್ರೆ ಇದೀಗ ಚುನಾವಣಾ ಯಾತ್ರೆಯಾಗಿ ಪರಿವರ್ತನೆಗೊಂಡಿದ್ದು, ಜೆಡಿಎಸ್‌ನಲ್ಲೇ ತೀವ್ರ ಪೈಪೋಟಿ ಶುರುವಾಗಿದೆ.

Dharamsthala Yatra which turned into an election yatra in Mandya gvd
Author
First Published Sep 17, 2022, 12:28 AM IST

ಮಂಡ್ಯ ಮಂಜುನಾಥ

ಮಂಡ್ಯ (ಸೆ.17): ಕ್ಷೇತ್ರದ ಮತದಾರರನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯುವ ಮೂಲಕ ಭಾವನಾತ್ಮಕವಾಗಿ ಅವರ ಮನಸ್ಸನ್ನು ಗೆಲ್ಲುವ ಕಸರತ್ತಿಗೆ ಮುಂದಿನ ಚುನಾವಣಾ ಟಿಕೆಟ್‌ ಆಕಾಂಕ್ಷಿಗಳು ಇಳಿದಿದ್ದಾರೆ. ಧಾರ್ಮಿಕ ಯಾತ್ರೆ ಇದೀಗ ಚುನಾವಣಾ ಯಾತ್ರೆಯಾಗಿ ಪರಿವರ್ತನೆಗೊಂಡಿದ್ದು, ಜೆಡಿಎಸ್‌ನಲ್ಲೇ ತೀವ್ರ ಪೈಪೋಟಿ ಶುರುವಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಶ್ರೀ ಶಂಭು ಸೇವಾ ಟ್ರಸ್ಟ್‌ ವತಿಯಿಂದ ಪ್ರಥಮ ಬಾರಿಗೆ ಶ್ರೀ ಧರ್ಮಸ್ಥಳ ಯಾತ್ರೆಗೆ ಚಾಲನೆ ನೀಡಿದರು. ಈ ಯಾತ್ರೆಗೆ ಕ್ಷೇತ್ರದ ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೆ, ಹೊಸ ಟ್ರೆಂಡ್‌ ಸೃಷ್ಟಿಮಾಡಿತು. ಸಕಲ ವ್ಯವಸ್ಥೆಗಳನ್ನೂ ಮಾಡಿಕೊಟ್ಟು ಉಚಿತವಾಗಿ ದೇವರ ದರ್ಶನ ಮಾಡಿಸುವುದರೊಂದಿಗೆ ಜನರ ಮನಸ್ಸನ್ನು ತಮ್ಮತ್ತ ಸೆಳೆಯಲು ಜಿದ್ದಾಜಿದ್ದಿನ ಪ್ರಯತ್ನ ನಡೆಸಿದ್ದಾರೆ.

ಈಗಾಗಲೇ ಬಿ.ಆರ್‌.ರಾಮಚಂದ್ರು 30 ಬಸ್‌ಗಳಲ್ಲಿ ಕ್ಷೇತ್ರದ ಮತದಾರರನ್ನು ಶ್ರೀಧರ್ಮಸ್ಥಳ, ಶ್ರೀಕುಕ್ಕೆ ಸುಬ್ರಹ್ಮಣ್ಯ, ಶ್ರೀಸೌತಡ್ಕ ಗಣೇಶನ ದರ್ಶನ ಮಾಡಿಸಿದ್ದಾರೆ. ದೇವರ ಹೆಸರಿನಲ್ಲಿ ಗ್ರಾಮೀಣ ಭಾಗದ ಜನರನ್ನು ಓಲೈಸಿಕೊಳ್ಳುವ ಪ್ರಯತ್ನದಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸನ್ನು ಸಾಧಿಸಿರುವಂತೆ ಕಂಡುಬಂದಿದ್ದಾರೆ. ಶ್ರೀಧರ್ಮಸ್ಥಳ ಯಾತ್ರೆಗೆ ನಗರ ಸೇರಿದಂತೆ ಗ್ರಾಮೀಣ ಜನರು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದಾರೆ. ಈ ಧಾರ್ಮಿಕ ಯಾತ್ರೆ ಚುನಾವಣಾ ತಂತ್ರಗಾರಿಕೆಯ ಒಂದು ಭಾಗವಾಗಿಯೂ ಕಂಡುಬರುತ್ತಿದೆ.

ಸಮಾಜ ಸುಧಾರಣೆಗೆ ಮಹಿಳೆಯರ ಪಾತ್ರ ಅಪಾರ: ಸಂಸದೆ ಸುಮಲತಾ

ಇದೀಗ ಜೆಡಿಎಸ್‌ನಿಂದ ಮತ್ತೋರ್ವ ಟಿಕೆಟ್‌ ಆಕಾಂಕ್ಷಿಯಾಗಿರುವ ಶಾಸಕ ಎಂ.ಶ್ರೀನಿವಾಸ್‌ ಅಳಿಯ ಎಚ್‌.ಎನ್‌.ಯೋಗೇಶ್‌ ಕೂಡ ಮತದಾರರನ್ನು ಶ್ರೀ ಧರ್ಮಸ್ಥಳ ಯಾತ್ರೆಗೆ ಕಳುಹಿಸಿದ್ದಾರೆ. ಒಂದೇ ದಿನ ಹತ್ತು ಬಸ್ಸು ಹಾಗೂ ಏಳು ಕಾರುಗಳಲ್ಲಿ ಮತದಾರರನ್ನು ಯಾತ್ರೆಗೆ ಕರೆದೊಯ್ದಿದ್ದಾರೆ. ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಯಾತ್ರೆ ಸಂಚರಿಸುವ ಮಾರ್ಗದಲ್ಲೇ ಯೋಗೇಶ್‌ ಕೂಡ ಮತದಾರರನ್ನು ಕರೆತಂದು ದೇವರ ದರ್ಶನ ಮಾಡಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತರಲ್ಲೇ ಧಾರ್ಮಿಕ ಯಾತ್ರೆಗೆ ಬಿರುಸಿನ ಪೈಪೋಟಿ ನಡೆದಿದೆ.

