ಮೈಸೂರು [ಸೆ.01]:  ಸಚಿವ ಸ್ಥಾನ ದೊರೆಯಲಿಲ್ಲ ಎಂಬ ನೋವೂ ಇಲ್ಲ, ಬೇಸರವೂ ನನಗಿಲ್ಲ. ಬಿಜೆಪಿಗೆ ಬಹಳ ಜನ ಅತಿಥಿಗಳು ಬಂದಿರುವುದರಿಂದ ಮೊದಲು ಅವರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಅತಿಥಿ ದೇವೋಭವ ಎನ್ನುವ ಸಂಸ್ಕೃತಿ, ಹೀಗಾಗಿ ಪಕ್ಷಕ್ಕೆ ಬರುವ ಅತಿಥಿಗಳಿಗೆ ಮೊದಲು ಉಣಬಡಿಸಿ, ನಂತರ ನಮ್ಮದು. ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ನೋವು, ಬೇಸರ ಎರಡೂ ಇಲ್ಲ. ಜಿಲ್ಲೆಯಲ್ಲಿ 11 ಜನ ಬಿಜೆಪಿಗೆ ಬಂದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅಧಿಕಾರ ಇರಲಿ, ಬಿಡಲಿ ಬಿಜೆಪಿಯಲ್ಲಿ ಉಳಿದವನು ನಾನೊಬ್ಬನೇ ಎಂದು ಹೇಳಿದರು.

ಇದು ಪಕ್ಷದ ನಾಯಕರಿಗೂ ಗೊತ್ತಿದೆ. ಆದರೂ ತಂಡ ಕಟ್ಟುವಾಗ ತಂಡದ ನಾಯಕರು ತನಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಒಂದು ತಂಡ ರಚನೆಯಾಗಿದೆ. ಇದರಿಂದ ನಾನು ವಿಚಲಿತನಾಗಿಲ್ಲ ಎಂದರು.

ಋುಣವಿದೆ: 1994ರಲ್ಲಿ ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷನಾಗಿ ರಾಜಕೀಯ ಆರಂಭಿಸಿದೆ. ಬಾಡಿಗೆ ಮನೆಯಲ್ಲಿದ್ದೆ. ನನ್ನ ಬಳಿ ದುಡ್ಡಿರಲಿಲ್ಲ. ಕೆ.ಆರ್‌. ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಪಕ್ಷ ಬಿಟ್ಟು ಹೋದರೂ ಚಿಂತೆ ಇಲ್ಲ ಎಂದು ನನಗೆ ಟಿಕೆಟ್‌ ನೀಡಿದರು. ಆ ಋುಣ ನನ್ನ ಮೇಲಿದೆ ಎಂದರು.