ಬೆಂಗಳೂರು(ಮಾ.04): ನಗರದ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ರಾಜಧಾನಿ ಪ್ರವೇಶಿಸುವ ಹೊರ ರಾಜ್ಯ ಮತ್ತು ಜಿಲ್ಲೆಗಳ ವಾಹನಗಳಿಂದ ಶುಲ್ಕ ವಿಧಿಸುವ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸುವಂತೆ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಸಲಹೆ ನೀಡಿದ್ದಾರೆ.

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ನಿತ್ಯ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ವಾಹನಗಳು ಬೆಂಗಳೂರು ನಗರಕ್ಕೆ ಆಗಮಿಸುತ್ತವೆ. ನಾಲ್ಕು ದಿಕ್ಕುಗಳಲ್ಲಿರುವ ಟೋಲ್‌ ಪ್ಲಾಜಾದಲ್ಲಿ ನಗರ ಪ್ರವೇಶಿಸುವ ವಾಹನಗಳಿಂದ ಐದು, ಹತ್ತು ಅಥವಾ 15 ಶುಲ್ಕ ವಿಧಿಸುವುದರಿಂದ ಆದಾಯ ಬರಲಿದೆ. ಅದನ್ನು ಬಳಕೆ ಮಾಡಿಕೊಂಡು ರಸ್ತೆ, ಫ್ಲೈಓವರ್‌, ಅಂಡರ್‌ ಪಾಸ್‌ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಬಹುದಾಗಿದೆ. ಕೇವಲ ಆಸ್ತಿ ತೆರಿಗೆ ಸಂಗ್ರಹಣೆಯಿಂದ ನಗರದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಆಸ್ತಿ ತೆರಿಗೆ ಪ್ರಮಾಣ ಹೆಚ್ಚಳ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರದ ಹಲವೆಡೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ಎಲ್ಲಿ ಮೆಟ್ರೋ ನಿಲ್ದಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ಬಿಬಿಎಂಪಿಯ ಯಾವುದೇ ಸದಸ್ಯರಿಗೆ ಮಾಹಿತಿ ಇಲ್ಲ. ಕೂಡಲೇ ಒಂದು ವಿಶೇಷ ಸಭೆ ಆಯೋಜಿಸಿ ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳಿಂದ ಮಾಹಿತಿ ಕೊಡಿಸುವಂತೆ ಆಗ್ರಹಿಸಿದರು.

ಆನ್‌ಲೈನ್‌ ವಾಣಿಜ್ಯ ಪರವಾನಗಿಗೆ ವಿರೋಧ:

ಮಾಜಿ ಮೇಯರ್‌ ಕಟ್ಟಸತ್ಯನಾರಾಯಣ ಮಾತನಾಡಿ, ಆನ್‌ಲೈನ್‌ನಲ್ಲಿ ಹಾಗೂ ಐದು ವರ್ಷಕ್ಕೆ ವಾಣಿಜ್ಯ ಪರವಾನಗಿ ನೀಡುವುದರಿಂದ ಸಾಕಷ್ಟುತೊಂದರೆ ಉಂಟಾಗಲಿದೆ. ವಾಣಿಜ್ಯ ಪರವಾನಗಿ ಪಡೆಯುವ ಮುನ್ನ ಪಾಲಿಕೆ ಅಧಿಕಾರಿಗಳು ತಪಾಸಣೆ ನಡೆಸಬೇಕು. ಆನ್‌ಲೈನ್‌ನಲ್ಲಿ ಪರವಾನಗಿ ನೀಡುವುದರಿಂದ ತಪಾಸಣೆ ಆಗುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಾಣಿಜ್ಯ ಪರವಾನಗಿ ನೀಡುವ ಮುನ್ನ ವಾಣಿಜ್ಯ ಮಳಿಗೆಯ ಅಕ್ಕಪಕ್ಕದ ನಿವಾಸಿಗಳಿಂದ ನಿರಾಪೇಕ್ಷಣಾ ಪತ್ರ ಕಡ್ಡಾಯವಾಗಿ ಪಡೆಯುವಂತೆ ಮನವಿ ಮಾಡಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಸಮಸ್ಯೆ: ಉಮೇಶ್‌

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ ಇಲ್ಲ. ಕ್ಯಾಂಟೀನ್‌ ಭದ್ರತೆಗೆ ನಿಯೋಜಿಸಿರುವ ಮಾರ್ಷಲ್‌, ಆರೋಗ್ಯಾಧಿಕಾರಿಗಳು ಗಮನ ನೀಡುತ್ತಿಲ್ಲ. ಇನ್ನು ನಗರದ ವಿವಿಧ ಕಡೆ ಸಿಎಸ್‌ಆರ್‌ ಅಡಿಯಲ್ಲಿ ಅಳವಡಿಕೆ ಮಾಡಿರುವ ಕಸ ಬುಟ್ಟಿಗಳಿಂದ ಬ್ಲಾಕ್‌ ಸ್ಪಾಟ್‌ ನಿರ್ಮಾಣವಾಗುತ್ತಿವೆ. ಇನ್ನು ಜೋನ್ಟಾಸಂಸ್ಥೆ 52 ಕೋಟಿ ವೆಚ್ಚದಲ್ಲಿ ಅಳವಡಿಸಿರುವ ನೆಲದಡಿಯ ಕಸದ ಬುಟ್ಟಿ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರವಾಗಿದೆ ಎಂದು ಬಿಜೆಪಿ ಮುಖಂಡ ಉಮೇಶ್‌ ಶೆಟ್ಟಿ ಆರೋಪಿಸಿದ್ದಾರೆ.