Asianet Suvarna News Asianet Suvarna News

ಭಾರತ ಪ್ರಪಂಚದಲ್ಲಿ ಸ್ವಾವಲಂಬನೆ ರಾಷ್ಟ್ರವಾಗಿ ಹೊರಹೊಮ್ಮಿದೆ

ಸಂವಿಧಾನ ಜಾರಿಯ ಫಲ ಭಾರತ ಇಂದು ಪ್ರಪಂಚದಲ್ಲೇ ಉನ್ನತ ಸ್ಥಾನದಲ್ಲಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತಿ ಅಧ್ಯಕ್ಷರೂ ಆದ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಹೇಳಿದರು.

India has emerged as a self  reliant nation in the world snr
Author
First Published Jan 27, 2023, 8:47 AM IST

 ಗುಂಡ್ಲುಪೇಟೆ : ಸಂವಿಧಾನ ಜಾರಿಯ ಫಲ ಭಾರತ ಇಂದು ಪ್ರಪಂಚದಲ್ಲೇ ಉನ್ನತ ಸ್ಥಾನದಲ್ಲಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತಿ ಅಧ್ಯಕ್ಷರೂ ಆದ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ರಂಗಗಳಲ್ಲಿ ಇಂದು ಭಾರತ ಸಬಲತೆ ಹೊಂದಿದೆ. ಭಾರತ ಪ್ರಪಂಚದಲ್ಲಿ ಐದನೇ ಸ್ವಾವಲಂಬನೆ ರಾಷ್ಟ್ರವಾಗಿ ಹೊರ ಹೊಮ್ಮಿದೆ. ದೇಶ ಪ್ರಗತಿಯಲ್ಲಿ ಸಾಗುವ ಜೊತೆಗೆ ಪ್ರಬಲ ರಾಷ್ಟ್ರವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಸಂವಿಧಾನ ರಚನೆ ಹಾಗೂ ರಚನೆಗೆ ಶ್ರಮಿಸಿದವರನ್ನು ಮಹನೀಯರನ್ನು ಸ್ಮರಣೆ ಮಾಡಿಕೊಳ್ಳಬೇಕು.ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ತಂಡದ ಸದಸ್ಯರನ್ನೂ ಸ್ಮರಿಸಬೇಕು ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣ, ಉಜ್ವಲ ಯೋಜನೆಯಲ್ಲಿ ಗ್ಯಾಸ್‌, ಜಲ ಜೀವನ್‌ ಮಿಷನ್‌ ಮೂಲಕ ಮನೆಗಳಿಗೆ ನೀರು, ಭಾರತ ಉತ್ತಮ ಸೈನ್ಯ ಬಲ ಹೊಂದಿದೆ. ಪಾಕಿಸ್ಥಾನ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೆ ಭಾರತ ಹೋಲಿಸಿದರೆ ಅಗತ್ಯ ವಸ್ತುಗಳ ಬೆಲೆ ತುಂಬಾ ಕಡಿಮೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಎಂದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದ ಮಹನೀಯರಿಗೆ ಗೌರವ ಸಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ದೇಶಕ್ಕೆ ಬಂದ ಬಳಿಕ ಭಾರತ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ತಹಸೀಲ್ದಾರ್‌ ಸಿ.ಜಿ.ರವಿಶಂಕರ್‌ ಧ್ವಜಾ ರೋಹಣ ನೆರವೇರಿಸಿದ ಬಳಿಕ ತಮ್ಮ ಸಂದೇಶದಲ್ಲಿ ಭಾರತ ದೇಶದ ಸಂವಿಧಾನ ವಿಶ್ವದಲ್ಲೆ ದೊಡ್ಡದು. ಸಂವಿಧಾನ ಜಾರಿಗೆ ತರಲು ಶ್ರಮಿಸಿದ ಹಾಗೂ ಸಂವಿಧಾನ ಬರೆದ ಮಹನೀಯರಿಗೆ ತಲೆ ಬಾಗಿ ನಮನಿಸಬೇಕು ಎಂದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್‌, ಎಪಿಎಂಸಿ ಅಧ್ಯಕ್ಷ ಕೆ.ಎಸ್‌.ಶಿವಪ್ರಕಾಶ್‌, ತಾಪಂ ಇಒ ಜಿ.ಶ್ರೀಕಂಠ ರಾಜೇ ಅರಸ್‌, ಬಿಇಒ ಎಸ್‌.ಸಿ.ಶಿವಮೂರ್ತಿ, ಪುರಸಭೆ ಸದಸ್ಯರಾದ ಪಿ.ಶಶಿಧರ್‌(ದೀಪು),ಕಿರಣ್‌ಗೌಡ,ರಾಜಗೋಪಾಲ್‌, ಮಹದೇವಮ್ಮ, ಎಲ್‌.ನಿರ್ಮಲ ಸೇರಿದಂತೆ ಕನ್ನಡ, ದಲಿತ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳಿದ್ದರು.

ಘನತೆಯತ್ತ ಸಾಗುತ್ತಿದೆ ಭಾರತ

ಭಾರತ ಇಂದು ಜಗತ್ತಿನ 5ನೇ ಪ್ರಬಲ ಆರ್ಥಿಕ ಶಕ್ತಿಯಾಗಿದೆ. ಹಾಲು, ಸಕ್ಕರೆ, ಧಾನ್ಯ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಹಲವಾರು ಪ್ರಥಮಗಳನ್ನು ಸಾಧಿಸಿದೆ. ನೆರೆಯ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಆದರೆ ಭಾರತ ತನ್ನ ಶೇ.80ರಷ್ಟು ಜನರಿಗೆ ಉಚಿತ ಆಹಾರಧಾನ್ಯ ಹಂಚುವಷ್ಟು ಸಮೃದ್ಧವಾಗಿದೆ. ವ್ಯಾಪಾರ, ವ್ಯವಹಾರ, ವೈದ್ಯಕೀಯ ಮತ್ತು ರಾಜತಾಂತ್ರಿಕತೆ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ವಿಷಯದಲ್ಲೂ ಭಾರತವನ್ನು ಕಡೆಗಣಿಸಲಾಗದ ಸ್ಥಿತಿ ಜಾಗತಿಕ ವಲಯದಲ್ಲಿ ನಿರ್ಮಾಣವಾಗಿದೆ. ಭಯೋತ್ಪಾದನೆ, ದೇಶದ್ರೋಹ, ನಕ್ಸಲ್‌ವಾದಗಳ ಮಗ್ಗಲು ಮುರಿದಿದೆ. ಪ್ರಬಲ ರಕ್ಷಣಾ ವ್ಯವಸ್ಥೆಯ ವ್ಯೂಹ ದೇಶವನ್ನು ಆಂತರಿಕ ಮತ್ತು ಬಾಹ್ಯ ವೈರಿಗಳಿಂದ ಸುರಕ್ಷಿತವಾಗಿಸಿದೆ. ಇಡೀ ಜಗತ್ತಿಗೆ ಆರ್ಥಿಕ ಕುಸಿತ ಉಂಟಾದರೂ ಭಾರತ ನಲುಗದಂತೆ ನಿಂತಿದೆ. ಕೊರೊನಾದಂತಹ ಹೆಮ್ಮಾರಿಯನ್ನು ಕಟ್ಟಿಹಾಕುವ ಔಷಧಿ ಕಂಡು ಹಿಡಿದಿದೆ. ಅಭಿವೃದ್ಧಿಯ ಹೊಸ ಪರ್ವವೇ ಆರಂಭವಾಗಿದೆ. ಹೀಗಾಗಿ ಜಗತ್ತು ಇಂದು ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.

ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ಪ್ರಬಲ ರಾಷ್ಟ್ರವಾಗಲಿದೆ. ಅದಕ್ಕೆಲ್ಲ ಕಾರಣ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ವಿದೇಶಾಂಗ ನೀತಿ, ಅಭಿವೃದ್ಧಿ ಯೋಜನೆಗಳು ಮತ್ತು ಸರ್ವೋತ್ತಮ ನಾಯಕತ್ವ. ಸಂವಿಧಾನ ನಿರ್ಮಾಪಕರ ಉದ್ದೇಶ ಈ ದೇಶ ಸಹಕಾರಿ ತತ್ವದ ಮೇಲೆ ರಚನೆಯಾದ ಸಶಕ್ತ ಒಕ್ಕೂಟ ವ್ಯವಸ್ಥೆಯಾಗಬೇಕು. ಪಕ್ಷ ರಾಜಕಾರಣದ ಭಿನ್ನ ಹಿತಾಸಕ್ತಿಯ ಕಾರಣಕ್ಕೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಡೋಮಿನಿಯನ್‌ ರೀತಿಯಲ್ಲಿ ವರ್ತಿಸಬಾರದು ಎಂಬುದಾಗಿತ್ತು. ಅಭಿವ್ಯಕ್ತಿ ಹೆಸರಿನಲ್ಲಿ ಸ್ಯೂಡೋ ಸೆಕ್ಯೂಲರ್‌ಗಳು, ಭಯೋತ್ಪಾದಕರು ಹಾಗೂ ಅಭಿವೃದ್ಧಿವಿರೋಧಿ ಮನಸ್ಥಿತಿಯ ಕೆಲ ಮಾಧ್ಯಮಗಳು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇದ್ದರೂ ಕಠಿಣ ಕಾನೂನು ವ್ಯವಸ್ಥೆ ಮತ್ತು ಸಶಕ್ತ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆ.

Follow Us:
Download App:
  • android
  • ios