ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ: ಕೇಂದ್ರಕ್ಕೆ ಅಭಿನಂದನೆ
ತೆಂಗು ಬೆಳೆಗಾರರ ಸಂಕಷ್ಟವನ್ನು ಅರ್ಥಮಾಡಿಕೊಂಡ ನರೇಂದ್ರ ಮೋದಿ ಅವರು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ರು.11750ರಿಂದ 12ಸಾವಿರಕ್ಕೆ ಹೆಚ್ಚಿಸಿ ಆದೆಶ ಹೊರಡಿಸಿದೆ.
ತಿಪಟೂರು: ತೆಂಗು ಬೆಳೆಗಾರರ ಸಂಕಷ್ಟವನ್ನು ಅರ್ಥಮಾಡಿಕೊಂಡ ನರೇಂದ್ರ ಮೋದಿ ಅವರು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ರು.11750ರಿಂದ 12ಸಾವಿರಕ್ಕೆ ಹೆಚ್ಚಿಸಿ ಆದೆಶ ಹೊರಡಿಸಿದೆ.
ಹಾಗಾಗಿ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕ್ವಿಂಟಾಲ್‌ಗೆ 1500 ರು. ಪ್ರೋತ್ಸಾಹ ಬೆಲೆಯನ್ನು ನೀಡಿರುವುದರಿಂದ ನಫೆಡ್‌ಗೆ ಮಾರಾಟ ಮಾಡುವ ರೈತರಿಗೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 13,500 ರು. ಬೆಲೆ ಸಿಗಲಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರದ ಸಚಿವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್ ಅಭಿನಂದನೆ ಸಲ್ಲಿಸಿದ್ದಾರೆ.
ಕೊಬ್ಬರಿ ಬೆಲೆ ಏರಿಸದ ಕೈ ಸರ್ಕಾರ
ತಿಪಟೂರು : ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದರೂ ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು. ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತನ್ನು ತಪ್ಪಿ ರೈತರನ್ನು ಪಾತಾಳಕ್ಕೆ ತಳ್ಳಿ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳೆಯನ್ನು ಜೀವನಾಧಾರವನ್ನಾಗಿಸಿಕೊಂಡಿರುವ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದ್ದು ಕ್ವಿಂಟಲ್‌ಗೆ 8500 ಇದ್ದ ಬೆಲೆ ಈಗ 7500ಕ್ಕೆ ಇಳಿಕೆಯಾಗಿದೆ. ಕೊಬ್ಬರಿ ಬೆಲೆ ಹೆಚ್ಚಳ ಮಾಡುವಂತೆ ಕಳೆದ ಎರಡು ವರ್ಷಗಳಿಂದ ರೈತರೊಂದಿಗೆ ನಿರಂತರ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. ಚುನಾವಣೆ ಸಂದರ್ಭದಲ್ಲಿ ರೈತರಿಗೆ ಸುಳ್ಳು ಭರವಸೆ ಮೂಡಿಸಿ ಈಗ ಗ್ಯಾರಂಟಿ ಯೋಜನೆಗಳಲ್ಲಿ ಸರ್ಕಾರ ಮುಳುಗಿ ಹೋಗಿದ್ದು ಯಾವುದೇ ಅನುದಾನಗಳಾಗಲಿ ಅಥವಾ ಅಭಿವೃದ್ಧಿಯಾಗಲಿ ಇಲ್ಲದೆ ಶೂನ್ಯವಾಗಿದೆ. ರೈತರು ಜೀವನ ಪರ್ಯಂತ ನೆಮ್ಮದಿಯಿಂದ ಜೀವನ ನಡೆಸದಂತಹ ದುಸ್ಥಿತಿಗೆ ಸರ್ಕಾರ ತಂದೊಡ್ಡಿದೆ ಎಂದರು.
ಕಳೆದ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಕೊಬ್ಬರಿ ಬೆಂಬಲ ಬೆಲೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ 1250 ರು. ಜಾರಿ ಮಾಡಿಸಿದ್ದರು. ಆದರೆ ರಾಜ್ಯ ಸರ್ಕಾರ ಬೆರಣಿಕೆಯಷ್ಟು ರೈತರಿಗೆ ಮಾತ್ರ ನೀಡಿ ಏಕಾಏಕಿ ನಫೆಡ್ ಕೇಂದ್ರವನ್ನೇ ಮುಚ್ಚುವ ಮೂಲಕ ರೈತರಿಗೆ ಮಹಾ ಮೋಸ ಮಾಡಿತು. ಬಿಜೆಪಿ ಸರ್ಕಾರ ರೈತರಿಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಕೊಟ್ಟರೆ ಈ ಸರ್ಕಾರವೂ ಸಹ ರೈತರನ್ನು ದಿವಾಳಿಯನ್ನಾಗಿ ಮಾಡುತ್ತಿದೆ. ರೈತರೊಂದಿಗೆ ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಎರಡು ತಿಂಗಳಾದರೂ ಗಮನಹರಿಸಿಲ್ಲ. ರೈತರು ಯಾವಾಗ ಕೊಬ್ಬರಿಗೆ ಬೆಲೆ ಸಿಗುತ್ತದೆ ಎಂದು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇಷ್ಟೆಲ್ಲಾ ಹೋರಾಟಗಳಾದರೂ ಜಿಲ್ಲೆಯಲ್ಲಿರುವ ಇಬ್ಬರು ಸಚಿವರಾಗಲಿ ಅಥವಾ ಇಲ್ಲಿನ ಶಾಸಕರಾಗಲಿ ಧ್ವನಿ ಎತ್ತಿಲ್ಲ. ಆದ್ದರಿಂದ ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಬಗ್ಗೆ ಸಚಿವರು ಹಾಗೂ ಶಾಸಕರು ಸರ್ಕಾರದ ಗಮನಸೆಳೆದು ನಫೆಡ್ ಕೇಂದ್ರ ತೆರೆಯುವಂತೆ ಆಗ್ರಹಿಸಿ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 15ಸಾವಿರ ರು. ಮಾಡುವಂತೆ ಒತ್ತಾಯಿಸಬೇಕೆಂದು ಆಗ್ರಹಿಸಿದರು.