ಕಾರವಾರದಲ್ಲಿ ನಡೆದ 80ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಅವರು ಧ್ವಜಾರೋಹಣ ನೆರವೇರಿಸಿದರು. ಆದರೆ, ವೇದಿಕೆಯಲ್ಲಿ ಸರಿಯಾದ ಲೈಟಿಂಗ್ ವ್ಯವಸ್ಥೆ ಇಲ್ಲದ ಕಾರಣ, ಭಾಷಣ ಓದಲು ಪರದಾಡಿ ಮೊಬೈಲ್‌ ಟಾರ್ಚ್ ಬಳಸಬೇಕಾದ ಪ್ರಸಂಗ ನಡೆಯಿತು.

ಕಾರವಾರ, ಉತ್ತರಕನ್ನಡ (ಆ.15) ಇಂದು ಶನಿವಾರ, 2026ನೇ ಇಸವಿ ಆಗಸ್ಟ್ 15 ದೇಶದೆಲ್ಲೆಡೆ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ. ಇದರ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮಣ್ ಸವದಿ ಅವರು ಧ್ವಜಾರೋಹಣ ನೇರವರಿಸಿದರು.

ಕತ್ತಲಲ್ಲಿ ಭಾಷಣ ಓದಲು ತಡವಡಿಸಿದ ಸಚಿವ:

ಧ್ವಜಾರೋಹಣ ನೆರವೇರಿಸಿ ಮಾತನಾಡಲು ಮುಂದಾದ ಸಚಿವ ಲಕ್ಷ್ಮಣ್ ಸವದಿ ಅವರು, ಕಾರ್ಯಕ್ರಮದ ವೇದಿಕೆಯಲ್ಲಿ ಲೈಟಿಂಗ್ ವ್ಯವಸ್ಥೆ ಇಲ್ಲದ ಪರಿಣಾಮ ಭಾಷಣ ಓದಲು ತಡವಡಿಸಿದ ಘಟನೆ ನಡೆಯಿತು. ವೇದಿಕೆ ಮೇಲೆ ಕತ್ತಲಿದ್ದ ಪರಿಣಾಮ ಬರೆದಿದ್ದ ಭಾಷಣ ಪ್ರತಿ ಸರಿಯಾಗಿ ಕಾಣಿಸದೆ ಮತ್ತೆ ಮತ್ತೆ ದಿಟ್ಟಿಸತೊಡಗಿದರು. ಆಗಲೂ ಕಾಣಿಸದಿದ್ದರಿಂದ ಕೊನೆಗೆ ಮೊಬೈಲ್‌ ಟಾರ್ಚ್ ಹಾಕಿ ಭಾಷಣ ಓದಲಾರಂಭಿಸಿದರು.

ಲೈಟ್ ವ್ಯವಸ್ಥೆ ಇಲ್ಲದ್ದಕ್ಕೆ ಸಚಿವ ಗರಂ:

ಭಾರತ ಸ್ವಾತಂತ್ರ್ಯೋತ್ಸವ ದಿನವಾದ ಇಂದು ಬೆಳಕಿನಿಂದ ಕಂಗೊಳಿಸಬೇಕಿದ್ದ ವೇದಿಕೆಗೆ ಸರಿಯಾಗಿ ಲೈಟಿಂಗ್ ವ್ಯವಸ್ಥೆ ಇರಲಿಲ್ಲ. ಲೈಟ್ ವ್ಯವಸ್ಥೆ ಇಲ್ಲದ ಸಮಸ್ಯೆಯಿಂದ ಸಚಿವರು ಭಾಷಣ ಪ್ರತಿ ಸರಿಯಾಗಿ ಓದಲಾಗದೆ ಮುಜುಗರ ಅನುಭವಿಸುವಂತಾಯ್ತು. ಇದರಿಂದ ಸವದಿ ಆ ಕ್ಷಣ ಸಿಬ್ಬಂದಿ ವಿರುದ್ಧ ಸಿಟ್ತಾದಂತೆ ಕಂಡರು. ಸಿಬ್ಬಂದಿ ತಕ್ಷಣ ಡಯಾಸನ್ನು ಬೆಳಕಿರುವ ಜಾಗಕ್ಕೆ ಸ್ಥಳಾಂತರಿಸಿದರು. ಬಳಿಕ ಭಾಷಣ ಮುಂದುವರಿಸಿದರು.