ಕೂಡ್ಲಿಗಿ(ಮೇ.12): ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಇತ್ತೀಚೆಗೆ 11 ಜನರು ಮೃತಪಟ್ಟಬೆನ್ನಲ್ಲೇ ತಾಲೂಕಿನ ಶ್ರೀಕಂಠಾಪುರ ತಾಂಡದಲ್ಲಿಯೂ 6 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಉಳಿದವರು ವಿವಿಧ ಕಾಯಿಲೆಗೆ ತುತ್ತಾಗಿದ್ದಾರೆ. ಆದರೆ ಸ್ಥಳೀಯ ಆಡಳಿತ ಮಾತ್ರ ಈ ವರೆಗೂ ಗ್ರಾಮಕ್ಕೆ ಭೇಟಿ ಪರಿಶೀಲಿಸಿ ಆರೋಗ್ಯ ತಪಾಸಣೆ ಮಾಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀಕಂಠಾಪುರ ತಾಂಡದಲ್ಲಿ ಆನಂದನಾಯ್ಕ(38), ಖುಷಿಬಾಯಿ (65) ಇಬ್ಬರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದ್ದು, ಇದೇ ಗ್ರಾಮದ ರವಿಕುಮಾರ್‌ (36) ಇವರು ಬಳ್ಳಾರಿ ವಿಮ್ಸ್‌ ನಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕಳೆದೆರಡು ದಿನಗಳಲ್ಲಿ ನಾಗ್ಯಾನಾಯ್ಕ (65) ಹಾಗೂ ಈತನ ಪತ್ನಿ ಸಾವಿತ್ರಿಬಾಯಿ(60) ಹಾಗೂ ಶಂಕರನಾಯ್ಕ ಎನ್ನುವವರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಈ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿದ್ದರೂ ಈ ವರೆಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೊರೋನಾ ರೋಗಿಗಳಿಗೆ ನೆರವಾಗುವ ಕಾರ್ಯ ಮಾಡಿಲ್ಲ.

"

ನಲುಗಿದ ಜನತೆ:

ಕಳೆದ 8 ದಿನಗಳಿಂದ ಶ್ರೀಕಂಠಾಪುರ ತಾಂಡದ ಜನರಿಗೆ ಜ್ವರ, ಕೆಮ್ಮು, ನೆಗಡಿ ಮುಂತಾದ ಲಕ್ಷಣಗಳು ಕಂಡು ಬಂದಿದ್ದು ಕೊರೋನಾ ಬಂದಿದೆ ಎಂದು ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಇಷ್ಟಾದರೂ ಆರೋಗ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಜನರ ತಪಾಸಣೆ ಮಾಡಿಲ್ಲ. ಗ್ರಾಮದಲ್ಲಿರುವ ಆಶಾ ಕಾರ್ಯಕರ್ತೆ ಹಾಗೂ ಆಕೆಯ ಪತಿ ಮಾತ್ರ ಕೊರೋನಾ ವಾರಿಯರ್ಸ್‌ ಆಗಿ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮಕ್ಕೆ ಯಾರು ಬರದಂತೆ ಹೊರಹೋಗದಂತೆ ರಸ್ತೆಗೆ ಬೇಲಿ ಹಾಕುವ ಮೂಲಕ ಗ್ರಾಮಸ್ಥರು ಕೊರೋನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಮಾನವೀಯತೆಯನ್ನೇ ಮರೆತ ಜನ: ಸೋಂಕಿತ ತಂದೆ-ತಾಯಿಯೊಂದಿಗೆ ಮಗು..!

ತಾಲೂಕಿನ ತಾಂಡಾಗಳಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿದ್ದರು ಆರೋಗ್ಯ ಇಲಾಖೆ ತಾಂಡಾಗಳಿಗೆ ಭೇಟಿ ನೀಡಿಲ್ಲ. ಕೂಲಿಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಈಗಲಾದರೂ ಶಾಸಕರು, ಅಧಿಕಾರಿಗಳು ಶ್ರೀಕಂಠಾಪುರ ತಾಂಡಾಕ್ಕೆ ಭೇಟಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಬಂಜಾರ ಸಂಘದ ಅಧ್ಯಕ್ಷ ಎಸ್‌.ಆರ್‌. ಶ್ಯಾಮನಾಯ್ಕ ತಿಳಿಸಿದ್ದಾರೆ.

ಶ್ರೀಕಂಠಾಪುರ ತಾಂಡದಲ್ಲಿ ಮೂವರು ಕೊರೋನಾದಿಂದ ಮೃತಪಟ್ಟಿದ್ದು ಉಳಿದವರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಚಿಕ್ಕಜೋಗಿಹಳ್ಳಿ ತಾಂಡಾದಂತೆ ಈ ತಾಂಡಾದಲ್ಲಿಯೂ ಸಹ ಕೊರೋನಾ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಮುಂದಾಗುತ್ತೇವೆ ಎಂದು ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona