ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಈ ಜಿಲ್ಲೆಗಳಲ್ಲಿ ಅಲರ್ಟ್
* ಮತ್ತೆ ರಾಜ್ಯದಲ್ಲಿ ವರುಣನ ಆರ್ಭಟ
* ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ಮಳೆ
* ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವು ಕಡೆ ಭಾರಿ ಮಳೆ ಸಾಧ್ಯತೆ
ಬೆಂಗಳೂರು(ಜು. 04) ಬೆಂಗಳೂರಿನ ಹಲವೆಡೆ ಭಾನುವಾರ ಧಾರಾಕಾರ ಮಳೆಯಾಗಿದೆ. ವಿಧಾನಸೌಧ, ಕಾರ್ಪೋರೆಷನ್, ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಎಂ.ಜಿ ರೋಡ್, ಆಡುಗೋಡಿ, ಕೋರಮಂಗಲ, ಬನಶಂಕರಿ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ ಸೇರಿದಂತೆ ಇಡೀ ನಗರದಲ್ಲಿ ಮಳೆಯಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆ, ಶಿವಾಜಿನಗರ, ವಿಧಾನಸೌಧ ಮಲ್ಲೇಶ್ವರದಲ್ಲಿ ಮಳೆಯಾಗಿದೆ. ಮುಂದಿನ ದಿನಗಳ ಹವಾಮಾನ ವರದಿಯನ್ನು ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಗದಗ ಮತ್ತು ಕಾರವಾರದಲ್ಲಿ 4 ಸೆಂ.ಮೀ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 3 ಸೆಂ.ಮೀ. ಮಳೆಯಾಗಿದೆ.
ಮಳೆಗಾಲದಲ್ಲಿ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುವ ಗ್ರಾಮಗಳು
ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಪ್ರಭಾವದಿಂದ ಜುಲೈ 4 ರಿಂದ 8 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಜುಲೈ 5 ರಿಂದ ಮಳೆಯ ಪ್ರಮಾಣ ಏರಿಕೆಯಾಗುವ ಹೆಚ್ಚಿನ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಕರಾವಳಿ ಜಿಲ್ಲೆಗಳಿಗೆ ಜುಲೈ 7 ಮತ್ತು 8 ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.