ಉಳ್ಳಾಗಡ್ಡಿ ದರ ಏರಿದ್ದೇ ತಡ ಕಾರ್ಮಿಕರ ಸಂಬಳವೂ ಹೆಚ್ಚಳ!
ದೇಶಾದ್ಯಂತ ಈರುಳ್ಳಿಗೆ ಬಂಗಾರ ಬೆಲೆ| ತಾಲೂಕಿನಾದ್ಯಂತ ಈರುಳ್ಳಿ ಬೆಳೆಯುವವರ ಸಂಖ್ಯೆ ಹೆಚ್ಚಳ| ಕೂಲಿ ಕಾರ್ಮಿಕರು ಸಿಗದೇ, ಕಾರ್ಮಿಕರಿಗೆ ಭಾರೀ ಬೇಡಿಕೆ| ಕಂಗಾಲಾದ ರೈತರು|
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಡಿ.23): ದೇಶಾದ್ಯಂತ ಈರುಳ್ಳಿಗೆ ಬಂಗಾರ ಬೆಲೆ ಬಂದಿದೆ. ಹೀಗಾಗಿ ಈರುಳ್ಳಿ ಖರೀದಿಸುತ್ತಿರುವ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ಆದರೆ, ಈರುಳ್ಳಿ ಬೆಳೆದವನೆ ಕುಬೇರ ಎಂಬ ಮಾತು ಇದೀಗ ಕೇಳಿಬರುತ್ತಿದೆ. ಇದರಿಂದ ತಾಲೂಕಿನಾದ್ಯಂತ ಈರುಳ್ಳಿ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರು ಸಿಗದೇ, ಕಾರ್ಮಿಕರಿಗೆ ಭಾರೀ ಬೇಡಿಕೆ ಬಂದಿದೆ.
ಕಳೆದ ಒಂದು ತಿಂಗಳಿಂದ ಈರುಳ್ಳಿ ದರ ಗಮನಿಸಿದರೆ, ಈರುಳ್ಳಿಗೆ ಸೇಬು ಹಣ್ಣಿನ ದರಕ್ಕಿಂತ ಹೆಚ್ಚಿದೆ ಎಂಬುವುದು ವೇದ್ಯವಾಗುತ್ತದೆ. ಮುಂದಿನ ದಿನಗಳಲ್ಲಿಯೂ ಈ ದರದಲ್ಲಿ ಭಾರಿ ಪ್ರಮಾಣದಲ್ಲೇನು ಇಳಿಕೆಯಾಗದು ಎಂಬ ಅಪಾರ ನಂಬಿಕೆಯಿಂದ ಈ ಭಾಗದ ರೈತರು ಈರುಳ್ಳಿ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ವರ್ಷ ನಾವು ಪ್ರತಿ ದಿನದ 8 ಗಂಟೆಗೆ ಕೆಲಸದ ಸಮಯಕ್ಕೆ ಈರುಳ್ಳಿ ನಾಟಿ ಮಾಡಲು ಪಡೆಯುತ್ತಿರುವ ಕೂಲಿ ಕೇವಲ 200 ಇತ್ತು. ಈಗ ಪ್ರತಿ ಗಂಟೆಗೆ 50 ರಂತೆ ಕೂಲಿ ಪಡೆಯುತ್ತಿದ್ದೇವೆ. 8 ಗಂಟೆಗಳ ಕಾಲ ಕೆಲಸ ಮಾಡಿದರೆ, ನಮಗೆ 400 ಸಂಬಳ ದೊರಕುತ್ತದೆ. ಗ್ರಾಮೀಣ ಭಾಗದಲ್ಲಿ 6 ಗಂಟೆ ಮಾತ್ರ ವಿದ್ಯುತ್ ಇರುವುದರಿಂದ ಉಳಿದ ಸಮಯವನ್ನು ಹೊಂಡದ ನೀರು ಬಳಸುವ ರೈತರ ತೋಟಗಳಿಗೆ ಹೋಗಿ ದುಡಿಯುತ್ತಿದ್ದೇವೆ ಎಂದು ಈರುಳ್ಳಿ ಬೆಳೆಗಾರರ ಹೊಲದಲ್ಲಿ ಕೆಲಸ ಮಾಡುತ್ತಿರುವ ಬಾಯವ್ವ ಹೇಳುತ್ತಿದ್ದಾರೆ.
