Asianet Suvarna News Asianet Suvarna News

ಉಡುಪಿ: ಸಾವರ್ಕರ್‌ ಸರ್ಕಲ್ ನಿರ್ಮಾಣ, ನಗರಸಭೆಯಿಂದ ಮಹತ್ವದ ನಿರ್ಣಯ

ಕಳೆದ ಎರಡು ವಾರಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿದೆ.

Important Decision by the Udupi CMC on Savarkar Circle Dispute grg
Author
First Published Aug 30, 2022, 4:40 PM IST

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ(ಆ.30):  ಉಡುಪಿ ನಗರಸಭೆ ಮಹತ್ವದ ನಿರ್ಣಯ ಕೈಗೊಂಡಿದೆ. ವಿವಾದ ಹುಟ್ಟಿಸಿದ್ದ ಸಾವರ್ಕರ್ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ಕಳೆದ ಎರಡು ವಾರಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ವೇಳೆ ಸಾವರ್ಕರ್ ಹೆಸರಿನ ಬ್ಯಾನರ್ ಅಳವಡಿಸಿದ್ದು ಉಡುಪಿಯಲ್ಲಿ ಭಾರಿ ವಿವಾದ ಹುಟ್ಟಿಸಿತ್ತು. ಹಿಂದೂ ಮಹಾಸಭಾ ಬ್ರಹ್ಮಗಿರಿ ವೃತ್ತದಲ್ಲಿ ಅಳವಡಿಸಿದ್ದ ಈ ಬ್ಯಾನರ್ ನ್ನು ಐದು ದಿನಗಳ ಬಳಿಕ ತೆರವು ಮಾಡಲಾಗಿತ್ತು. ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಅವರ ಪುತ್ಥಳಿ ಸ್ಥಾಪಿಸಬೇಕೆಂದು ಹಿಂದೂ ಮಹಾಸಭಾ, ಹಿಂದೂ ಜಾಗರಣ ವೇದಿಕೆ ಉಡುಪಿ ನಗರಸಭೆಗೆ ಮನವಿ ನೀಡಿತ್ತು. ಈ ಬೇಡಿಕೆಯ ಬಗ್ಗೆ ಇಂದು ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಮಹತ್ವದ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿದೆ.

Udupi: ಸಾವರ್ಕರ್ ವರ್ಸಸ್ ಹಾಜಿ ಅಬ್ದುಲ್ಲಾ ಸಾಹೇಬ್: ನಗರಸಭೆಯ ನಿರ್ಧಾರದತ್ತ ಎಲ್ಲರ ಚಿತ್ತ

ಹಿಂದೂ ಸಂಘಟನೆ ಗಳ ಬೇಡಿಕೆಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ಉಡುಪಿ ಶಾಸಕ ರಘುಪತಿ ಭಟ್ ವ್ಯಕ್ತಪಡಿಸಿದ್ದರು. ಸಾವರ್ಕರ್ ಅವರ ಪುತ್ಥಳಿ ಗೆ ಬದಲಾಗಿ ನಗರದ ಪ್ರತಿಷ್ಠಿತ ವೃತ್ತ ಒಂದಕ್ಕೆ ಸಾವರ್ಕರ ಹೆಸರಿಡೋಣ ಎಂದು ಹೇಳಿದ್ದರು. ಹಳೆ ತಾಲೂಕು ಆಫೀಸ್, ಬಳಿ ಇರುವ ವೃತ್ತಕ್ಕೆ ಸಾವರ್ಕರ ಹೆಸರಿಡುವ ಪ್ರಸ್ತಾಪವನ್ನು ನಗರಸಭೆಯಲ್ಲಿ ಮಂಡಿಸಿದರು. ಶಾಸಕರ ಈ ಅಭಿಪ್ರಾಯಕ್ಕೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸುವ ಮೂಲಕ, ಉಡುಪಿಯಲ್ಲಿ ಸಾವರ್ಕರ್ ಸರ್ಕಲ್ ಗೆ ನಗರಸಭೆ ಹಸಿರು ನಿಶಾನೆ ತೋರಿಸಿದೆ.

