Asianet Suvarna News Asianet Suvarna News

Udupi; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ

ಕೊಲ್ಲೂರು ಕ್ಷೇತ್ರದಲ್ಲಿ ಒಳಚರಂಡಿ ಯೋಜನೆಯ ಅಸಮರ್ಪಕ ನಿರ್ವಹಣೆಯಿಂದಾಗಿ ದೇವಳದ ಪರಿಸರ ಗಬ್ಬೆದ್ದು ಹೋಗಿದೆ. ತಾಯಿ ಮುಕಾಂಬಿಕೆಯ ದರ್ಶನಕ್ಕೆ ಮೊದಲು ಪುಣ್ಯಸ್ನಾನ ಕೈಗೊಳ್ಳೋಣವೆಂದರೆ  ಶುದ್ಧ ನೀರೇ ಹರಿಯುವುದಿಲ್ಲ.

Inadequate management of sewer projects around Kollur mookambika temple gow
Author
Bengaluru, First Published Jun 4, 2022, 2:47 PM IST

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜೂ.4): ಭಾರತದಲ್ಲಿ ಪ್ರಸಿದ್ಧ ವೆನಿಸಿದ ಶಕ್ತಿಪೀಠ ಕೊಲ್ಲೂರಿಗೆ ಬರುವ ಭಕ್ತರ ಭಾವನೆಗಳೊಂದಿಗೆ ಆಡಳಿತ ಯಂತ್ರ ಚೆಲ್ಲಾಟವಾಡುತ್ತಿದೆ. ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋಗುವ ಮೊದಲು ಅಲ್ಲಿ ಹರಿಯುವ ನದಿಯಲ್ಲಿ ಮಿಂದು ಹೋಗುವುದು ಸಂಪ್ರದಾಯ. ಆದರೆ ತಾಯಿ ಮುಕಾಂಬಿಕೆ ಸುತ್ತಲೂ ಹರಿಯುವ ಪುಣ್ಯನದಿ ಕೊಳಚೆ ಗುಂಡಿಯಾಗಿದೆ.

ಉಡುಪಿ ‌ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಕ್ಷೇತ್ರದಲ್ಲಿ ಒಳಚರಂಡಿ ಯೋಜನೆಯ ಅಸಮರ್ಪಕ ನಿರ್ವಹಣೆಯಿಂದಾಗಿ ದೇವಳದ ಪರಿಸರ ಗಬ್ಬೆದ್ದು ಹೋಗಿದೆ. ತಾಯಿ ಮುಕಾಂಬಿಕೆಯ ದರ್ಶನಕ್ಕೆ ಮೊದಲು ಪುಣ್ಯಸ್ನಾನ ಕೈಗೊಳ್ಳೋಣವೆಂದರೆ  ಶುದ್ಧ ನೀರೇ ಹರಿಯುವುದಿಲ್ಲ. ಕೊಡಚಾದ್ರಿ ಬೆಟ್ಟದ ತಪ್ಪಲಲ್ಲಿ ಇದ್ದರೂ, ಸಾವಿರಾರು ಬಗೆಯ ಗಿಡಮೂಲಿಕೆಗಳ ಮೂಲಕ ನೀರು ಹರಿದು ಬಂದರೂ, ಕಟ್ಟಡಗಳಿಂದ ಹೊರಬಂದ ಕೊಳಕು ನೀರಿನೊಂದಿಗೆ ಬೆರೆತು ಕಲುಷಿತಗೊಂಡಿದೆ.

ಕೊಡಚಾದ್ರಿ ಬೆಟ್ಟದಲ್ಲಿ ಹುಟ್ಟುವ ಅಗಸ್ತ್ಯತೀರ್ಥ, ಚಕ್ರತೀರ್ಥ ,ನಾಗತೀರ್ಥ ,ಅಗ್ನಿ ತೀರ್ಥ, ಕಾಶಿ ತೀರ್ಥ ಸೇರಿದಂತೆ ಒಟ್ಟು 64 ಪುಣ್ಯತೀರ್ಥಗಳ ಸಂಗಮ ಸ್ಥಳವನ್ನು ಸೌಪರ್ಣಿಕಾ ನದಿ ಎಂದು ಕರೆಯುತ್ತಾರೆಂಬ ನಂಬಿಕೆಯಿದೆ. ಸದ್ಯ ಕ್ಷೇತ್ರದ ಆಸುಪಾಸು ಇರುವ ಅಗ್ನಿ ತೀರ್ಥ ಮತ್ತು ಕಾಶಿ ತೀರ್ಥಗಳು ಭಕ್ತರ ಪಾಲಿಗೆ ಪುಣ್ಯ ತಾಣಗಳಾಗಿವೆ.

ಮಠಾಧೀಶರ ಹೋರಾಟ ತಡೆದರೆ ರಾಜ್ಯಕ್ಕೆ ಬೆಂಕಿ ಹತ್ತುತ್ತೆ : PRAMOD MUTHALIK ಎಚ್ಚರಿಕೆ

ಕೊಲ್ಲೂರು ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಅನೇಕ ಬಹುಮಹಡಿ ಕಟ್ಟಡಗಳು ವಸತಿಗೃಹಗಳು ತಲೆಯೆತ್ತಿದೆ. ಕ್ಷೇತ್ರಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿರುವುದರಿಂದ ಈ ರೀತಿಯ ಅಭಿವೃದ್ಧಿ ಕಾರ್ಯಗಳು ಅನಿವಾರ್ಯವೇನೋ ಹೌದು. ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಂಡು ಒಳಚರಂಡಿ ವ್ಯವಸ್ಥೆ ಮಾತ್ರ ಇಲ್ಲಿ ರೂಪುಗೊಂಡಿಲ್ಲ.

ಕಾಶಿ ತೀರ್ಥವಂತೂ ಸಂಪೂರ್ಣ ಹಾಳಾಗಿದ್ದು ಲಾಡ್ಜ್ ಗಳಿಂದ ಹರಿದು ಬರುವ ಕೊಳಚೆ ನೀರಿನಿಂದ ಮಲಿನವಾಗಿ ಬಿಟ್ಟಿದೆ. ಈ ಕೊಳಚೆ ನೀರಿನಲ್ಲಿ ಕಾಲು ತಿಳಿದುಕೊಂಡೇ ಕ್ಷೇತ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಕೆಲವೊಂದು ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು ಅಲ್ಲಲ್ಲಿ ಕೊಳಚೆನೀರು ಹರಿದು ಬರುತ್ತಿವೆ.

ಖಾಸಗಿ ಪ್ಲೇ ಸ್ಕೂಲ್ ಗಳಿಗೆ ಸೆಡ್ಡು ಹೊಡೆದ Udupiಯ ಹವಾನಿಯಂತ್ರಿತ ಅಂಗನವಾಡಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಸುಮಾರು 20 ಕೋಟಿ ಅನುದಾನವನ್ನು ಬಳಸಿಕೊಂಡು ಒಳಚರಂಡಿ ಯೋಜನೆ ರೂಪಿಸಲಾಗಿದೆ. ರಾಜ್ಯಸರಕಾರದ ನೀರು ಸರಬರಾಜು ಒಳಚರಂಡಿ ಮಂಡಳಿಯ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಆರಂಭದಿಂದಲೇ ಯೋಜನೆ ಕುಂಟುತ್ತಾ ಸಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ವಿಲೇವಾರಿ ಮಾಡುವ ಯೋಜನೆಯಾಗಿದ್ದರೂ ಅನಿಯಮಿತ ವಿದ್ಯುತ್ ಸರಬರಾಜಿನ ನೆಪಮಾಡಿ ಶುದ್ಧೀಕರಣ ಘಟಕವನ್ನು ಕೂಡ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ

ಒಳಚರಂಡಿ ಯೋಜನೆಯ ನಿರ್ವಹಣೆ ಮಾಡಬೇಕಾಗಿರುವ ಗ್ರಾಮಪಂಚಾಯತ್ ಹಿಂದೇಟು ಹಾಕುತ್ತಿದೆ. ಅನುಭವಿ ಸಿಬ್ಬಂದಿ ಮತ್ತು ತಂತ್ರಜ್ಞಾನದ ವ್ಯವಸ್ಥೆ ಇದ್ದರೆ ಮಾತ್ರ ಗ್ರಾಮಪಂಚಾಯತಿ ನಿರ್ವಹಣೆ ಮಾಡುವುದು ಸಾಧ್ಯ ಪ್ರಸ್ತುತ ಇರುವ ಯೋಜನೆಯ ಸಮಸ್ಯೆಗಳು ಬಗೆಹರಿಯುವವರೆಗೆ ಗ್ರಾಮ ಪಂಚಾಯತಿ ನಿರ್ವಹಣೆ ಉಸ್ತುವಾರಿ ಒಪ್ಪಿಕೊಳ್ಳುವುದಿಲ್ಲ ಎಂದು ಪಂಚಾಯತ್ ಅಧ್ಯಕ್ಷ ಶಿವರಾಮ ಕೃಷ್ಣಭಟ್ಟ ಹೇಳುತ್ತಾರೆ.

ಪ್ರತಿಷ್ಠಿತ Spelling Bee ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಮೂಲದ ಹರಿಣಿ ಲೋಗನ್!

ಪುಣ್ಯ ತೀರ್ಥಗಳು ಹಾಳಾಗಿರುವುದರಿಂದ ಭಕ್ತರ ಭಾವನೆಗೆ ಘಾಸಿಯಾಗಿದೆ. ಜೊತೆಗೆ ಪಶ್ಚಿಮಘಟ್ಟದ ತಪ್ಪಲಿನ ಹರಿಯುವ ನದಿಯಲ್ಲಿ ಇರುವ ಜಲಚರಗಳಿಗೂ ಅಪಾಯವಾಗಿದೆ. ಲಕ್ಷಾಂತರ ಭಕ್ತರು ಭೇಟಿ ಕೊಡುವ ಈ ಕ್ಷೇತ್ರದ ಒಳಚರಂಡಿ ವ್ಯವಸ್ಥೆಯನ್ನು ಶೀಘ್ರ ಸರಿಪಡಿಸಬೇಕಾಗಿದೆ. ಸ್ವಚ್ಛತೆ ಇರುವಲ್ಲಿ ದೇವರು ಇರುತ್ತಾರೆ ಅನ್ನುವ ನಂಬಿಕೆಯನ್ನು ಪುನರ್ ಸ್ಥಾಪಿಸಬೇಕಾಗಿದೆ.

Follow Us:
Download App:
  • android
  • ios