ವಿಶೇಷವಾಗಿ ಖರ್ಜೂರಕ್ಕೆ ಬೇಡಿಕೆ, ನಗರದಲ್ಲಿ ಮಾರುಕಟ್ಟೆಗಳಲ್ಲಿ ವಿದೇಶಿ ಒಣಹಣ್ಣುಗಳಿಗೆ ಹೆಚ್ಚು ಬೇಡಿಕೆ, ಆದರೂ ದರ ಮಾತ್ರ ಕಡಿಮೆ. 

ಬೆಂಗಳೂರು(ಏ.02): ರಂಜಾನ್‌ ಮಾಸ ಉಪವಾಸ ವ್ರತ ಆರಂಭವಾದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಒಣ ಹಣ್ಣು (ಡ್ರೈಫ್ರೂಟ್‌)ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಿಶೇಷವಾಗಿ ಖರ್ಜೂರ ಸೇರಿದಂತೆ ಇತರೆ ಒಣಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ.

ಶಿವಾಜಿ ನಗರದ ರಸೆಲ್‌ ಮಾರುಕಟ್ಟೆಯಲ್ಲಿ ಶನಿವಾರ ಡ್ರೈಫä್ರಟ್‌ ಖರೀದಿಗೆ ಜೋರಾಗಿತ್ತು. ರಿಯಾಯಿತಿ ದರದಲ್ಲಿ ಒಣಹಣ್ಣುಗಳು ಮಾರಾಟವಾಗುತ್ತಿರುವ ಕಾರಣ ಹೆಚ್ಚಿನ ಬೇಡಿಕೆಯಿದೆ. ಜೊತೆಗೆ ಎಂ.ಜಿ. ರಸ್ತೆ, ಬಸವನಗುಡಿ, ಜಯನಗರ 4ನೇ ಬ್ಲಾಕ್‌, ಮಲ್ಲೇಶ್ವರ, ಮಡಿವಾಳ, ಯಶವಂತಪುರ ಹೀಗೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಡ್ರೈಫ್ರೂಟ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಸ್ಥಳೀಯ ವ್ಯಾಪಾರಸ್ಥರು ನಗರದ ವಿವಿಧ ಮಸೀದಿ ದರ್ಗಾ ಎದುರು, ಬಡಾವಣೆ ಬಸ್‌ ನಿಲ್ದಾಣಗಳಲ್ಲೂ ಒಣ ಹಣ್ಣುಗಳನ್ನು ಮಾರಾಟದಲ್ಲಿ ತೊಡಗಿದ್ದಾರೆ.

Ramadan 2023: ತಿಂಗಳ ಕಾಲ ಉಪವಾಸ ಮಾಡುವುದರ ಪ್ರಾಮುಖ್ಯತೆ ಏನು?

ತರಹೇವಾರಿ ಖರ್ಜೂರ:

ರಸೆಲ್‌ ಮಾರುಕಟ್ಟೆಯಲ್ಲಿ ವಿದೇಶಿ ಸೇರಿ ಸುಮಾರು 30ಕ್ಕೂ ಹೆಚ್ಚಿನ ಬಗೆಯ ಖರ್ಜೂರಗಳು ಮಾರಾಟಕ್ಕಿವೆ. ಸೌದಿ ಅರೇಬಿಯಾ, ಜೋರ್ಡಾನ್‌, ಇರಾನ್‌, ದಕ್ಷಿಣ ಆಫ್ರಿಕಾಗಳಿಂದ ಖರ್ಜೂರ ತರಿಸಲಾಗಿದೆ. ಉಳಿದ ಒಣಹಣ್ಣುಗಳಾದ ಅರ್ಕೂಟ್‌ ಸೇರಿದಂತೆ ಅಷ್ಘಾನಿಸ್ತಾನದ ಪೈನ್‌ ಬೀಜ, ಬ್ರೆಜಿಲ್‌ ನಟ್ಸ್‌, ಆಸ್ಪ್ರೇಲಿಯಾದ ಹೆಜಲ್‌ ನಟ್ಸ್‌, ಇರಾನ್‌ನ ಒಣ ಅಂಜೂರ, ಇರಾನಿ ಬಾದಾಮಿ ಕೂಡ ಬಂದಿವೆ ಎಂದು ವ್ಯಾಪಾರಸ್ಥರು ತಿಳಿಸಿದರು.

ಔಷಧೀಯ ಗುಣ:

ಚರ್ಮದ ತೊಂದರೆ ನಿವಾರಿಸುವ ಮೆಕ್ಕಾ ಮದೀನಾದ ಮಾಂಬ್ರುಮ್‌ ಖರ್ಜುರ, ಕಿಡ್ನಿ, ಹೃದಯ ತೊಂದರೆ ನಿವಾರಣೆಯ ಔಷಧೀಯ ಗುಣದ ಸೌದಿಯ ಅಜ್ವಾ ಖರ್ಜುರ, ರಕ್ತ ಹೆಚ್ಚಿಸಲು ಹಿಮೋಗ್ಲೊಬಿನ್‌ ಆರೋಗ್ಯ ಕಾಪಾಡುವ ಕಲ್ಮಿ, ಕಬ್ಬಿಣದ ಕೊರತೆ ನೀಗಿಸುವ ಸಗಾಯಿ ಖರ್ಜುರಗಳು ವಿಶೇಷವಾಗಿ ಮಾರಾಟಕ್ಕೆ ಬಂದಿವೆ. ಜಗತ್ತಿನಲ್ಲೇ ಏಕೈಕವಾದ ಸಕ್ಕರೆ ರಹಿತವಾದ ದಕ್ಷಿಣ ಆಫ್ರಿಕಾದ ಮೆಡ್ಜೊಲ್‌ ಕಿಂಗ್‌ ಖರ್ಜುರವನ್ನು ಮಧುಮೇಹ ಉಳ್ಳವರು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಇರಾನ್‌ ಡೇಟ್ಸ್‌, ಸುರ್ಕಿ ಡೇಟ್ಸ್‌, ಝಾಹೇದಿ ಡೇಟ್ಸ್‌ಗೆ ವಿಶೇಷ ಬೇಡಿಕೆಯಿದೆ ಎನ್ನುತ್ತಾರೆ ವ್ಯಾಪಾರಿಗಳು.

