Asianet Suvarna News Asianet Suvarna News

Chitradurga News: ನಾಯಕನಹಟ್ಟಿಯಲ್ಲಿ ಅಳತೆಗೋಲಿಲ್ಲದ ನೀರಿನ ಕರ

ವಾರ್ಷಿಕ 10.28 ಕೋಟಿ ಆದಾಯ ಘೋಷಿಸಿಕೊಂಡಿರುವ ಇಲ್ಲಿನ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯಡಿ ಐದು ವರ್ಷಗಳಿಗೊಮ್ಮೆ ನೀರಿಗಾಗಿಯೇ 5 ಕೋಟಿ ರು. ಅನುದಾನ ಒದಗಿಸಿದ್ದರೂ, ಇದೀಗ ವಿವಿ ಸಾಗರ ಜಲಾಶಯ ನೀರು ಪೂರೈಕೆ ಬಾಕಿ ಮೊತ್ತ ಕಟ್ಟಲು ಅನುದಾನಕ್ಕಾಗಿ ಪೇಚಾಡುತ್ತಿದೆ. ಅಕ್ರಮ ಸಕ್ರಮದಡಿ ಪ್ರತಿ ನಲ್ಲಿಗಳಿಗೆ 8 ಸಾವಿರ ನೀರಿನ ಕಂದಾಯ ವಸೂಲಿಗೆ ಮುಂದಾಗಿದೆ.

In Nayakanahatti, there is no measure of water bill at chitradurga rav
Author
First Published Jan 4, 2023, 10:17 AM IST

ವಿಶೇಷ ವರದಿ

 ನಾಯಕನಹಟ್ಟಿ (ಜ.4) : ವಾರ್ಷಿಕ 10.28 ಕೋಟಿ ಆದಾಯ ಘೋಷಿಸಿಕೊಂಡಿರುವ ಇಲ್ಲಿನ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯಡಿ ಐದು ವರ್ಷಗಳಿಗೊಮ್ಮೆ ನೀರಿಗಾಗಿಯೇ 5 ಕೋಟಿ ರು. ಅನುದಾನ ಒದಗಿಸಿದ್ದರೂ, ಇದೀಗ ವಿವಿ ಸಾಗರ ಜಲಾಶಯ ನೀರು ಪೂರೈಕೆ ಬಾಕಿ ಮೊತ್ತ ಕಟ್ಟಲು ಅನುದಾನಕ್ಕಾಗಿ ಪೇಚಾಡುತ್ತಿದೆ. ಅಕ್ರಮ ಸಕ್ರಮದಡಿ ಪ್ರತಿ ನಲ್ಲಿಗಳಿಗೆ 8 ಸಾವಿರ ನೀರಿನ ಕಂದಾಯ ವಸೂಲಿಗೆ ಮುಂದಾಗಿದೆ.

ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧಿಕಾರಾವಧಿಯಲ್ಲಿ ಗ್ರಾಮದಲ್ಲಿ 6 ಸಾವಿರ ನಲ್ಲಿಗಳನ್ನು ಅಳವಡಿಸಲಾಗಿದೆ. ಈ ನಲ್ಲಿಗಳಿಗೆ ಗ್ರಾಮ ಪಂಚಾಯಿತಿ ಕಡತಗಳಲ್ಲಿ ಸಕ್ರಮ ದಾಖಲೆಗಳಿಲ್ಲ. ಈಗಿನ ಪಟ್ಟಣ ಪಂಚಾಯಿತಿ ಕಡತದಲ್ಲಿ ಒಟ್ಟು 16 ವಾರ್ಡ್‌ಗಳಲ್ಲಿ ಕೇವಲ 1,200 ನಲ್ಲಿಗಳಿಗೆ ಮಾತ್ರ ಸಕ್ರಮ ಎಂಬುದಾಗಿ ದಾಖಲಿಸಲಾಗಿದೆ. ಉಳಿದ 4,800 ನಲ್ಲಿಗಳಿಗೆ ಅಕ್ರಮ ಎಂದು ಘೋಷಿಸಲಾಗಿದ್ದು, ಸಕ್ರಮಗೊಳಿಸಲು 8 ಸಾವಿರ ರು.ವಸೂಲಿ ಮಾಡಲಾಗುತ್ತಿದೆ.

ಚಳ್ಳಕೆರೆಯಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ; ಜಿಲ್ಲೆಗೆ ಸಚಿವರಿದ್ದೂ ಏನು ಪ್ರಯೋಜನ?

