ಬೆಂಗಳೂರು(ಅ.16): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 45 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, 3,788 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಕೊರೋನಾ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಗುರುವಾರ 45 ಮಂದಿ ಸಾವಿಗೀಡಾಗುವ ಮೂಲಕ ನಗರದಲ್ಲಿ ಈವರೆಗೆ 3,462 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ನಗರದಲ್ಲಿ ಅ.1ರಿಂದ ಅ.15ರ ಅವಧಿಯಲ್ಲಿ 526 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 64,530 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, 45,881 ಮಂದಿ ಗುಣಮುಖರಾಗಿದ್ದಾರೆ.

ಕೊಪ್ಪಳ: ಕೊರೋನಾಕ್ಕಂಜಿ ಮನೆಯಲ್ಲೇ ಠಿಕಾಣಿ, 6-7 ತಿಂಗಳಿಂದ ಆಚೆಯೇ ಬಾರದ ಕುಟುಂಬ​..!

ಗುರುವಾರ 2375 ಪುರುಷರು, 1,412 ಮಹಿಳೆಯರು, ಓರ್ವ ಲೈಂಗಿಕ ಅಲ್ಪ ಸಂಖ್ಯಾತರು ಸೇರಿದಂತೆ ಒಟ್ಟು 3,788 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 3,520 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 2,28,462ಕ್ಕೆ ಏರಿಕೆಯಾಗಿದೆ. 65,268 ಸಕ್ರಿಯ ಪ್ರಕರಣಗಳಿದ್ದು, 352 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.