ದರ ಕಡಿಮೆ

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಬ್ಬದ ಕಾರಣಕ್ಕೆ ದರವೂ ಕಡಿಮೆಯಿದೆ. ಈ ಬಾರಿ ಖರ್ಜೂರದ ಬಂಪರ್‌ ಸೀಸನ್‌ ಬಂದಿರುವುದು ಕೂಡ ಇದಕ್ಕೆ ಕಾರಣ. ಸಾಮಾನ್ಯ ಖರ್ಜೂರ ಪ್ರತಿ ಕೇಜಿಗೆ .280​​​​​-.900ಕ್ಕೆ ಮಾರಾಟವಾಗುತ್ತಿದೆ. ಕೇಜಿಗೆ .2400 ಇರುತ್ತಿದ್ದ ಅಜ್ವಾ ಖರ್ಜೂರ ಈಗ .1200 ಇದೆ. ಅಪರೂಪದ, ವಿದೇಶಿ ಖರ್ಜೂರಗಳ ಬೆಲೆ ಕಡಿಮೆಯಿದೆ. ಒಣಖರ್ಜೂರ ಮಾತ್ರ .390ಕ್ಕೆ ಏರಿಕೆಯಾಗಿದೆ.

Vijayapura: ರಂಜಾನ್‌ ಹಿನ್ನೆಲೆ ಪ್ರಯುಕ್ತ ಗುಮ್ಮಟನಗರಿಯಲ್ಲಿ ನಂದಿನಿ‌ ಹಾಲಿಗೆ ಹೆಚ್ಚಿದ ಬೇಡಿಕೆ!

ವ್ಯಾಪಾರಸ್ಥ ಅಕ್ರಮ್‌ ಮಾತನಾಡಿ, ರಂಜಾನ್‌ ಎಂದು ಕೇವಲ ಮುಸಲ್ಮಾನರು ಮಾತ್ರವಲ್ಲ. ಹಿಂದೂ-ಕ್ರಿಶ್ಚಿಯನ್ನರು ಸೇರಿ ಎಲ್ಲರೂ ಒಣಹಣ್ಣುಗಳ ಖರೀದಿಗೆ ಹೆಚ್ವಾಗಿ ಬರುತ್ತಿದ್ದಾರೆ. ಕೋವಿಡ್‌ ಇಲ್ಲದಿದ್ದರೂ ಕಳೆದ ವರ್ಷ ಒಣಹಣ್ಣಿನ ಸೀಸನ್‌ ಅಷ್ಟಾಗಿ ಇರಲಿಲ್ಲ. ವ್ಯಾಪಾರವೂ ಹೇಳಿಕೊಳ್ಳುವಷ್ಟುಆಗಿರಲಿಲ್ಲ. ಆದರೆ, ಈ ಬಾರಿ ಉಪವಾಸ ಮಾಸದ ಆರಂಭದಿಂದಲೇ ಡ್ರೈಫ್ರೂಟ್‌ಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೇಡಿಕೆ ಇದೆ ಎಂದರು.

ಡ್ರೈಫ್ರೂಟ್‌ ದರ (ಕೇಜಿ)

ಸಗಾಯಿ .700
ಕಲ್ಮಿ .700
ಅಜ್ವಾ .1200
ಮೆಡ್ಜಾಲ್‌ ಕಿಂಗ್‌ .1600
ಇರಾನ್‌ ಖರ್ಜೂರ .2080
ಒಣದ್ರಾಕ್ಷಿ .280
ಗೋಡಂಬಿ .840
ಬಾದಾಮಿ .720
ಅಷ್ಘಾನಿಸ್ತಾನ ಅಂಜೂರ .1400
ಸಾದಾ ಅಂಜೂರ .1200
ಪೈನಾ ನಟ್‌ .4000
ಕಾಶ್ಮೀರಿ ಅಕ್ರೋಟ್‌ .400
ಕ್ಯಾಲಿಫೋರ್ನಿಯಾ ವಾಲ್ನಟ್‌ .800

ಎಂದಿನಂತೆ ವಿಶೇಷವಾಗಿ ಖರ್ಜೂರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಮಾರುಕಟ್ಟೆಗೆ ಈ ಬಾರಿ 27ಕ್ಕೂ ಹೆಚ್ಚು ಬಗೆಯ ಖರ್ಜೂರಗಳು ಮಾರಾಟಕ್ಕೆ ಬಂದಿವೆ. ಹಬ್ಬದ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿದೆ ಅಂತ ರಸೆಲ್‌ ಮಾರ್ಕೆಟ್‌ ಟ್ರೇಡರ್ಸ್‌ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಮಹ್ಮದ್‌ ಇದ್ರಿಸ್‌ ಚೌಧರಿ ತಿಳಿಸಿದ್ದಾರೆ.