Asianet Suvarna News Asianet Suvarna News

ಅನಾರೋಗ್ಯ ಪೀಡಿತನಿಗೆ ಕೊರೋನಾ ಹೆಮ್ಮಾರಿ ಗಂಟು ಬಿದ್ದಿದ್ದು ಹೇಗೆ? ಹೆಚ್ಚಿದ ಆತಂಕ

ಅನಾರೋಗ್ಯದಿಂದ ಬಳಲುತ್ತಿದ್ದ ಆಳಂದ ಪಟ್ಟಣದ ಶರಣನಗರ ಬಡಾವಣೆ ನಿವಾಸಿ 57 ವರ್ಷದ ವ್ಯಕಿಗೆ ಕೋವಿಡ್‌ ಸೋಂಕು ಪತ್ತೆ| ಎಲ್ಲಾ ಕಡೆ ರಸ್ತೆಗಳು ಸೀಲ್‌ಡೌನ್‌, ಹೆಚ್ಚಿದ ಕಟ್ಟೆಚ್ಚರ| ಅನಾವಶ್ಯಕ ಓಡಾಟ ಕಂಡುಬಂದಲ್ಲಿ ಕಾನೂನು ಕ್ರಮ|

Increased anxiety in Aland in Kalaburagi District due to Coronavirus
Author
Bengaluru, First Published Apr 25, 2020, 3:31 PM IST

ಕಲಬುರಗಿ/ಆಳಂದ(ಏ.25): ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಣದ ಶರಣನಗರ ಬಡಾವಣೆ ನಿವಾಸಿ 57 ವರ್ಷದ ವ್ಯಕಿಗೆ ಕೋವಿಡ್‌ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಾಗಡಿ ಹೊಂದಿಕೊಂಡಿರುವ ಆಳಂದದಲ್ಲಿ ಆತಂಕ ಹೆಚ್ಚಿದಂತಾಗಿದೆ.

ಹೀಗಾಗಿ ಶರಣ ನಗರ ಸಂಪರ್ಕದ 7, 8 ಹಾಗೂ 9 ಮೂರು ವಾರ್ಡ್‌ಗಳಿಗೆ ಬರುವ ಎಲ್ಲ ಭಾಗದ ಎಂಟು ರಸ್ತೆಗಳನ್ನು ತಾಲೂಕು ಆಡಳಿತ ಸೀಲ್‌ಡೌನ್‌ ಮಾಡಿದೆ. ಸೋಂಕಿತನಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಶೋಧ ಕಾರ್ಯಾಚರಣೆ ಬಿರುಸಿನಿಂದ ಕೈಗೊಳ್ಳಲಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿದ್ದ, ಮನೆಯಲ್ಲೇ ಇದ್ದಂತಹ ವ್ಯಕ್ತಿ ಹೊರಗೇನು ಓಡಾಟ ಮಾಡಿಲ್ಲ. ಆದರೂ ಹೇಗೆ ಸೋಂಕು ತಗಲಿದೆ ಎಂದು ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆ ಹರಸಾಹಸಪಡುತ್ತಿದೆ.

ನಾಲ್ಕು ತಿಂಗಳು ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಕಲಬುರಗಿ ಜನತೆ

ಹೆಚ್ಚಿದ ಜನರ ಪರದಾಟ:

