ಗದಗ(ಮಾ.03): ಗದಗ ನಗರದ ಕರ್ನಾಟಕ ಭವನದ ಬಳಿ ಚಿರತೆ ಪ್ರತ್ಯಕ್ಷವಾದ ಶಂಕೆ ವ್ಯಕ್ತವಾಗಿದ್ದು, ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

ಇಲ್ಲಿನ ಕೆಲ ನಿವಾಸಿಗಳಿಗೆ ಮಂಗಳವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಹೆಜ್ಜೆ ಗುರುತಿನ ಶೋಧಕ್ಕೆ ಮುಂದಾಗಿದ್ದಾರೆ. ಗದಗ ನಗರದ ಜಿಲ್ಲಾಡಳಿತ ಭವನ ಹಿಂಬದಿ ಹಾಗೂ ಹೊಸ ಹುಡ್ಕೋ ಕಾಲೋನಿ ಹಿಂಭಾಗದಲ್ಲಿ ಪೊಲೀಸರ ಸಹಯೋಗದಲ್ಲಿ ಶೋಧ ಕಾರ್ಯ ಚುರುಕುಗೊಂಡಿದೆ.

ಕಪ್ಪತಗುಡ್ಡದಲ್ಲಿವೆ ಚಿರತೆ

ಕಳೆದ ವರ್ಷ ಜಿಲ್ಲೆಯ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ವ್ಯಾಪ್ತಿಯ ಸುಮಾರು 64 ಚದುರ ಕಿಮೀ ಪ್ರದೇಶ ಹೊಂದಿರುವ ಕಪ್ಪತ್‌ಗುಡ್ಡ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಆ ಭಾಗದ ಲಂಬಾಣಿ ಜನರು ಟೆಂಪೋ ಟ್ರಾಕ್ಸ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆಯನ್ನು ಕಂಡು ವಿಡಿಯೋ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡಿತ್ತು. ಇದಾದ ಬಳಿಕ ಕಪ್ಪತಗುಡ್ಡದಲ್ಲಿ ಚಿರತೆ ಇರುವುದನ್ನು ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಗಳೂ ಸ್ಪಷ್ಟಪಡಿಸಿದ್ದರು. ನಂತರ ಜಿಲ್ಲೆಯಲ್ಲಿ ಎಲ್ಲೂ ಚಿರತೆ ಕಾಣಿಸಿಕೊಂಡಿರಲಿಲ್ಲ. ಆದರೆ, ಕಪ್ಪತ ಗುಡ್ಡದ ಸೆರಗು ಪ್ರಾರಂಭವಾಗುವ ಗದಗ ಸನಿಹದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ಗದಗ: ಕಪ್ಪತ್ತಗುಡ್ಡಕ್ಕೆ ಬೆಂಕಿ, ಅಪಾರ ಪ್ರಮಾಣದಲ್ಲಿ ಅರಣ್ಯ ನಾಶ

ಕಪ್ಪತಗುಡ್ಡಕ್ಕೆ ಪದೇ ಪದೇ ಬೆಂಕಿ

ಕಳೆದ ಕೆಲ ದಿನಗಳಿಂದ ಕಪ್ಪತಗುಡ್ಡ ಪ್ರದೇಶದಲ್ಲಿ ಹಲವು ಬಾರಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದ್ದು, ಪ್ರಾಣಿ ಸಂಕುಲಕ್ಕೂ ತೊಂದರೆಯಾಗಿದೆ. ಪದೇ ಪದೇ ಕಪ್ಪತಗುಡ್ಡಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಪರಿಣಾಮದಿಂದಲೇ ಚಿರತೆ ಗದಗ ನಗರದ ಸನಿಹಕ್ಕೆ ಬಂದಿರಬಹುದು ಎನ್ನುವ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಏನನ್ನೂ ಸ್ಪಷ್ಟಪಡಿಸುತ್ತಿಲ್ಲ. ಆದರೆ, ಜನ ಮಾತ್ರ ಗದಗ ನಗರದ ಸನೀಹದಲ್ಲೇ ಚಿರತೆ ಪ್ರತ್ಯಕ್ಷವಾಗಿದೆ ಎಂಬುದನ್ನು ಕೇಳುತ್ತಲೇ ತೀವ್ರ ಆತಂಕ್ಕೊಳಗಾಗಿದ್ದು, ಆ ಭಾಗದ ನಿವಾಸಿಗಳೆಲ್ಲರೂ ಮನೆಯ ಬಾಗಿಲು ಹಾಕಿಕೊಂಡು ಕುಳಿತಿದ್ದಾರೆ.

ಡ್ರೋಣ್‌ ಬಳಕೆ

ಚಿರತೆ ಕಾಣಿಸಿಕೊಂಡಿರುವ ವಿಷಯ ತಿಳಿದು ಸ್ಥಳಕ್ಕೆ ಬಂದಿರುವ ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಡ್ರೋಣ್‌ ಕ್ಯಾಮೆರಾ ಬಳಕೆ ಮಾಡಿ ಜಿಲ್ಲಾಡಳಿತ ಭವನದ ಹಿಂಭಾಗದ ಪ್ರದೇಶ, ಹೊಸ ಹುಡ್ಕೋ ಕಾಲೋನಿ ಹಿಂಬದಿ ಪ್ರದೇಶದಲ್ಲಿ ಚಿರತೆಯನ್ನು ಹುಡುಕುತ್ತಿದ್ದಾರೆ. ಇಲ್ಲಿ ವರೆಗೂ ಗದಗ ನಗರದಲ್ಲಿ ಚಿರತೆ ಇರುವುದು ಪ್ರತ್ಯಕ್ಷವಾಗಲಿ, ಹೆಜ್ಜೆ ಗುರುತಿನ ಮೂಲಕವಾಗಲಿ ಪತ್ತೆಯಾಗಿಲ್ಲ. ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅರವಳಿಕೆ ತಜ್ಞರು ಪಕ್ಕದ ಕೊಪ್ಪಳ ಜಿಲ್ಲೆಯಿಂದ ಬಂದಿದ್ದಾರೆ.