ಬೆಂಗಳೂರು [ಜು.13] :  ಬಹುಕೋಟಿ ವಂಚನೆ ಮಾಡಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಸಂಸ್ಥೆಗೆ ನೆರವು ನೀಡಿದ ಆರೋಪದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೊಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ.ವಿಜಯಶಂಕರ್‌ ಮತ್ತು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರಿಗೆ ಮಧ್ಯಂತರ ಜಾಮೀನು ನೀಡಲು ನಗರದ ಒಂದನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಜಯಶಂಕರ್‌ ಮತ್ತು ನಾಗರಾಜ್‌ ವಿಚಾರಣೆಗೆ ಒಳಪಡಿಸಿತ್ತು. ಈ ನಡುವೆ ಮಧ್ಯಂತ ಜಾಮೀನು ಮಂಜೂರು ಮಾಡುವಂತೆ ಆರೋಪಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಶಂಕರ ಬಿ.ಅಮರಣ್ಣವರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದು, ವಿಚಾರಣೆ ಮುಂದೂಡಿದ್ದಾರೆ.

ವಿಚಾರಣೆ ವೇಳೆ ಆರೋಪಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಮತ್ತು ವೈ.ಆರ್‌.ಸದಾಶಿವ ರೆಡ್ಡಿ, ಅರ್ಜಿದಾರರು ಕಾನೂನು ಪ್ರಕಾರವೇ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ನಿರಪರಾಧಿಗಳಾಗಿದ್ದು, ಸರ್ಕಾರಿ ನೌಕರರಾಗಿದ್ದಾರೆ. ಮಧ್ಯಂತರ ಜಾಮೀನು ಮಂಜೂರು ಮಾಡದಿದ್ದಲ್ಲಿ ಸಂವಿಧಾನದತ್ತ ಮೂಲಭೂತ ಹಕ್ಕು ಉಲ್ಲಂಘನೆಯಾಗಲಿದೆ ಎಂದು ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌, ಆರೋಪಿಗಳು ಕಾನೂನು ಬಾಹೀರವಾಗಿ ನಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅವರ ವಿರುದ್ಧದ ಅಪರಾಧ ಸಾಬೀತಾಗುವಂತಿದೆ. ಇಂತಹ ಆರೋಪಕ್ಕೆ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ. ಆದ್ದರಿಂದ, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಿದರೆ ಪ್ರಕರಣದ ತನಿಖೆಗೆ ಅಡ್ಡಿಯಾಗಲಿದೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗಳಿಗೆ ಮಧ್ಯಂತರ ಜಾಮೀನು ತಿರಸ್ಕರಿಸಿದರು.

ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಪ್ರಕರಣದ ಇತರೆ ಆರೋಪಿಗಳಾದ ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ಸೈಯ್ಯದ್‌ ಮುಜಾಹಿದ್‌ ಮತ್ತು ದ್ವಿತೀಯ ದರ್ಜೆ ಸಹಾಯಕ ಎನ್‌.ಮಂಜುನಾಥ್‌ ಅವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು.

ಕುಟುಂಬಸ್ಥರನ್ನು ನೋಡಿ ಕಣ್ಣೀರು ಹಾಕಿದ ಡೀಸಿ!

ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ನಿರಾಕರಿಸುತ್ತಿದ್ದಂತೆ ನ್ಯಾಯಾಲಯ ಸಭಾಂಗಣದಿಂದ ಹೊರ ಬಂದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ.ವಿಜಯಶಂಕರ್‌ ತಮ್ಮ ಕುಟುಂಬಸ್ಥರನ್ನು ನೋಡಿ ಕಣ್ಣೀರು ಹಾಕಿದರು. ಜಾಮೀನು ಸಿಗಲಿದೆ ಎಂಬ ಆಶಯದಿಂದ ಕುಟುಂಬದ ಸದಸ್ಯರು ನ್ಯಾಯಾಲಯಕ್ಕೆ ಬಂದಿದ್ದರು. ಆದರೆ, ಜಾಮೀನು ಲಭ್ಯವಾಗದ ಹಿನ್ನೆಲೆಯಲ್ಲಿ ದುಖಃತಪ್ತರಾಗಿದ್ದ ಕುಟುಂಬಸ್ಥರನ್ನು ನೋಡಿ ಕಣ್ಣೀರು ಹಾಕಿದರು ಎನ್ನಲಾಗಿದೆ.

