Asianet Suvarna News Asianet Suvarna News

ಗದಗ: ಒಂದು ಕಾಲದಲ್ಲಿ ಹನಿ ನೀರಿಗೂ ಪರದಾಟ, ಇಂದು ಮನೆಗಳಲ್ಲಿ ಜಿನುಗುತ್ತಿದೆ ಅಂತರ್ಜಲ!

ಕೆಳ ಹಂತದ ಕಟ್ಟಡಗಳಲ್ಲಿ ತುಂಬುತ್ತಿರುವ ನೀರು, ಪಂಪ್‌ಸೆಟ್‌ ಹೆಚ್ಚಿ ನೀರು ಹೊರಹಾಕುತ್ತಾರೆ| ನಗರದ ಭೀಷ್ಮ ಕೆರೆ ಸಂಪೂರ್ಣ ಭರ್ತಿ| ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದ ಮಳೆ| ನಗರಸಭೆಯಿಂದ ಯಾವುದೇ ಪರಿಹಾರವಿಲ್ಲ| 

Increased Groundwater in Gadag Due to Heavy Rain
Author
Bengaluru, First Published Sep 13, 2020, 12:06 PM IST

ಶಿವಕುಮಾರ ಕುಷ್ಟಗಿ

ಗದಗ(ಸೆ.13): ಒಂದು ಕಾಲದಲ್ಲಿ ಹನಿ ನೀರಿಗೂ ಪರದಾಟ ನಡೆಸುತ್ತಿದ್ದ ಗದಗ -ಬೆಟಗೇರಿ ಅವಳಿ ನಗರದ ಜನತೆ ಈಗ ಅಂತರ್ಜಲ ಹೆಚ್ಚಳದಿಂದಾಗಿ ಬೆಚ್ಚಿ ಬೀಳುತ್ತಿದ್ದಾರೆ. ಹಲವು ಬಡಾವಣೆಗಳ ಮನೆಗಳಲ್ಲಿ, ವಾಣಿಜ್ಯ ಮಳಿಗೆಗಳಲ್ಲಿ ನೀರು ಉಕ್ಕುತ್ತಿದೆ! ಕಳೆದ ಹಾಗೂ ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟುಉಲ್ಬಣವಾಗಿದ್ದು, ಗದಗ- ಬೆಟಗೇರಿ ಅವಳಿ ನಗರದಲ್ಲಿಯೂ ಭೀಷ್ಮ ಕೆರೆಯ ಸುತ್ತಲೂ ಇರುವ ಮನೆಗಳಿಗೆ ಒಂದು ರೀತಿಯಲ್ಲಿ ಜಲ ಕಂಟಕ ಎದುರಾಗಿದೆ.

ಬತ್ತಿದ ಬಾವಿಗಳಲ್ಲಿ ನೀರು:

Increased Groundwater in Gadag Due to Heavy Rain

ಅವಳಿ ನಗರದಲ್ಲಿ ಐದಾರು ವರ್ಷಗಳ ಹಿಂದೆ ಹನಿ ನೀರಿಗೂ ಪರದಾಟ ನಡೆಸುತ್ತಿದ್ದರು. ತೆರೆದ ಬಾವಿಗಳಲ್ಲ, 400 ಅಡಿವರೆಗೂ ಬೋರ್‌ವೆಲ್‌ ಕೊರೆಸಿರುವ ಕೊಳವೆ ಬಾವಿಗಳೇ ಬತ್ತಿ ಹೋಗಿದ್ದವು. ಯಾವಾಗ 2016ರಲ್ಲಿ ಭೀಷ್ಮ ಕೆರೆಯನ್ನು ತುಂಗಭದ್ರಾ ನದಿಯ ಸಿಂಗಟಾಲೂರ ಏತ ನೀರಾವರಿ ಕಾಲುವೆಯ ಮೂಲಕ ಭರ್ತಿ ಮಾಡಿದ 2 ವರ್ಷಗಳ ನಂತರ ಅವಳಿ ನಗರದ ಎಲ್ಲಾ ಬಾವಿಗಳು, ಕೊಳವೆ ಬಾವಿಗಳಲ್ಲಿ ನೀರು ಬರಲು ಪ್ರಾರಂಭಿಸಿದ್ದು, ಇದರಿಂದಾಗಿ ಅವಳಿ ನಗರದ ನೀರಿನ ಸಮಸ್ಯೆ ಇತ್ಯರ್ಥವಾಗಿದೆ.

ಈಗ ಮನೆಯಲ್ಲೂ ನೀರು:

ಸತತ 2 ವರ್ಷದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭರ್ತಿಯಾಗಿರುವ ಭೀಷ್ಮ ಕೆರೆಯಲ್ಲಿ ಹನಿ ನೀರು ಕೂಡಾ ಕಡಿಮೆಯಾಗಿಲ್ಲ. ಸತತವಾಗಿ 5 ವರ್ಷಗಳಿಂದ ಕೆರೆಯಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಗದಗ ನಗರದ ಡಂಬಳ ನಾಕಾ, ವೀರನಾರಾಯಣ ದೇವಸ್ಥಾನದ ಪ್ರದೇಶ ಹಾಗೂ ಸರಾಫ್‌ಗಟ್ಟಿಸೇರಿದಂತೆ ಬೆಟಗೇರಿ ತಗ್ಗು ಪ್ರದೇಶದ ಮನೆಗಳಲ್ಲಿ ಕಳೆದ ಒಂದು ತಿಂಗಳಿಂದ ನಿರಂತರವಾಗಿ ನೀರು ಜಿನುಗುತ್ತಿವೆ. ಅದರಲ್ಲಿಯೂ ಗದಗ ನಗರದ ಸರಾಫ್‌ಗಟ್ಟಿಭಾಗದಲ್ಲಿರುವ ವಾಣಿಜ್ಯ ಸಂಕೀರ್ಣಗಳ ನೆಲ ಮಹಡಿಗಳಲ್ಲಿ ನಿತ್ಯವೂ ಅಪಾರ ಪ್ರಮಾಣದಲ್ಲಿ ನೀರು ಹೊರಬರುತ್ತಿದ್ದು, ಇದಿರಿಂದಾಗಿ ನೆಲಮಹಡಿಯಲ್ಲಿನ ಹಲವಾರು ಅಂಗಡಿಗಳು ಸ್ಥಗಿತಗೊಂಡಿದ್ದು, ಕಟ್ಟಡಗಳ ಮಾಲೀಕರು ನಿತ್ಯವೂ ಸಂಗ್ರಹವಾಗುವ ನೀರು ಹೊರಹಾಕಲು ಯಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ.

ಅನ್‌ಲಾಕ್‌ ಆದರೂ ಚೇತರಿಸಿದ ರಾಜ್ಯದ ಮುದ್ರಣ ಕಾಶಿ ಗದಗ

ಭಯ ಶುರುವಾಗಿದೆ:

ಇದುವರೆಗೂ ಕೇವಲ ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ಜಿನುಗುತ್ತಿತ್ತು. ಆದರೀಗ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಪ್ರಾರಂಭವಾಗಿದ್ದು, ಇದೇ ರೀತಿ ಅಂತರ್ಜಲ ಪ್ರಮಾಣ ಹೆಚ್ಚುತ್ತಾ ಹೋದಲ್ಲಿ ಹಲವಾರು ಕಟ್ಟಡಗಳಿಗೆ ಭಾರೀ ಪ್ರಮಾಣದ ಹಾನಿಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರಲ್ಲಿ ಭಯ ಶುರುವಾಗಿದೆ. ಇದಕ್ಕೆ ಸರ್ಕಾರ ಏನಾದರೂ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಇದಕ್ಕೆ ನಗರಸಭೆಯಿಂದ ಯಾವುದೇ ಪರಿಹಾರವಿಲ್ಲ:

Increased Groundwater in Gadag Due to Heavy Rain

ನಗರದ ಭೀಷ್ಮ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಅದರೊಂದಿಗೆ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಹೀಗಾಗಿ ಅವಳಿ ನಗರದಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ತಗ್ಗು ಪ್ರದೇಶ ಮನೆಗಳು, ವಾಣಿಜ್ಯ ಸಂಕೀರ್ಣದಲ್ಲಿ ನೀರು ಜಿನುಗುತ್ತಿದ್ದು, ವ್ಯಾಪಾರಸ್ಥರು ಹಾಗೂ ಕೆಲ ಮನೆಗಳ ನಿವಾಸಿಗಳಿಗೆ, ತಗ್ಗು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಮಸ್ಯೆಯಾಗಿದೆ. ಇದಕ್ಕೆ ನಗರಸಭೆಯಲ್ಲಿ ಯಾವುದೇ ಪರಿಹಾರವಿಲ್ಲ ಈ ಕುರಿತು ಗಣಿ ಮಾತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.

ಅಂತರ್ಜಲ ಕೊರತೆಯಿಂದ ಇದುವರೆಗೂ ತತ್ತರಿಸಿದ್ದ  ಅವಳಿ ನಗರದ ಜನತೆ ಈಗ ಅಂತರ್ಜಲ ಹೆಚ್ಚಳದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು. ಅಂತರ್ಜಲ ಉಳಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಗಂಭೀರ ಚಿಂತನೆಯಾಗಬೇಕಿದೆ ಎಂದು ಸಾರ್ವಜನಿಕ ನಾಗೇಶ ಹುಬ್ಬಳ್ಳಿ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios