ಕೊಪ್ಪಳ(ಅ.15): ಮಹಾಮಾರಿ ಕೊರೋನಾಕ್ಕೆ ಅಂಜಿ ಸುಮಾರು 6-7 ತಿಂಗಳಿಂದ ಇಡೀ ಕುಟುಂಬಸ್ಥರು ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ. ತುರ್ತು ಅಗತ್ಯ ಹೊರತುಪಡಿಸಿ, ಯಾವುದಕ್ಕೂ ಹೋಗದೆ ಮನೆಯಲ್ಲಿ ಇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ತಾಲೂಕಿನ ಘಟ್ಟರಡ್ಡಿಹಾಳ ಗ್ರಾಮದ ಸಂಗಪ್ಪ ಚನ್ನಬಸಪ್ಪ ಡಂಬಳ ಅವರ ಕುಟುಂಬ ಕಳೆದ ಆರೇಳು ತಿಂಗಳಿಂದ ಮನೆಯಿಂದ ಆಚೆಯೇ ಬಂದಿಲ್ಲ. ಮನೆಯಲ್ಲಿ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಕ್ಕಳು ಇದ್ದಾರೆ. 2-3 ತಿಂಗಳಿಗಾಗುವಷ್ಟು ಕಿರಾಣಿಯನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಲ್ಲದೆ ತೀರಾ ಅನಿವಾರ್ಯವಾಗಿ ಬರಲೇಬೇಕು ಎಂದಾದರೆ ಮುನ್ನೆಚ್ಚರಿಕೆಯನ್ನು ವಹಿಸಿಕೊಂಡು ಬರುತ್ತಾರೆ. ಬಳಿ​ಕ ಮನೆ ಸೇರಿದರೆ ಆಯಿತು, ಹೊರಬರುವುದೇ ಇಲ್ಲ. ತರಕಾರಿಯನ್ನು ಅಧಿಕ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಅವುಗಳನ್ನು ಚೆನ್ನಾಗಿ ತೊಳೆದು ಬಳಕೆ ಮಾಡುತ್ತಾರೆ. ಇದಲ್ಲದೆ ಮನೆ ಮದ್ದು ಮಾಡಿಕೊಂಡು ಸೇವಿಸುತ್ತಾರೆ. ಕಷಾಯ ಮಾಡಿಕೊಂಡು ಕುಡಿಯುತ್ತಾರೆ.

ಕೊಪ್ಪಳ: ಸತತ ಮಳೆಗೆ ಗುಡ್ಡದಲ್ಲಿ ಮಣ್ಣು ಸವಕಳಿ, ಬಂಡೆಗಳು ಉರು​ಳುವ ಆತಂಕ..!

ಜೀವ ಇದ್ದರೆ ಜೀವನ. ಜೀವವೇ ಇಲ್ಲದೆ ಜೀವನ ಎಲ್ಲಿಂದ ಬರುತ್ತದೆ. ಅದರಲ್ಲೂ ಮನೆಯಲ್ಲಿ ಹಿರಿಯರು ಮತ್ತು ಮಕ್ಕಳು ಇರುವುದರಿಂದ ಅವರನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ ಎನ್ನುತ್ತಾರೆ. ಅಷ್ಟಕ್ಕೂ ಇದೊಂದು ವರ್ಷ ದುಡಿಯದೇ ಇದ್ದರೆ ಜೀವನ ಮುಗಿದೇ ಹೋಗುವುದಿಲ್ಲ. ಇನ್ನು ಕಾಲ ಇದ್ದೇ ಇದೆ. ಈಗ ಬಂದಿರುವ ಕೊರೋನಾದಿಂದ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಎನ್ನು​ತ್ತಾರೆ ಕುಟುಂಬ​ಸ್ಥ​ರು.

ಜೀವ ಇದ್ದರೆ ಜೀವನ, ಮುಂದೆ ದುಡಿಯುವುದು ಇದ್ದೇ ಇದೆ. ಹೀಗಾಗಿ, ನಾವು ಮನೆಯಲ್ಲಿಯೇ ಇದ್ದೇವೆ. ತುರ್ತು ಅಗತ್ಯದ ಸಂದರ್ಭದಲ್ಲಿ ಮಾತ್ರ ಮನೆಯಿಂದ ಆಚೆ ಹೋಗುತ್ತೇವೆ ಎಂದು ಪುತ್ರ ಅಂದನಾಪ್ಪ ಡಂಬಳ ಅವರು ತಿಳಿಸಿದ್ದಾರೆ.