ಬೆಳಗಾವಿ(ಅ.08): ಲಾಕ್‌ಡೌನ್‌ ಸಂದರ್ಭದಲ್ಲಿ ಪಾಸ್‌ಪೋರ್ಟ್‌ ನಿಯಮ ಉಲ್ಲಂಘಿಸಿದ್ದ ಇಂಡೋನೇಷ್ಯಾ ಮೂಲದ 10 ತಬ್ಲೀಘಿಗಳಿಗೆ 2 ದಿನ ಜೈಲು ವಾಸ, ತಲಾ 20 ಸಾವಿರ ದಂಡ ವಿಧಿಸಿ ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. 

ದೆಹಲಿಯಲ್ಲಿ ಆಯೋಜಿಸಿದ್ದ ತಬ್ಲೀಘಿ ಜಮಾತ್‌ ಸಭೆಯಲ್ಲಿ ಇಂಡೋನೇಷ್ಯಾದ 10 ಜನರು ಪಾಲ್ಗೊಂಡಿದ್ದರು. ಮಾತ್ರವಲ್ಲ, ಪ್ರವಾಸದ ಹೆಸರಲ್ಲಿ ವೀಸಾ ಪಡೆದಿದ್ದ ಇವರೆಲ್ಲ ಧರ್ಮಪ್ರಚಾರದಲ್ಲಿ ತೊಡಗಿದ್ದರು. ಲಾಕ್‌ಡೌನ್‌ ವೇಳೆ ಈ ಎಲ್ಲರೂ ಮಾಳಮಾರುತಿ ಠಾಣೆ ವ್ಯಾಪ್ತಿಯ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು. 

ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ!

ಟೂರಿಸ್ಟ್‌ ವೀಸಾ ಮೇಲೆ ಬಂದು ಧರ್ಮಪ್ರಚಾರದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಈ 10 ಜನ ತಬ್ಲೀಘಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸುವ ಮೂಲಕ ಆ ವೇಳೆ 10 ಜನರನ್ನು ಎರಡು ದಿನ ಜೈಲಿನಲ್ಲಿ ಕೂಡ ಇರಿಸಿದ್ದರು. ಈ ಅವಧಿ ಹೊಂದಾಣಿಕೆ ಮಾಡಿ ತಲಾ ಒಬ್ಬರಿಗೆ 20 ಸಾವಿರ ದಂಡವನ್ನು ವಿಧಿಸಿ ನ್ಯಾಯಾಧೀಶೆ ಬಿ.ವಿ.ಲಲಿತಾಶ್ರೀ ಆದೇಶ ಹೊರಡಿಸಿದ್ದಾರೆ.