ವಾರ್ಡ್‌ 7, 8 ಮತ್ತು 9ರ ಅರ್ಧ ಭಾಗವನ್ನು ಕಂಟೇನ್‌ಮೆಂಟ್‌ ಝೋನ್‌ ಮಾಡಿ ಸಂಚಾರ ನಿರ್ಬಂದಿಸಿದ್ದರಿಂದ ಅಕ್ಕಪಕ್ಕದ ಜನ ದಿನಸಿಗೂ ಪರದಾಡುವಂತಾಗಿದೆ. ಇಲ್ಲಿನ ಅನೇಕ ಮನೆಗಳಲ್ಲಿ ಶೌಚಾಲಗಳೇ ಇಲ್ಲ. ಇವರ ಮನೆಗಳಲ್ಲಿ ಶೌಚಾಲಯವಿಲ್ಲ, ಹೊರಗಡೆ ಬಯಲಿಗೆ ಬರಬೇಕು, ಅದಕ್ಕೂ ಪರದಾಟ ಶುರುವಾಗಿದೆ. ಈ ಬಡಾವಣೆಯ ಜನರೊಂದಿಗೆ ಹಾಲು, ತರಕಾರಿ ಇತರ ವ್ಯವಹಾರ ಕೈಗೊಳ್ಳದಂತೆ ಮತ್ತೊಂದು ಬಡಾವಣೆ ಜನ ನಿರ್ಬಂಧಿಸುತ್ತಿದ್ದಾರೆ. ಈ ವಾರ್ಡ್‌ಗಳಿಗೆ ಸಂಬಂಧಿಸಿದ 790 ಮನೆಗಳಲ್ಲಿ 4423 ಜನಸಂಖ್ಯೆ ವಾಸವಾಗಿದ್ದಾರೆ, ಇವರನ್ನೆಲ್ಲ ಹೋಂ ಕ್ವಾರಂಟೈನ್‌ ಇಡಲಾಗಿದೆ. ಪ್ರತಿದಿನ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿತ್ಯ ಭೇಟಿ ನೀಡಿ ಇಲ್ಲಿನವರ ಆರೋಗ್ಯದ ಏರುಪೇರು ಗಮನಿಸಿ ನಿಗಾ ಇಡಲಾಗುತ್ತಿದೆ.
ಸೋಂಕಿತನಿಗೆ ಪ್ರಥಮ ಸಂಪರ್ಕಕ್ಕೆ ಬಂದ 56 ಜನರ ಪೈಕಿ ಖಾಸಗಿ ಹಾಗೂ ಸರ್ಕಾರಿ ವೈದ್ಯರು, ನರ್ಸ್‌ ಒಳಗೊಂಡು 50 ಜನರನ್ನು ಈಗಾಗಲೇ ಕಲಬುರಗಿ ಇಎಸ್‌ಐ ಆಸ್ಪತ್ರೆಗೆ ಮುಂಜಾಗೃತ ಕ್ರಮವಾಗಿ ತಪಾಸಣೆಗೆ ದಾಖಲಿಸಲಾಗಿದೆ.

ಪ್ರಥಮ ಸಂಪರ್ಕಕ್ಕೆ ಬಂದ ಇನ್ನೂ ಆರು ಜನರನ್ನು ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ಸೋಂಕಿತನ ಮನೆಯ ಎಂಟು ಜನರು ಸೇರಿ ಹಲವರು ದ್ವಿತೀಯ ಸಂಪರ್ಕಕ್ಕೆ ಬಂದ ಒಟ್ಟು 192 ಜನರಿದ್ದಾರೆಂಬುದು ಅಂದಾಜಿಸಲಾಗಿದೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಳಂದ , ಆರೋಗ್ಯಾಧಿಕಾರಿ ಡಾ. ಜಿ.ಅಭಯಕುಮಾರ ಹೇಳಿದ್ದಾರೆ. 

ಕೊರೋನಾ ಸೋಂಕಿತ ವ್ಯಕ್ತಿ ಪತ್ತೆಯಾದ ಕಾರಣ ಮುಂಜಾಗೃತ ಕ್ರಮ ಅನುಸರಿಸುವುದು ತೀರಾ ಅಗತ್ಯವಾಗಿದೆ. ಇದಕ್ಕೆ ನಾಗರಿಕರು ಸಹಕರಿಸಬೇಕು. ಪರಿಸ್ಥಿತಿ ಇನ್ನಷ್ಟುಗಂಭೀರತೆ ಪಡೆಯುವ ಮುನ್ನವೇ ಸಾರ್ವಜನಿಕರು ಎಚ್ಚರಿಕೆಯ ಕ್ರಮ ಅನುಸರಿಸಬೇಕು. ಅನಾವಶ್ಯಕ ಓಡಾಟ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಳಂದ ತಹಸೀಲ್ದಾರ್‌ ದಯಾನಂದ ಪಾಟೀಲ ತಿಳಿಸಿದ್ದಾರೆ. 

Follow Us:
Download App:
  • android
  • ios