Asianet Suvarna News Asianet Suvarna News

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಹಲವರು ಕಾಂಗ್ರೆಸ್‌ ಸೇರ್ಪಡೆ

ಕಳೆದ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಚಾಮುಂಡೇಶ್ವರಿ ಕ್ಷೇತ್ರವನ್ನು ಕಾಂಗ್ರೆಸ್‌ ಭದ್ರಕೋಟೆಯನ್ನಾಗಿಸಿಕೊಳ್ಳಲು ಮುಂದಾಗಿರುವ ಪಕ್ಷದ ನಾಯಕರು, ಶುಕ್ರವಾರ ಜೆಡಿಎಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.

In Chamundeshwari constituency, many leaders  joined Congress snr
Author
First Published Jan 21, 2023, 6:25 AM IST

 ಮೈಸೂರು :  ಕಳೆದ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಚಾಮುಂಡೇಶ್ವರಿ ಕ್ಷೇತ್ರವನ್ನು ಕಾಂಗ್ರೆಸ್‌ ಭದ್ರಕೋಟೆಯನ್ನಾಗಿಸಿಕೊಳ್ಳಲು ಮುಂದಾಗಿರುವ ಪಕ್ಷದ ನಾಯಕರು, ಶುಕ್ರವಾರ ಜೆಡಿಎಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಮೈಸೂರು-ಹುಣಸೂರು ರಸ್ತೆಯ ಲಿಂಗದೇವರುಕೊಪ್ಪಲಿನ ಬಳಿ ಕಾಂಗ್ರೆಸ್‌ ಆಯೋಜಿಸಿದ್ದ ಸ್ವಾಭಿವಾನಿ ಪಡೆ ಕಾಂಗ್ರೆಸ್‌ ಸೇರ್ಪಡೆ ಹಾಗೂ ಕಾಂಗ್ರೆಸ್‌ ಪಕ್ಷದ ಬೃಹತ್‌ ಸಮಾವೇಶದಲ್ಲಿ ಜಿ.ಟಿ.ದೇವೇಗೌಡರ ವಿರೋಧಿ ಬಣದ ಹಲವರು ಕಾಂಗ್ರೆಸ್‌ ಸೇರಿದರು.

ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಸಿಟ್ಟಿಗೆದ್ದು ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದ ಪ್ರಮುಖ ನಾಲ್ವರು ಮುಖಂಡರಾದ ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್‌. ಮಾದೇಗೌಡ, ಮುಖಂಡ ಹಿನಕಲ್‌ ಕೆಂಪನಾಯಕ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಸ್ವಾಭಿಮಾನಿ ಪಡೆಯ ನಾಯಕರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು. ಜೆಡಿಎಸ್‌ನಲ್ಲಿ ತಮಗಾದ ಅನ್ಯಾಯ ಮತ್ತು ನಾಯಕರಿಂದ ನೋವಿನಿಂದ ಕಾಂಗ್ರೆಸ್‌ ಸೇರಿದ್ದೇವೆ. ಅಧಿಕಾರದ ಆಸೆ ಇಲ್ಲದೆ ಪಕ್ಷ ಗೆಲ್ಲಿಸುವುದು ನಮ್ಮ ಉದ್ದೇಶ ಎಂದರು.

ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, 1983ರಿಂದ ಅನುಯಾಯಿ ಆಗಿದ್ದೆ. ಸಿದ್ದರಾಮಯ್ಯ ಅವರು ವರುಣ ಕ್ಷೇತ್ರಕ್ಕೆ ಹೋಗಿದ್ದರಿಂದ ಕಾಂಗ್ರೆಸ್‌ ಹಿಡಿತ ತಪ್ಪಿತು. ಜಿ.ಟಿ.ದೇವೇಗೌಡರು ಏನೇನೋ ಹೇಳಿ ನಂಬಿಸಿದರು. 2013ರಲ್ಲಿ ಜೆಡಿಎಸ್‌ಗೆ ಹೋದೆವು. 2018ರಲ್ಲಿ ಜಿ.ಟಿ.ದೇವೇಗೌಡರ ಗೆಲುವಲ್ಲ. ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂದು ಜನರು ನಿರ್ಧರಿಸಿದ್ದರಿಂದ ಜಿ.ಟಿ.ದೇವೇಗೌಡರು ಗೆದ್ದರು. ಕ್ಷೇತ್ರದಲ್ಲಿ ಸಾವಿರಾರು ಮಂದಿ ಕೋವಿಡ್‌ಗೆ ಬಲಿಯಾದರು. ಆದರೂ ಕ್ಷೇತ್ರದ ಶಾಸಕ ಜನರ ಸಂಕಷ್ಟಆಲಿಸಲಿಲ್ಲ. ಸಾಂತ್ವನ ಹೇಳಲಿಲ್ಲ. ಅವನ ಮಗನೂ ದೊಡ್ಡ ಕ್ರಿಮಿನಲ್‌ ಆಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದರು. ಆಗ ಚಾಮುಂಡೇಶ್ವರಿ ಕಣ್ಣಿಟ್ಟಳು. ದೇವೇಗೌಡರನ್ನು ಕಾಡಿಬೇಡಿ ಎರಡು ಟಿಕೆಟ್‌ ಖಾತ್ರಿ ಮಾಡಿಕೊಂಡಿದ್ದಾರೆ. ಮೊಸಳೆ ಕಣ್ಣೀರು ಹಾಕಿದರು. ಈ ಚುನಾವಣೆಯಲ್ಲಿ ಅಪ್ಪ-ಮಗ ಇಬ್ಬರನ್ನೂ ಠೇವಣಿ ಇಲ್ಲದಂತೆ ಮನೆಗೆ ಕಳುಹಿಸಬೇಕು. ಇದೇ ನಮ್ಮ ಶಪಥ. ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎಂದು ಎಲ್ಲರಿಂದ ಪ್ರತಿಜ್ಞೆ ಮಾಡಿಸಿದರು. 25 ಸಾವಿರ ಜನ ಸೇರಿಸಲಿ ಎಂದು ಅವರು ಸವಾಲು ಹಾಕಿದನ್ನು ಸ್ವೀಕರಿಸಿ 30 ಸಾವಿರ ಜನರನ್ನು ಸೇರಿಸಿದ್ದೇವೆ. ಯಾವುದೇ ಕಾರಣಕ್ಕೂ ಅವರಿಗೆ ನಾವು ಬೆಂಬಲ ನೀಡುವುದಿಲ್ಲ ಎಂದರು.

ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ಮಾತನಾಡಿ, ನಾನು 1983ರಿಂದಲೂ ಸಿದ್ದರಾಮಯ್ಯ ಅವರ ಹಿಂಬಾಲಕ. 2008ರ ಚುನಾವಣೆವರೆಗೂ ಸಿದ್ದರಾಮಯ್ಯ ಅವರ ಹಿಂಬಾಲಕನಾಗಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿ ಕಾರಣದಿಂದ ನಾನು ಜಿಪಂ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಹೋಗಿದ್ದೆ. 2010ರಲ್ಲಿ ಜೆಡಿಎಸ್‌ ಸೇರಿದೆ. ಎರಡು ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರನ್ನು ಬೆಂಬಲಿಸಿದೆವು. ಬಿಜೆಪಿಯಿಂದ ಬಂದಾಗ ಕ್ಷೇತ್ರದ ನಾಡಿ ಮಿಡಿತವೇನೂ ಗೊತ್ತಿರಲಿಲ್ಲ. ಅವರ ಬೆಂಬಲಕ್ಕೆ ನಾವೆಲ್ಲರೂ ನಿಂತಿದ್ದೆವು. ಅದನ್ನು ಮರೆತು ಬಿಟ್ಟಿದ್ದಾರೆ ಎಂದು ದೂರಿದರು.

ಮೈಸೂರು ಸುತ್ತಾ ನಿಧಿ ಇದೆ ಎಂದು ತೋರಿಸಿ, ನೀವೇ ಒಡೆಯರು ಎಂದು ಹೇಳಿದ್ದರು. ಈಗ ನಿಧಿ ಮೇಲೆ ಅವರೇ ಕುಳಿತು ಯಾರನ್ನೂ ಮುಟ್ಟಲು ಬಿಡುತ್ತಿಲ್ಲ. ಅವರ ನಡೆ ವಿರೋಧಿಸಿ ನಾವು ಕಾಂಗ್ರೆಸ್‌ ಸೇರ್ಪಡೆ ಆಗುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ನಿಶ್ವಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಎಸ್‌. ಮಾದೇಗೌಡ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ಜಿ.ಟಿ. ದೇವಗೌಡರು ದೇವರ ಮುಂದೆಯೇ ಹೇಳಿದ್ದರು. ಅದನ್ನು ನಿಜವಾಗಿಸಲು ಮತ್ತು ಶ್ರಮಿಸುವುದಕ್ಕಾಗಿಯೇ ಕಾಂಗ್ರೆಸ್‌ ಸೇರಿದ್ದೇವೆ. ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದರು.

ಕಾಂಗ್ರೆಸ್‌ ಸೇರಿದ ಪ್ರಮುಖರು

ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ಎಸ್‌. ಮಾದೇಗೌಡ, ಮುಖಂಡ ಹಿನಕಲ್‌ ಕೆಂಪನಾಯಕ, ಮುಖಂಡರಾದ ಚನ್ನವೀರಪ್ಪ, ಸೋಮಣ್ಣ, ಬೋಗಾದಿ ರವಿ, ತಾವರೆಕೆರೆ ಗಿರೀಶ್‌, ಹಂಚ್ಯಾ ಚನ್ಬಪ್ಪ ಮೊದಲಾದ ಪ್ರಮುಖರು ಕಾಂಗ್ರೆಸ್‌ ಸೇರಿದರು.

Follow Us:
Download App:
  • android
  • ios