ಕಾವೇರಿ ನದಿಗೆ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ನೀರು ಹೊರ ಬಿಡುತ್ತಿರುವ ಪರಿಣಾಮ ನೀರಿನ ಹರಿವು ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜನತೆ ತಮ್ಮ ಹಾಗೂ ಜಾನುವಾರುಗಳ ಬಗ್ಗೆ ಹೆಚ್ಚು ಗಮನ ಹರಿಸಿ, ನೀರಿಗಿಳಿಯುವುದು, ನದಿದಡದಲ್ಲಿ ಹೆಚ್ಚು ಓಡಾಟ ಮಾಡಬಾರದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನದಿ ಪಾತ್ರದ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ಕನಕಪುರ: ಕಾವೇರಿ ನದಿಗೆ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ನೀರು ಹೊರ ಬಿಡುತ್ತಿರುವ ಪರಿಣಾಮ ನೀರಿನ ಹರಿವು ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜನತೆ ತಮ್ಮ ಹಾಗೂ ಜಾನುವಾರುಗಳ ಬಗ್ಗೆ ಹೆಚ್ಚು ಗಮನ ಹರಿಸಿ, ನೀರಿಗಿಳಿಯುವುದು, ನದಿದಡದಲ್ಲಿ ಹೆಚ್ಚು ಓಡಾಟ ಮಾಡಬಾರದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನದಿ ಪಾತ್ರದ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅಧಿಕಾರಿಗಳು, ಕಾವೇರಿ ನದಿ ಪಾತ್ರದ ಮುತ್ತತ್ತಿ, ಮೇಕೆದಾಟು, ಸಂಗಮ ಹಾಗೂ ತಮಿಳುನಾಡಿನ ಹೊಗೆನಿಕಲ್ ಜಲಪಾತಗಳಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಾಗಿದೆ. ನದಿ ಪಾತ್ರದ ಜನತೆ ಹಾಗೂ ಪ್ರವಾಸಿಗರು ಅದರಲ್ಲೂ ಯುವಕ- ಯುವತಿಯರು ನೀರಾಟ ಆಡಲು ನೀರಿಗಿಳಿಯಬಾರದು ಎಂದು ಕಟ್ಟೆಚ್ಚರ ವಹಿಸುವಂತೆ ತಿಳಿಸಿದ್ದಾರೆ.

ಕೆಆರ್‌ಎಸ್‌ನಲ್ಲಿ ಏರಿದ ನೀರಿನ ಮಟ್ಟ

ಕೆಆರ್‌ಎಸ್‌ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಭಾನುವಾರ ಬೆಳಗ್ಗೆಯಿಂದ ಅಣೆಕಟ್ಟೆಯಿಂದ 50 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಾಗಲೇ ಜಲಾಶಯದ ನೀರಿನ ಮಟ್ಟ 123.10 ಅಡಿಗೆ ತಲುಪಿದೆ. ಅಣೆಕಟ್ಟೆಗೆ 69,617 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಒತ್ತಡವನ್ನು ಕಡಿಮೆ ಮಾಡಲು ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗಿದೆ. ಅಣೆಕಟ್ಟೆಯಲ್ಲಿ 46.567 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಟ್ಟಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಶನಿವಾರ ಬೆಳಗ್ಗೆ 51,375 ಕ್ಯುಸೆಕ್‌ ಇದ್ದ ಒಳಹರಿವಿನ ಪ್ರಮಾಣ ರಾತ್ರಿ 8 ರ ಸಮಯಕ್ಕೆ 60,224 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಭಾನುವಾರ ಬೆಳಗಿನ ವೇಳೆಗೆ 69,617 ಕ್ಯುಸೆಕ್‌ಗೆ ಏರಿಕೆಯಾಗಿತ್ತು.

ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ನಿರ್ಬಂಧ:

ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಟ್ಟಿರುವುದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಶನಿವಾರ 15 ಸಾವಿರ ಕ್ಯುಸೆಕ್‌ ನೀರು ಹರಿಸುತ್ತಿದ್ದುದರಿಂದ ದೋಣಿ ವಿಹಾರ ಸ್ಥಗಿತಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಪ್ರಸ್ತುತ ನದಿಗೆ 50 ಸಾವಿರ ಕ್ಯುಸೆಕ್‌ ನೀರನ್ನು ಹರಿಸುತ್ತಿರುವುದರಿಂದ ಪಕ್ಷಿಧಾಮದ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ಆದೇಶ ಹೊರಡಿಸಿದ್ದಾರೆ.