ಡೀಸಿಗೆ ಐಎಂಎ ಲಂಚ 1.5 ಕೋಟಿ ವಶ

ಬಹುಕೋಟಿ ವಂಚನೆ ಪ್ರಕರಣ ಐಎಂಎ ಬಳಿ ಒಂದೂವರೆ ಕೋಟಿ ಲಂಚ ಪಡೆದಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯ ಮತ್ತೊಂದು ಲಂಚ ಕರ್ಮಕಂಡ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಂಧಿತ ಬಿ.ಎಂ.ವಿಜಯ್‌ಶಂಕರ್‌ ಅವರು ಐಎಂಎ ಡೀಲ್‌ ವೇಳೆ ಮತ್ತೊಂದು ವ್ಯವಹಾರದಲ್ಲಿ ಒಂದು ಕೋಟಿಯನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ. ತನಿಖೆ ವೇಳೆ ಲಂಚ ಹಣ ಪಡೆದಿರುವುದು ತಿಳಿದು ಬಂದಿದ್ದು, ಈ ಹಣವನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಹಣ ಹಾಗೂ ವರದಿಯೊಂದಿಗೆ ಪ್ರಕರಣವನ್ನು ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ಮುಂದಿನ ಕ್ರಮಕ್ಕಾಗಿ ವರ್ಗಾವಣೆ ಮಾಡಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಹಣ ಜಪ್ತಿ:

ಅಲ್ಲದೆ, ಐಎಂಎ ಸಂಸ್ಥೆಯಿಂದ ಲಂಚ ಪಡೆದಿದ್ದ 1.5 ಕೋಟಿ ರು. ಹಣವನ್ನು ಕೂಡ ಶುಕ್ರವಾರ ಎಸ್‌ಐಟಿ ಜಪ್ತಿ ಮಾಡಿದೆ. ಐಎಂಎ ಸಂಸ್ಥೆಯಿಂದ ಪಡೆದ ಲಂಚದ ಹಣವನ್ನು ವಿಜಯ್‌ ಶಂಕರ್‌ ಉದ್ಯಮಿಯೊಬ್ಬರಿಗೆ ಫ್ಲ್ಯಾಟ್‌ ಮತ್ತು ನಿವೇಶನ ಖರೀದಿಗೆಂದು ನೀಡಿರುವುದು ತನಿಖೆ ವೇಳೆ ಕಂಡು ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಉದ್ಯಮಿಯಿಂದ ಹಣ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಎಸ್‌ಐಟಿ ಅಧಿಕಾರಿ ತಿಳಿಸಿದರು.

ಐಎಂಎನಿಂದ ಪಡೆದ ಹಣ ಹಿಂತಿರುಗಿಸಿದ ಕಂಪನಿ:

ಮತ್ತೊಂದೆಡೆ ಐಎಂಎ ಸಂಸ್ಥೆಯು ನಗರದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಅಡೋನಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಈ ಸಂಬಂಧ ಐಎಂಎ ಸಂಸ್ಥೆ ಮುಂಗಡವಾಗಿ 1.5 ಕೋಟಿ ರು ಅನ್ನು ಆಡೋನಿ ಸಂಸ್ಥೆಗೆ ನೀಡಿತ್ತು. ಎಸ್‌ಐಟಿ ತಂಡ ಅಡೋನಿ ಸಂಸ್ಥೆಗೆ ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ಐಎಂಎ ಸಂಸ್ಥೆ ಮುಂಗಡವಾಗಿ ನೀಡಿದ್ದ 1.5 ಕೋಟಿ ರು. ಡಿ.ಡಿ.ರೂಪದಲ್ಲಿ ವಿಶೇಷ ತನಿಖಾ ತಂಡಕ್ಕೆ ಹಿಂದಿರುಗಿಸಿದೆ ಎಂದು ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.