ಗ್ರಾಮ ಪಂಚಾಯಿತಿ ಆಡಳಿತಾವಧಿಯಲ್ಲಿ ನೀರು ಪೂರೈಕೆ ಮುಖ್ಯ ಉದ್ದೇಶ ಇರಿಸಿಕೊಂಡು ಬಡವರಿಂದ ಕೇವಲ 500 ಮೂಲ ಶುಲ್ಕ ನಿಗದಿ ಮಾಡಿಕೊಂಡು ನಲ್ಲಿ ಸಂಪರ್ಕ ಕಲ್ಪಿಸಲಾಗಿತ್ತು. ಇದರಿಂದ ಬಡ ಕುಟುಂಬ ವರ್ಗದವರೂ ಬೀದಿ ನದಿಗಳನ್ನು ನೆಚ್ಚಿಕೊಳ್ಳದೇ ಸ್ವಂತ ನಲ್ಲಿ ಸಂಪರ್ಕ ಪಡೆದುಕೊಂಡಿದ್ದು, ಸಕ್ರಮದ ಯಾವ ದಾಖಲೆಯನ್ನೂ ನೀಡಿಲ್ಲ. 25 ವರ್ಷದ ಹಿಂದೆ ಈ ನಲ್ಲಿ ಸಂಪರ್ಕ ಪಡೆದುಕೊಂಡಿರುವ 4500 ಕುಟುಂಬಗಳು ಪಟ್ಟಣದಲ್ಲಿವೆ. ಇವರು ಹೊಂದಿರುವ ನಲ್ಲಿಗಳನ್ನು ಅಕ್ರಮ ಎಂಬುದಾಗಿ ಪಟ್ಟಣ ಪಂಚಾಯಿತಿ ಯಾವ ಮಾನದಂಡ ಮತ್ತು ಆಧಾರದ ಮೇಲೆ ಘೋಷಿಸಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಅನುದಾನ ಬಳಕೆ ಇಲ್ಲ

ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಎಂಬುದಕ್ಕೆ ನಿತ್ಯ ನೀರು ಸರಬರಾಜು ಯಂತ್ರೋಪಕರಣಗಳ ರಿಪೇರಿ ಸಾಕ್ಷಿಯಾಗಿದೆ. ಪ್ರಸಕ್ತ ವರ್ಷ ಪಟ್ಟಣ ಪಂಚಾಯಿತಿ ತನ್ನ ಅಯವ್ಯಯದಲ್ಲಿ ರಿಪೇರಿಗಾಗಿಯೇ 25ಲಕ್ಷ ತೆಗೆದಿಸಿರುವುದು ಇದಕ್ಕೆ ಪುಷ್ಟಿನೀಡುತ್ತದೆ. ಹಾಗೇ ನೋಡಿದರೆ ಸರ್ಕಾರ ಯಾವ ಅನುದಾನವನ್ನೂ ಪಟ್ಟಣ ಪಂಚಾಯಿತಿ ಸದ್ಬಳಕೆ ಮಾಡಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಅನುದಾನ 28 ಲಕ್ಷ ಮೀಸಲಿದೆ. ಆದರೆ, ಯಾವ ಕಾಮಗಾರಿಗೆ ಬಳಸಲಾಗಿದೆ ಎಂಬುದು ಸ್ಪಷ್ಟವಾಗಿ ನಮೂದಿಸಿಲ್ಲ. ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 1.60 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 1.50 ಕೋಟಿ ರು.ಇದೆ. ಈ ಅನುದಾನವನ್ನು ಅಭಿವೃದ್ಧಿಗೆ ಬಳಸುವ ಕಡೆ ಇಲ್ಲಿನ ಮುಖ್ಯಾಧಿಕಾರಿ ಆಗಲಿ, ಆಡಳಿತಾಧಿಕಾರಿಗೆ ಆಗಲಿ ಗಮನ ಇಲ್ಲ. ಅಚ್ಚರಿ ಎಂದರೆ ಸ್ವಚ್ಛ ಭಾರತ ಮಿಷನ್‌ ಅನುದಾನ 50 ಲಕ್ಷ ರು.ಮೀಸಲಿರಿಸಲಾಗಿದೆ. ಆದರೆ, ಸ್ವಚ್ಛತೆ ಕಾಣದೇ ಇಡೀ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಪಟ್ಟಣದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಚಿಕನ್‌ ಸೆಂಟರ್‌ಗಳಿಂದ ಬಿದ್ದ ಮಾಂಸದ ತ್ಯಾಜ್ಯ, ಮಟನ್‌ ಅಂಗಡಿಗಳ ತ್ಯಾಜ್ಯದಿಂದ ಇಡೀ ಪಟ್ಟಣದ ವಾತಾವರಣ ಅಯೋಮಯ ವಾಗಿದೆ.

ಗ್ರಾಮ ಪಂಚಾಯಿತಿ ಇದ್ದಾಗ ಪ್ರತಿ ತಿಂಗಳು 25 ರು.ನೀರಿನ ಕಂದಾಯ ನಿಗದಿಯಾಗಿತ್ತು. 2016ರಲ್ಲಿ ಅದನ್ನು ಏಕಾಏಕಿ 80ಕ್ಕೆ ಏರಿಸಲಾಗಿದೆ. ಈಗ 90 ರು. ನಿಗದಿ ಮಾಡಲಾಗಿದೆ. ನೀರಿನ ಕಂದಾಯ ಪಡೆಯುವುದು ತಪ್ಪಲ್ಲ. ಯಾವ ಅಳತೆಗೋಲು ಇಲ್ಲದೇ ಬಡ ಜನರಿಂದ 8 ಸಾವಿರದಷ್ಟುನೀರಿನ ಕಂದಾಯ ವಸೂಲಿ ಮಾಡುತ್ತಿರುವುದು ಜನವಿರೋಧಿ ಎನ್ನುತ್ತಾರೆ ನಾಗರಿಕರಾದ ದೊರೆ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಬೋರಯ್ಯ.

Chitradurga: ಚಿರತೆ ಪ್ರತ್ಯಕ್ಷ, ಕುರುಡಿಹಳ್ಳಿ ಗ್ರಾಮದ ಜನರಲ್ಲಿ ಮೂಡಿದ ಆತಂಕ

ಪಟ್ಟಣ ಪಂಚಾಯಿತಿ ಸಿಬ್ಬಂದಿಯೇ ನಲ್ಲಿ ಸಂಪರ್ಕ ಕಲ್ಪಿಸುತ್ತಾರೆ. ಹಾಗಾಗಿ, ಅಕ್ರಮ ನಲ್ಲಿಗಳ ಮಾತೆ ಇಲ್ಲ. ನೀರು ಪೂರೈಕೆ ಮಾಡುವುದು ಸರ್ಕಾರ ಮತ್ತು ಸ್ಥಳೀಯ ಆಡಳಿತ ಮೂಲ ಕರ್ತವ್ಯ.

-ಚೌಡಪ್ಪ ಗ್ರಾಪಂ ಮಾಜಿ ಸದಸ್ಯ

ಅಕ್ರಮ ನಲ್ಲಿಗಳ ಸಕ್ರಮಕ್ಕೆ 2 ಸಾವಿರ ನಿಗದಿ ಮಾಡಲಾಗಿತ್ತು. ಬಾಕಿ ಸೇರಿ 8 ಸಾವಿರ ವಸೂಲಿ ಸರಿಯಲ್ಲ. ಕೋವಿಡ್‌ ಸಂಕಷ್ಟದಿಂದ ಜನಜೀವನ ಇದೀಗ ಸುಧಾರಿಸಿಕೊಂಡಿದೆ. ಬಾಕಿ ಮನ್ನಾ ಮಾಡಿ, 2 ಸಾವಿರ ಶುಲ್ಕ ನಿಗದಿ ಮಾಡಿ ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡಲಿ.

-ಮನ್ಸೂರ್‌ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ

ವಿವಿ ಸಾಗರದ ನೀರು ನಿರ್ವಹಣಾ ಮಂಡಳಿಗೆ 75 ಲಕ್ಷ ರು. ಬಾಕಿ ಕಟ್ಟಬೇಕಿದೆ. ಹಾಗಾಗಿ, ಅಕ್ರಮ ನಲ್ಲಿಗಳ ಸಕ್ರಮಕ್ಕೆ ಈ ಕಠಿಣ ನಿಲುವು. ಅಕ್ರಮ ನಲ್ಲಿಗಳಿಗೆ ನೀರು ಪೂರೈಕೆಯನ್ನು ಜ. 9ರಿಂದ ಸ್ಥಗಿತಗೊಳಿಸಲಾಗುವುದು.

-ಲೀಲಾವತಿ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ

Follow Us:
Download App:
  • android
  • ios