ಶಾಸಕ ಎಂ.ಶ್ರೀನಿವಾಸ್‌ ಹೆಸರಿನಲ್ಲಿ ಶ್ರೀ ಧರ್ಮಸ್ಥಳ ಯಾತ್ರೆ ಆರಂಭಿಸಿರುವ ಎಚ್‌.ಎನ್‌.ಯೋಗೇಶ್‌ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಕ್ಷೇತ್ರದಲ್ಲಿ ಮಾವನಿಗಿರುವ ಜನಬೆಂಬಲವನ್ನು ತಮ್ಮತ್ತ ಸೆಳೆಯುವ ಸಲುವಾಗಿ ಯಾತ್ರೆಗೆ ಅವರ ಹೆಸರನ್ನೇ ಇಟ್ಟಿದ್ದಾರೆ. ಮತದಾರರನ್ನು ಸೆಳೆಯುವುದಕ್ಕೆ ಇದೊಂದು ತಂತ್ರವಾಗಿದೆ. ಎಂ.ಶ್ರೀನಿವಾಸ್‌ ಮೇಲೆ ಅಭಿಮಾನ, ವಿಶ್ವಾಸವಿಟ್ಟವರು ಅದೇ ಅಭಿಮಾನ, ವಿಶ್ವಾಸವನ್ನು ಅಳಿಯನ ಮೇಲೆ ತೋರ್ಪಡಿಸುವರೇ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಯಾತ್ರೆಗೆ ಸುಗ್ಗಿ ಕಾಲ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಆರಂಭಗೊಂಡಿರುವ ಧಾರ್ಮಿಕ ಯಾತ್ರೆ ಹೆಚ್ಚು ಜನಪ್ರಿಯಗೊಂಡಿದೆ. ದಿನೇ ದಿನೇ ಯಾತ್ರೆಗೆ ಮತದಾರರಿಂದ ಬೇಡಿಕೆ ಹೆಚ್ಚುತ್ತಿದೆ. ಆಕಾಂಕ್ಷಿಗಳು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗದಷ್ಟುಸಂಖ್ಯೆಯಲ್ಲಿ ಜನರು ಯಾತ್ರೆಗೆ ರೆಡಿಯಾಗುತ್ತಿದ್ದಾರೆ. ಉಚಿತ ಯಾತ್ರೆಗೆ ಬರುವವರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಒಂದು ಕುಟುಂಬದ ಇಬ್ಬರು ಅಥವಾ ಮೂವರು ಶ್ರೀ ಸೌತಡ್ಕ ಗಣೇಶ ದೇವಸ್ಥಾನ, ಶ್ರೀ ಧರ್ಮಸ್ಥಳ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆ ಹೋಗಿ ಬರಬೇಕೆಂದರೆ ಕನಿಷ್ಠ 10 ಸಾವಿರ ರು.ನಿಂದ 15 ಸಾವಿರ ರು. ಖರ್ಚಾಗುತ್ತದೆ. ಯಾವುದೇ ಖರ್ಚಿಲ್ಲದೆ, ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟು ಮನೆ ಬಾಗಿಲಿಗೆ ಬಂದು ಧಾರ್ಮಿಕ ಯಾತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ. ನಾ ಮುಂದು ತಾ ಮುಂದು ಎಂದು ಯಾತ್ರೆಗೆ ಜನರು ಮುಗಿ ಬೀಳುತ್ತಿದ್ದಾರೆ. ಇದರಿಂದ ಪ್ರವಾಸಿ ಬಸ್‌ಗಳಿಗೆ ಸುಗ್ಗಿ ಕಾಲವಾಗಿದ್ದು, ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ಈಗಾಗಲೇ ಬಿ.ಆರ್‌.ರಾಮಚಂದ್ರು ಆಯೋಜಿಸಿದ್ದ ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಇದೀಗ ಹೆಚ್‌.ಎನ್‌.ಯೋಗೇಶ್‌ ಏರ್ಪಡಿಸಿರುವ ಧಾರ್ಮಿಕ ಯಾತ್ರೆಯಲ್ಲೂ ತೆರಳುವುದರೊಂದಿಗೆ ಎರಡೆರಡು ಬಾರಿ ಪುಕ್ಕಟ್ಟೆಯಾತ್ರೆಗೆ ತೆರಳಿ ಯಾವುದೇ ಖರ್ಚಿಲ್ಲದೆ ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದಾರೆ. ಕೆಲವರು ಇಬ್ಬರೂ ಒಂದೇ ಕಡೆ ಕರೆದುಕೊಂಡು ಹೋಗುವ ಬದಲು ಒಬ್ಬೊಬ್ಬರು ಒಂದೊಂದು ಕಡೆ ಕರೆದೊಯ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬ ಮಾತುಗಳು ಜನಮಾನಸದಿಂದ ಕೇಳಿಬರುತ್ತಿವೆ.

ನಾನೂ ಟಿಕೆಟ್‌ ಆಕಾಂಕ್ಷಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನಾನೂ ಕೂಡ ಒಬ್ಬ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನಮ್ಮ ಮಾವನವರಂತೆ ನಾನೂ ಜನರ ಸೇವೆ ಮಾಡುವುದಕ್ಕೆ ಸಿದ್ಧನಿದ್ದೇನೆ. ನನಗೊಂದು ಅವಕಾಶ ನೀಡುವಂತೆ ವರಿಷ್ಠರ ಬಳಿ ಮನವಿ ಮಾಡಿದ್ದೇನೆ ಎಂದು ಹೇಳಿದರು. ನಗರದ ಶ್ರೀ ಕಾಳಿಕಾಂಬ ದೇವಾಲಯದ ಎದುರು ಗುರುವಾರ ಎಂ.ಶ್ರೀನಿವಾಸ್‌ ಧರ್ಮಸ್ಥಳ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನೂ ಬೂದನೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಕ್ಷೇತ್ರದ ಯುವಕ-ಯುವತಿಯರಿಗೆ ಉದ್ಯೋಗ ಮೇಳ ಆಯೋಜಿಸಿದ್ದೇನೆ. 

ಜನಮುಖಿಯಾಗಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದು, ಜನರ ಆಸೆ-ನಿರೀಕ್ಷೆಗಳಿಗೆ ಸ್ಪಂದಿಸಲು ಉತ್ಸುಕನಾಗಿರುವುದಾಗಿ ತಿಳಿಸಿದರು. ಚುನಾವಣಾ ಹಿನ್ನೆಲೆಯಲ್ಲಿ ಈ ಧಾರ್ಮಿಕ ಯಾತ್ರೆ ಮಾಡುತ್ತಿಲ್ಲ. ವಯಸ್ಸಾದವರು, ಅಶಕ್ತರು, ದುರ್ಬಲರು ಯಾತ್ರೆ ಕೈಗೊಳ್ಳಲಾಗದೆ ಪರಿತಪಿಸುತ್ತಿರುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ದೇವರ ದರ್ಶನ ಮಾಡಿಸಿಕೊಂಡು ಬರುವುದಕ್ಕೆ ಯೋಜಿಸಿದ್ದೆವು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Mandya: ಕೇಂದ್ರೀಯ ಶಾಲೆಗೆ ಕಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ

ಟಿಕೆಟ್‌ ನೀಡುವ ವಿಚಾರದಲ್ಲಿ ವರಿಷ್ಠರು ಇನ್ನೂ ನಿರ್ದಿಷ್ಟಭರವಸೆ ನೀಡಿಲ್ಲ. ಆದರೂ ನನ್ನ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಕ್ಷೇತ್ರದ ಜನರು ನನ್ನ ಪರವಾಗಿದ್ದಾರೆಂಬ ನಂಬಿಕೆ-ವಿಶ್ವಾಸವಿದೆ. ನಮ್ಮ ಮಾವನವರು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿರುವ ಕೆಲಸಗಳು ನನಗೆ ಶ್ರೀರಕ್ಷೆಯಾಗಲಿವೆ ಎಂದು ಭಾವಿಸಿರುವುದಾಗಿ ಹೇಳಿದರು. ಶಾಸಕ ಎಂ.ಶ್ರೀನಿವಾಸ್‌, ನಗರಸಭೆ ಅಧ್ಯಕ್ಷ ಹೆಚ್‌.ಎಸ್‌.ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯ ನಾಗೇಶ್‌ ಇತರರಿದ್ದರು.

ನಗರಸಭಾ ಸದಸ್ಯರಿಗೆ ಗೋವಾ ಯಾತ್ರೆ ಯೋಗ: ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಹೆಚ್‌.ಎನ್‌.ಯೋಗೇಶ್‌ ಮುಂದಿನ ದಿನಗಳಲ್ಲಿ ನಗರಸಭೆ ಸದಸ್ಯರಿಗೆ ಪ್ರತ್ಯೇಕವಾಗಿ ಗೋವಾ ಯಾತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ನಗರದ 35 ವಾರ್ಡ್‌ನಲ್ಲಿರುವ ಸದಸ್ಯರನ್ನು ಕರೆದುಕೊಂಡು ಹೋಗಿ ಜಾಲಿಯಾಗಿ ಸುತ್ತಾಡಿಸಿಕೊಂಡು ಬರುವುದರೊಂದಿಗೆ ಅವರೆಲ್ಲರನ್ನೂ ಚುನಾವಣೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮಾಡಿಕೊಳ್ಳುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಶಾಸಕ ಎಂ.ಶ್ರೀನಿವಾಸ್‌ ಅವರನ್ನು ಮುಂದಿಟ್ಟುಕೊಂಡು ರಾಜಕೀಯದಲ್ಲಿ ಬೆಳವಣಿಗೆ ಕಾಣುವ ಕನಸು ಎಚ್‌.ಎನ್‌.ಯೋಗೇಶ್‌ ಅವರದ್ದಾಗಿದೆ. ರಾಜಕೀಯ ಬೆಳವಣಿಗೆ ಸಾಧಿಸಲು ಅಳಿಯ ನಡೆಸುತ್ತಿರುವ ಪ್ರಯತ್ನಕ್ಕೆ ಶಾಸಕ ಎಂ.ಶ್ರೀನಿವಾಸ್‌ ಸಾಥ್‌ ನೀಡುವುದು ಅನಿವಾರ್ಯವೂ ಆಗಿದೆ.

Follow Us:
Download App:
  • android
  • ios