‘ನಾನು ಡಿಸಿಎಂ ಆಗುವ ಬಗ್ಗೆ ನನಗೆ ಗೊತ್ತಿಲ್ಲ’
ನಾನು ಯಾವುದೇ ಖಾತೆಯ ಆಕಾಂಕ್ಷಿಯಲ್ಲ. ನನಗೆ ಯಾವುದೇ ಹುದ್ದೆ ಕೊಟ್ಟರೂ ಕೂಡ ನಿಭಾಯಿಸುವೆ ಎಂದು ನೂತನ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ [ಆ.26]: ತಮಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧ. ಶಿಸ್ತಿನ ಕಾರ್ಯಕರ್ತನಾಗಿ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಕೋಟೆ ಆಂಜನೇಯ ದೇವಾಲಯಕ್ಕೆ ಸಚಿವರಾದ ಬಳಿಕ ಮೊದಲ ಬಾರಿ ಭೇಟಿ ನೀಡಿ ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆಯೂ ತಮಗೆ ಗೊತ್ತಿಲ್ಲ, ಮಾಧ್ಯಮದವರು ಈಗಾಗಲೇ ತಮಗೆ ಒಂದೊಂದು ಖಾತೆ ಹಂಚಿಬಿಟ್ಟಿದ್ದಾರೆ ಎಂದು ನಗೆಚಟಾಕಿ ಹಾರಿಸಿದ ಅವರು, ಡಿಸಿಎಂ ಹುದ್ದೆ ಸೃಷ್ಟಿಬಗ್ಗೆಯೂ ತಮಗೆ ತಿಳಿದಿಲ್ಲ ಎಂದರು.
ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಕ್ಷದ ಕುರಿತು ಮಾತನಾಡಿದ ಅವರು, ಪಕ್ಷದಲ್ಲಿ ಸಣ್ಣಪುಟ್ಟಗೊಂದಲಗಳಿದ್ದು ನಿವಾರಣೆ ಮಾಡಲಾಗುತ್ತದೆ. ಬಿಜೆಪಿ ಒಂದು ಕುಟುಂಬವಿದ್ದಂತೆ. ಕುಟುಂಬದ ಹಿರಿಯರು ಇದನ್ನು ಬಗೆಹರಿಸುತ್ತಾರೆ ಎಂದರು.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವ ವಿಚಾರ ಪಕ್ಷದ ಹಿರಿಯರು ತೆಗೆದುಕೊಂಡಿರುವ ತೀರ್ಮಾನ. ಹಿರಿಯರ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದ ಅವರು, ರಾಜ್ಯದಲ್ಲಿ ಹಿಂದೆಂದು ಕಂಡರಿಯದ ನೆರೆ ಹಾವಳಿ ಅಪ್ಪಳಿಸಿದೆ. ಕೇಂದ್ರ ಸರ್ಕಾರದ ನೆರವು, ಸಂಘಸಂಸ್ಥೆಗಳು, ಜನರ ನೆರವು ಪಡೆದು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತೇವೆ. ಅದಕ್ಕೆ ತುರ್ತಾಗಿ ಕೆಲವು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಆ. 26 ರಂದು ಮಧ್ಯಾಹ್ನ 4 ಕ್ಕೆ ಸಿಎಂ ಸಚಿವ ಸಂಪುಟದ ವಿಶೇಷ ಸಭೆ ಕರೆದಿದ್ದಾರೆ. ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿರುವ 17 ಸಚಿವರು, ಬಳಿಕ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.