ಉಡು​ಪಿ(ನ.22): ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾರೆ.

ಮಾಲಾ ಅಡಿಗ ಅವರು ಹುಟ್ಟಿಬೆಳೆದದ್ದು, ಅಮೆರಿಕದಲ್ಲಾದರೂ, ಆಕೆ ಉಡುಪಿ ಜಿಲ್ಲೆಯ ಕುಂದಾಪುರದ ಕಕ್ಕುಂಜೆ ಗ್ರಾಮದ ಮಣ್ಣಿನ ಮಗಳು. ಅವರು ಕಕ್ಕುಂಜೆ ಚಂದ್ರಶೇಖರ ಅಡಿಗ ಮೊಮ್ಮಗಳು, ಡಾ.ರಮೇಶ್‌ ಅಡಿಗರ ಮಗಳು. ಡಾ.ರಮೇಶ್‌ ಅಡಿಗ ಅವರು ವೈದ್ಯಕೀಯ ಪದವಿ ಪಡೆದು ಅಮೆರಿಕಕ್ಕೆ ತೆರಳಿ, ಕಳೆದ 50 ವರ್ಷಗಳಿಂದ ಅಲ್ಲಿಯೇ ನೆಲೆ ನಿಂತಿದ್ದಾರೆ.

2 ವರ್ಷ ಆಗ್ತಾ ಬಂದ್ರೂ ಪತ್ತೆಯಾಗದ ಮೀನುಗಾರರು: ಕುಟುಂಬಕ್ಕೆ 10 ಲಕ್ಷ ರು. ಪರಿಹಾರ

ಕಾನೂನು ಪದವಿಧರೆಯಾಗಿರುವ ಮಾಲಾ ಅಡಿಗ ಅವರು ಅಮೆರಿಕದ ಇಲಿನಾಯ್ಸ ನಿವಾಸಿ. ಬೈಡನ್‌ ಫೌಂಡೇಶನ್‌ನಲ್ಲಿ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ, ಅಮೆರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್‌ ಅವರಿಗೆ ಸಲಹೆಗಾರರಾಗಿದ್ದರು.

ಕುಂದಾಪುರದಲ್ಲಿ ಕಕ್ಕುಂಜೆ ಅಡಿಗರ ಮನೆತನ ಬಹಳ ಪ್ರಸಿದ್ಧ. ಈ ಮನೆತನದ ಸೂರ್ಯನಾರಾಯಣ ಅಡಿಗರು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಇದೇ ಮನೆತನದ ಮಗಳು ಮಾಲಾ ಅಡಿಗ, ಈಗ ಅಮೆರಿಕಾದ ಪ್ರಥಮ ಮಹಿಳೆಯ ನೀತಿ ನಿರ್ದೇಶಕಿಯಾಗಿದ್ದಾರೆ. ಇದು ಕುಂದಾಪುರಕ್ಕೆ ಮಾತ್ರವಲ್ಲ ಕನ್ನಡ ನಾಡಿಗೆ ಹೆಮ್ಮೆಯ ವಿಷಯ. ಊರಿನವರಿಗೆಲ್ಲ ಬಹಳ ಸಂತೋಷವಾಗಿದೆ. ಮಾಲಾ ಅಡಿಗ ಅವರು ತಮ್ಮ ಹುದ್ದೆಯಲ್ಲಿ ಯಶಸ್ವಿಯಾಗಲಿ, ಇನ್ನೂ ದೊಡ್ಡ ಹುದ್ದೆಗೇರಲಿ ಎಂಬುದೇ ನಮ್ಮೆಲ್ಲರ ಹಾರೈಕೆ ಎಂದಿದ್ದಾರೆ ಅಡಿಗ ಮನೆತನದ ಒಡನಾಡಿ ಚಂದ್ರಶೇಖರ ನಾವಡ.