ಪ್ರತಿ ಗಂಟೆಗೆ 50 ಸಂಬಳ ಕೊಡುತ್ತೇವೆ ಎಂದರೂ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಈರುಳ್ಳಿ ನಾಟಿ ಮಾಡುವ ಕೂಲಿ ಕಾರ್ಮಿಕರನ್ನು ಪಡೆಯಲು ಒಂದುವಾರ ಮುಂಚಿತವಾಗಿ ಸರದಿ ಹಚ್ಚಬೇಕು. ಈ ಬಾರಿ ಮಳೆ ಉತ್ತಮವಾಗಿದ್ದರಿಂದ ಬಾವಿ, ಬೋರ್‌ವೆಲ್‌ಗಳಿಗೆ ನೀರು ಚೆÜನ್ನಾಗಿರುವುದರಿಂದ ಬೇಸಿಗೆ ಈರುಳ್ಳಿ ಚೆನ್ನಾಗಿ ಬರುವ ಭರವಸೆ ನಮ್ಮಲ್ಲಿದೆ. ಈರುಳ್ಳಿ ದರ ಕೂಡ ಮುಂದಿನ ದಿನಗಳಲ್ಲಿ ಇದೇ ರೀತಿ ಇರಲಿದೆ ಎಂಬ ಭರವಸೆ ನಮಗಿದೆ. ಏಕೆಂದರೆ ಈ ವರ್ಷ ಪ್ರವಾಹ ಬಂದಿದ್ದರಿಂದ ಕೆಲವು ಕಡೆಗಳಲ್ಲಿ ಈರುಳ್ಳಿ ಹಾಳಾಗಿ ದರ ಒಮ್ಮೆಲೆ ಹೆಚ್ಚಾಗಿದೆ. ನಮಗೂ ಕೂಡ ಮಳೆಗಾಲದಲ್ಲಿ ನಾಟಿ ಮಾಡಿದ ಈರುಳ್ಳಿಗೆ 10 ಸಾವಿರು ರು.ಗೆ ಒಂದು ಕ್ವಿಂಟಲ್ ಬೆಲೆ ದೊರಕಿದೆ. ಇದರಿಂದ ಸಂತಸವಿದೆ. ಇದು ನಮ್ಮ ರೈತಾಪಿ ಜೀವನದಲ್ಲಿಯೇ ಮೊದಲ ದರ ಎಂದರೆ ತಪ್ಪಲ್ಲ ನಮಗೆ ತುಂಬಾ ಖುಷಿ ನೀಡಿದೆ ಎಂದು ಈರುಳ್ಳಿ ಬೆಳೆಗಾರ ದಯಾನಂದಯ್ಯ ವಸ್ತ್ರದ ತಿಳಿಸುತ್ತಾರೆ.
ಈರುಳ್ಳಿ ಬೆಲೆ ಹೆಚ್ಚಾದ ಕಾರಣ ಈ ಭಾಗದಲ್ಲಿ ಪ್ರವಾಹ ಬಂದ ಕಾರಣ ಕೖಷ್ಣಾ ನದಿ ತೀರದ ಅಕ್ಕಪಕ್ಕದಲ್ಲಿ ಕಬ್ಬಿನ ಬೆಳೆ ಸಂಪೂರ್ಣ ಹಾಳಾಗಿದೆ. 4 ತಿಂಗಳಲ್ಲಿ ಬರುವ ಬೆಳೆ ಈರುಳ್ಳಿ ಆಗಿದ್ದರಿಂದ ನದಿಯಲ್ಲಿ ನೀರು ಈ ಬಾರಿ ಹೆಚ್ಚು ದಿನಗಳವರೆಗೆ ಇರುವ ಭರವಸೆ ಇದೆ. ನಮ್ಮ ಭಾಗದಲ್ಲಿಯೂ ಹೆಚ್ಚಿನ ಪ್ರಮಾಣದ ರೈತರು ಈರುಳ್ಳಿ ಬೆಳೆಯಲು ಮುಂದಾಗಿದ್ದಾರೆ ಎಂದು ಹನಗಂಡಿ ಗ್ರಾಮದ ರೈತ ಪ್ರಸನ್ನಕುಮಾರ ದೇಸಾಯಿ ಅವರು ಹೇಳಿದ್ದಾರೆ.
ಕಾರ್ಮಿಕರು ಸಿಗದೇ ಕಂಗಾಲು
ಎರಡು ತಿಂಗಳ ಹಿಂದೆ 20 ರಿಂದ 30ಕ್ಕೆ ಪ್ರತಿ ಕೆಜಿ ಸಿಗುತಿದ್ದ ಈರುಳ್ಳಿ, ಸದ್ಯ 60-100ಕ್ಕೆ ಒಂದು ಕೆಜಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಗ್ರಾಹಕರು ಬೆಲೆ ಕೇಳುತ್ತಲೇ ಬೆವರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈರುಳ್ಳಿ ಸೇರಿದಂತೆ ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಮಳೆ, ಪ್ರವಾಹ ಹಿನ್ನೆಲೆ ಬೆಳೆಯಲಾದ ಈರುಳ್ಳಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬೇರೆ ರಾಜ್ಯಗಳ ಮೇಲೆ ಅವಲಂಬನೆಯಾಗಿರುವುದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಆದರೆ, ರೈತರು ಮುಂದಿನ ದಿನಗಳ ಲೆಕ್ಕವಿಟ್ಟುಕೊಂಡು ಈರುಳ್ಳಿ ಬೆಳೆಯುತ್ತಿದ್ದಾರೆ.ಆದರೆ, ಇದಕ್ಕೆ ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಇದರು ರೈತನ್ನು ಕಂಗಾಲು ಮಾಡಿದೆ.