ಆಕ್ಷೇಪ ವ್ಯಕ್ತಪಡಿಸದ ಕಾಂಗ್ರೆಸ್

ಇಂದಿನ ಸಾಮಾನ್ಯ ಸಭೆಯಲ್ಲಿ ಸಾವರ್ಕರ್ ಸರ್ಕಲ್ ಸ್ಥಾಪಿಸುವ ಬಗ್ಗೆ ಶಾಸಕರು ವಿಚಾರ ಮಂಡಿಸಿದಾಗ, ಕಾಂಗ್ರೆಸ್ ಸದಸ್ಯರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗಾಗಿ ಸರ್ವಾನುಮತದ ನಿರ್ಣಯ ಕೈಗೊಂಡು, ಸಾರ್ವಜನಿಕ ಆಕ್ಷೇಪಕ್ಕೆ ಈ ಪ್ರಸ್ತಾಪವನ್ನು ಮುಂದಿಡಲಾಗಿದೆ.

ಗಣೇಶ ಚತುರ್ಥಿ: ಅಧಿಕಾರಿಗಳಿಗೆ ಖಡಕ್‌ ಸಂದೇಶ ಕೊಟ್ಟ ಉಡುಪಿ ಡಿಸಿ ಕೂರ್ಮಾರಾವ್

ಬ್ರಹ್ಮಗಿರಿ ಸರ್ಕಲ್‌ಗೆ ಆಸ್ಕರ್ ಫರ್ನಾಂಡಿಸ್ ಹೆಸರು

ಸಾವರ್ಕರ್ ಅವರ ಭಾವಚಿತ್ರ ಅಳವಡಿಸುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಬ್ರಹ್ಮಗಿರಿ ಸರ್ಕಲ್ ಗೆ ಈಗಾಗಲೇ ಕಾಂಗ್ರೆಸ್‌ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಹೆಸರಿಡಲು ನಿರ್ಣಯಿಸಲಾಗಿತ್ತು. ಬ್ರಹ್ಮಗಿರಿಯಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ವಾಸದ ಮನೆಯಿದ್ದು, ಇತ್ತೀಚಿಗಷ್ಟೇ ಅವರು ಇಹಲೋಕ ತ್ಯಜಿಸಿದ್ದಾರೆ.ಸಾವರ್ಕರ್ ಪುತ್ಥಳಿ ನಿರ್ಮಾಣದ ಬೇಡಿಕೆ ಬರುವ ಮೊದಲೇ ಈ ಬಗ್ಗೆ ನಿರ್ಣಯ ಕೈಗೊಂಡಿರುವುದರಿಂದ, ಭವಿಷ್ಯದಲ್ಲಿ ಈ ಸರ್ಕಲ್ ಅನ್ನು ಆಸ್ಕರ್ ಫರ್ನಾಂಡಿಸ್ ಸರ್ಕಲ್ ಎಂದು ಘೋಷಿಸುವ ಬಗ್ಗೆ ನಗರಸಭೆ ತೀರ್ಮಾನಿಸಿದೆ.

ಅಂಬೇಡ್ಕರ್ ಸರ್ಕಲ್‌ಗೆ ಬೇಡಿಕೆ ಇಟ್ಟ ಎಸ್‌ಡಿಪಿಐ 

ಸಾವರ್ಕರ್ ಪುತ್ತಳಿಗೆ ಬದಲಾಗಿ ಅಂಬೇಡ್ಕರ್ ಸರ್ಕಲ್ ಸ್ಥಾಪಿಸಿ ಎಂದು ಎಸ್‌ಡಿಪಿಐ ಈಗಾಗಲೇ ಮನವಿ ನೀಡಿದೆ. ಇನ್ನೊಂದೆಡೆ ಪ್ರಸ್ತಾವಿತ ಸಾವರ್ಕರ್ ಸರ್ಕಲ್ ಗೆ ಬದಲಾಗಿ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಹೆಸರನ್ನು ಇರಿಸಬೇಕೆಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಘಟನೆ ಒತ್ತಾಯಿಸಿದೆ. ಗಣ್ಯರ ಹೆಸರಲ್ಲಿ ಸರ್ಕಲ್ ಸ್ಥಾಪಿಸುವ ವಿಚಾರ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತೋ ಕಾದುನೋಡಬೇಕು. 
 

Follow Us:
Download App:
  • android
  • ios