ಬೆಂಗಳೂರು[ಫೆ.15]: ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಫೆ.17ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅನಿಲ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಅಧಿಕೃತವಾಗಿ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ಅನಿಲ್‌ ಕುಮಾರ್‌ ಜೆಡಿಎಸ್‌ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅನಿಲ್‌ ಕುಮಾರ್‌ಗೆ ಬೆಂಬಲವಿಲ್ಲ ಎಂದು ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಸೇರಿದಂತೆ ಅನೇಕ ಮುಖಂಡರು ಬಹಿರಂಗವಾಗಿ ಹೇಳಿದ್ದರು. ಅಲ್ಲದೇ ಬೆಂಬಲಿಸುವ ಕುರಿತಂತೆ ಹೈಕಮಾಂಡ್‌ ಮಟ್ಟದಲ್ಲಿ ಈವರೆಗೆ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಸಂಭವವಿದೆ.

ಮಧ್ಯಾಹ್ನದವರೆಗೆ ಕಾಯುತ್ತೇವೆ:

ಶುಕ್ರವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್‌ ಮುಖಂಡ ಎಚ್‌.ಡಿ. ರೇವಣ್ಣ, ಕಾಂಗ್ರೆಸ್‌ ಪಕ್ಷದ ಜವಾಬ್ದಾರಿಯುತ ಮುಖಂಡರ ಜೊತೆ ಚರ್ಚಿಸಿ, ಅವರು ಒಪ್ಪಿಕೊಂಡ ಮೇಲೆಯೇ ಅನಿಲ್‌ ಕುಮಾರ್‌ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಚರ್ಚಿಸಿದ ಮುಖಂಡರ ಹೆಸರನ್ನು ಮುಂದೆ ಬಹಿರಂಗಪಡಿಸಲಾಗುವುದು. ಈಗಲೂ ಕಾಲ ಮಿಂಚಿಲ್ಲ. ಶನಿವಾರ ಮಧ್ಯಾಹ್ನದೊಳಗೆ ಕಾಂಗ್ರೆಸ್‌ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದೇನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಎಚ್‌.ಡಿ.ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಿಷತ್ ಉಪಚುನಾವಣೆ: ಅಖಾಡಕ್ಕೆ JDS ಬೆಂಬಲಿತ ಪಕ್ಷೇತರ ಅಭ್ಯರ್ಥಿ

ಕೋಮುವಾದಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್‌ನಿಂದಲೇ ಅಭ್ಯರ್ಥಿ ಕಣಕ್ಕೆ ಇಳಿಸುವಂತೆ ಮನವಿ ಮಾಡಿಕೊಂಡಿದ್ದೆ. ಅವರು ಜಾಫರ್‌ ಶರೀಫ್‌ ಅವರ ಪುತ್ರ ರೆಹಮಾನ್‌ ಖಾನ್‌ ಅವರನ್ನು ಕಣಕ್ಕೆ ಇಳಿಸುವುದಾಗಿ ಹೇಳಿದರು. ಆದರೆ ಅದೇನು ತಿಕ್ಕಾಟ ಬಂತೋ, ಯಾರನ್ನೂ ನಿಲ್ಲಿಸಲಿಲ್ಲ. ಆಗ ಜೆಡಿಎಸ್‌ನಿಂದಲೇ ಅಭ್ಯರ್ಥಿ ಕಣಕ್ಕಿಳಿಸಿ ಎಂದು ಕಾಂಗ್ರೆಸ್‌ ಮುಖಂಡರು ಸಲಹೆ ನೀಡಿದಾಗ, ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್‌ ಕುಮಾರ್‌ ಅವರನ್ನು ಕಣಕ್ಕೆ ಇಳಿಸಿದ್ದೇವೆ ಎಂದು ವಿವರಿಸಿದರು.