ಗದಗ: ನನಗೆ ಶಿಕ್ಷಣ ಸಚಿವನಾಗುವ ಆಸೆ ಇತ್ತು. ಪಕ್ಷದ ಹಿತದೃಷ್ಟಿಯಿಂದ ಅಲ್ಲದಿದ್ದರೂ ರಾಜ್ಯದ ಹಿತಕ್ಕಾಗಿ ಒಲ್ಲದ ಮನಸ್ಸಿನಿಂದ ವಿಧಾನ ಪರಿಷತ್ ಸಭಾಪತಿಯಾ ಗಿದ್ದೇನೆ ಎಂದು ವಿಧಾನ ಪರಿಷತ್‌ನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಭಾನುವಾರ ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಂತಹ ಹಿರಿಯರ ತ್ಯಾಗದ ಅವಶ್ಯಕತೆ ಇದೆ. ಪರಿಸ್ಥಿತಿಗೆ ಅನುಗುಣವಾಗಿ ನಾನು ಸಭಾಪತಿಯಾಗಿದ್ದೇನೆ. ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಮಹದಾಯಿ ಸೇರಿದಂತೆ ಉತ್ತರ ಕರ್ನಾಟಕದ ನಿರ್ಲಕ್ಷ್ಯದ ಕುರಿತು ನನ್ನ ಪರಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗಳಲ್ಲಿರುವ ಕುರಿತು ಈಗಾಗಲೇ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿದ್ದೇನೆ.

ಆದ್ಯತೆ ಮೇಲೆ ಶಾಲೆಗಳ ದುರಸ್ತಿ ಮಾಡುವುದಾಗಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿರುವ ಸುವರ್ಣ ಸೌಧದ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ವರ್ಷದಲ್ಲಿ 60 ದಿನ ಅಧಿವೇಶನ ನಡೆಯ ಬೇಕು ಎನ್ನುವ ಕುರಿತು ಮುಖ್ಯ ಮಂತ್ರಿ, ಸಚಿವರ ಸಭೆ ಕರೆದು ಚರ್ಚಿಸುತ್ತೇನೆ ಎಂದರು. 

ಸಿಎಂ ಮೇಲೆ ಹೆಚ್ಚಿನ ಒತ್ತಡ: ಮುಖ್ಯಮಂತ್ರಿ ಕುಮಾರಸ್ವಾಮಿ ಈಚೆಗೆ ಖಾಸಗಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ಸರ್ಕಾರದ ಹೊಂದಾಣಿಕೆಯಲ್ಲಿ ಮುಖ್ಯ ಮಂತ್ರಿಗಳ ಮೇಲೆ ಹೆಚ್ಚಿನ ಒತ್ತಡವಿದೆ. ಹೊಂದಾಣಿಕೆಯಲ್ಲಿ ತೊಂದರೆ ಸಹಜ. ಆದರೆ, ಕುಮಾರಸ್ವಾಮಿ ಅವರು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಹೇಳಿದರು.