Indian Railway Service: ಗುಡ್ ನ್ಯೂಸ್ : ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು
- ರಾಮಜನ್ಮಭೂಮಿ ಅಯೋಧ್ಯೆಯಲ್ಲಿನ ವಿವಾದ ಇತ್ಯರ್ಥ
- ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿರುವ ಬೆನ್ನಲ್ಲೇ ಶ್ರೀರಾಮನ ಭಕ್ತ ಆಂಜನೇಯ ಜನ್ಮಸ್ಥಳ ಅಂಜನಾದ್ರಿಯ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ
ಕೊಪ್ಪಳ (ಡಿ.13): ರಾಮ ಜನ್ಮಭೂಮಿ (Ram Janma bhoomi ) ಅಯೋಧ್ಯೆಯಲ್ಲಿನ (Ayodhye) ವಿವಾದ ಇತ್ಯರ್ಥವಾಗಿ ಶ್ರೀರಾಮ ಮಂದಿರ (Shri Ramam mandir) ನಿರ್ಮಾಣ ಕಾರ್ಯ ಭರದಿಂದ ಸಾಗಿರುವ ಬೆನ್ನಲ್ಲೇ ಶ್ರೀರಾಮನ ಭಕ್ತ ಆಂಜನೇಯ ಜನ್ಮಸ್ಥಳ ಅಂಜನಾದ್ರಿಯ (Anjandri) ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಈ ನಡುವೆ ಅಂಜನಾದ್ರಿಯ ಕಿಷ್ಕಿಂಧೆಯಿಂದ ಅಯೋಧ್ಯೆಗೆ ನೇರ ರೈಲು ಕಲ್ಪಿಸುವ ಮೂಲಕ ಶ್ರೀರಾಮ ಮತ್ತು ಹನುಮಂತನ ಭಕ್ತರ ಅನುಕೂಲಕ್ಕೆ ದಾರಿ ಮಾಡಿಕೊಡಬೇಕು ಎಂದು ಸಂಸದರು ಪತ್ರದಲ್ಲಿ ಕೋರಿಕೊಂಡಿದ್ದು ರೈಲ್ವೆ ಇಲಾಖೆಯಿಂದ ಇದೀಗ ಸಕಾರಾತ್ಮಕ ಸ್ಪಂದನೆ ದೊರಕಿದೆ.
ಡಿ.7ರಂದೇ ನೈಋುತ್ಯ ರೈಲ್ವೆ (train) ವಲಯ ಪ್ರಧಾನ ವ್ಯವಸ್ಥಾಪಕರು ಇದರ ಅಗತ್ಯತೆ ಮನವರಿಕೆ ಮಾಡಿಕೊಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಇಲ್ಲಿ ಹೊಸ ರೈಲು ಮಾರ್ಗವಾಗಿದ್ದರೆ ಸಮಸ್ಯೆಯಾಗುತ್ತಿತ್ತು. ಆದರೆ ಈಗಾಗಲೇ ಇರುವ ಮಾರ್ಗದಲ್ಲಿಯೇ ನೇರವಾಗಿ ಕೇವಲ ರೈಲು ಪ್ರಾರಂಭವಾಗಬೇಕಾಗಿರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೇ ಹೇಳಲಾಗುತ್ತದೆ. ಇದರಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
ಅದರಲ್ಲೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ(anjanadri hill) ಅರ್ಧದಷ್ಟುಪ್ರವಾಸಿಗರು ಉತ್ತರ ಭಾರತದಿಂದಲೇ ಆಗಮಿಸುತ್ತಾರೆ. ಹೀಗಾಗಿ ಅವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ರೈಲು ಮಹತ್ವ ಪಡೆಯುತ್ತದೆ. ಅಂಜನಾದ್ರಿಗೆ 15 ಕಿ.ಮೀ.ದೂರದಲ್ಲಿರುವ ಗಂಗಾವತಿ ಅತಿ ಹತ್ತಿರದ ರೈಲು ನಿಲಾಣವಾಗಿದೆ.
ಮಣಿಪುರಕ್ಕೆ ರೈಲು : ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಪ್ರಯಾಣಿಕ ರೈಲನ್ನೇ ನೋಡಿರದಿದ್ದ ಮಣಿಪುರಕ್ಕೆ (Manipura) ಕೊನೆಗೂ ರೈಲು ಸಂಚರಿಸುವ ಸಮಯ ಸನ್ನಿಹಿತವಾಗಿದೆ. ಅಸ್ಸಾಂನ (Assam) ಸಿಲ್ಚಾರ್‌ನಿಂದ ಮಣಿಪುರದ ವೈಂಗೈ ಚುನ್ಪಾವ್‌ಗೆ ಮೊದಲ ಪ್ಯಾಸೆಂಜರ್ ರೈಲು ಶುಕ್ರವಾರ ಪ್ರಾಯೋಗಿಕ ಸಂಚಾರ ನಡೆಸಿದೆ. ಇದರೊಂದಿಗೆ ದೇಶದ ಇತರೆ ಭಾಗಗಳನ್ನೂ ರೈಲಿನ ಮೂಲಕವೇ ತಲುಪುವ ಮಣಿಪುರದ ಜನರ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ.
ಗುಡ್ಡಗಾಡು ರಾಜ್ಯವಾಗಿರುವ ಮಣಿಪುರದಲ್ಲಿ ಮೊದಲ ಬಾರಿಗೆ 11 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಈ ರೈಲ್ವೆ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಸಿಲ್ಚಾರ್ ರೈಲ್ವೆ ನಿಲ್ದಾಣದಿಂದ ಪರೀಕ್ಷಾರ್ಥವಾಗಿ ಹೊರಟ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ವೈಂಗೈಚುನ್ವಾಪೋ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ. ಸಿಲ್ಚಾರ್- ವೈಂಗೈಚುನ್ಪಾವೋ ರೈಲ್ವೆ ಮಾರ್ಗ ಶೀಘ್ರವೇ ಪ್ರಯಾಣಿಕ ರೈಲು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್ ರೈಲು (Train) ಮಣಿಪುರವನ್ನು ಪ್ರವೇಶಿಸುತ್ತಿದ್ದಂತೆ ಜಿರಿಬಾಮ್ ರೈಲ್ವೆ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿ ರೈಲಿನ ಮೇಲೆ ರಾಷ್ಟ್ರಧ್ವಜವನ್ನು ಇಟ್ಟು, ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಬರಮಾಡಿಕೊಳ್ಳಲಾಯಿತು. ಈ ರೈಲು ಸಂಚಾರದಿಂದ ಅಸ್ಸಾಂನ ಸಿಲ್ಚಾರ್ ಪಟ್ಟಣದಿಂದ ಮಣಿಪುರಕ್ಕೆ ನೇರ ಸಂಪರ್ಕ ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ರಾಜಧಾನಿ ಇಂಫಾಲ್‌ಗೆ ರೈಲ್ವೆ ಸಂಪರ್ಕ ಕಲ್ಪಿಸುವ ಗುರಿಯನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ.
ರೈಲು ಸೇವೆ ಏಕೆ ಇರಲಿಲ್ಲ?: ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ, ತ್ರಿಪುರಾ, ಅರುಣಾಚಲ (Arunachal) ಪ್ರದೇಶದ ರಾಜಧಾನಿಗಳಿಗೆ ಈಗಾಗಲೇ ರೈಲ್ವೆ ಸಂಪರ್ಕ ಇದೆ. ಆದರೆ, ಇತರ ರಾಜ್ಯಗಳಾದ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯದ ರಾಜಧಾನಿಗಳಿಗೆ ಇದುವರೆಗೂ ರೈಲ್ವೆ ಸಂಪರ್ಕ ಕಲ್ಪಿಸಲಾಗಿಲ್ಲ. 2023ರ ವೇಳೆಗೆ ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಈಶಾನ್ಯ ರಾಜ್ಯಗಳು ಗುಡ್ಡಗಾಡಿನಿಂದ ಕೂಡಿರುವ ಕಾರಣ ಅಲ್ಲಿ ರೈಲ್ವೆ ಮಾರ್ಗಗಳನ್ನು ನಿರ್ಮಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗಳ ವಿಳಂಬದಿಂದಾಗಿ ಈ ರಾಜ್ಯಗಳು ರೈಲು ಸೇವೆಯಿಂದ ವಂಚಿತವಾಗಿದ್ದವು. ರೈಲು ಸೇವೆಯನ್ನು ಬಳಸಲು ಈಶಾನ್ಯ ರಾಜ್ಯಗಳು ಹೆಚ್ಚಾಗಿ ಅಸ್ಸಾಂ ಮೇಲೆ ಅವಲಂಬಿತವಾಗಿವೆ.