ಯಾದಗಿರಿ[ಜ.03]: ಬಳ್ಳಾರಿ ಮೈನಿಂಗ್ ಮಾಫಿಯಾವನ್ನೂ ಮೀರಿಸುತ್ತಿರುವಂತಿದೆ ಯಾದಗಿರಿ ಜಿಲ್ಲೆಯಲ್ಲಿನ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ದಂಧೆ. ಜಿಲ್ಲೆಯ ವಿವಿಧೆಡೆ ಮತ್ತೆ ಕೃಷ್ಣೆಯ ಒಡಲಾಳ ಬಗೆಯುತ್ತಿರುಬವ ಭೂಗಳ್ಳರು ಈಗಾಗಲೇ ಕೋಟ್ಯಂತರ ರುಪಾಯಿಗಳ ಮರಳನ್ನು ಹಾಡು ಹಗಲೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. 

ಈ ಮಧ್ಯೆ, ಕಲ್ಲು ಗಣಿಗಾರಿಕೆ ಇಲ್ಲಿ ಬೆಟ್ಟ ಗುಡ್ಡಗಳನ್ನೇ ಕರಗಿಸುತ್ತಿದ್ದು, ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲೇ ಭಾರಿ ಪ್ರಮಾಣದಲ್ಲಿ ಸ್ಪೋಟ ಕಗಳನ್ನು ಬಳಸಿ ಭೂಮಿಗೆ ಕನ್ನ ಹಾಕುತ್ತಿದ್ದರೂ ಸಂಬಂಧಿತ ಇಲಾಖೆ ಹಾಗೂ ಜಿಲ್ಲಾಡಳಿತದ ಮುಖ್ಯಸ್ಥರು ಏನೂ ಗೊತ್ತಿರದಂತೆಯೇ ವರ್ತಿ ಸುತ್ತಿರುವುದು ವಿಪರ್ಯಾಸ. ಪರವಾನಗಿ ಪಡೆದಿರುವುದಾಗಿ ಹೇಳಿ, ಕೋಟ್ಯಂತರ ರುಪಾಯಿಗಳ ಗಣಿಗಾರಿಗೆ ವಹಿವಾಟು ನಡೆಸುತ್ತಿರುವ ಕೆಲವರು, ಸರ್ಕಾರದ ಬೊಕ್ಕಸಕ್ಕೂ ಮೋಸ ಮಾಡುತ್ತಿದ್ದಾರೆ. 

ಕಲ್ಲು ಗಣಿಗಾ ರಿಕೆಯಿಂದ ಹೊಲಗದ್ದೆಗಳಲ್ಲಿನ ಬೆಳೆಗಳು ಹಾಳಾಗುತ್ತಿವೆಯೆಲ್ಲದೆ, ಅಂತರ್ಜಲವೂ ಸಹ ಬತ್ತಿ ಹೋಗಿದೆ. ಅಲ್ಲದೆ, ಸ್ಪೋಟಕಗಳ ಬಳಕೆಯಿಂದ ಜೀವಕ್ಕೆ ಭಯವಾಗಿದೆ ಎಂದು ಆತಂಕಗೊಂಡ ಯಾದಗಿರಿಗೆ ಸಮೀಪದ ಹಳಿಗೇರಾದ ಸರ್ವೇ ನಂ.95ರಲ್ಲಿನ ಸಣ್ಣ ಮಲ್ಲಯ್ಯ ಹಾಗೂ ಮೌಲಾನಾಸಾಬ್ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಯಾದಗಿರಿಯ ನ್ಯಾಯಾಲಯ ಡಿ.13, 2019 ರಂದು ತಡೆ ಆದೇಶ ನೀಡಿದೆ. ಇದನ್ನು ತಡೆಗಟ್ಟ ಬೇಕಾದ ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಸಹ, ಇಂದಿಗೂ ಅದು ಎಗ್ಗಿಲ್ಲದೆ ನಡೆಯುತ್ತಿರುವುದು ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿದಂತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವರ್ಕನಳ್ಳಿ ಸಮೀಪದ, ಐದಾರು ಶತಮಾನಗಳ ಹಿಂದಿನ ಜಲಾಲ್ ಸಾಬ್ ದರ್ಗಾಕ್ಕೆ ಗಣಿಗಾರಿಕೆ ಆತಂಕ ಎದುರಾಗಿದ್ದು, ಇದು ಹಾಗೆಯೇ ಮುಂದುವರೆದರೆ ಅದೂ ಸಹ ನೆಲಕಚ್ಚುವ ಆತಂಕ ಎದುರಾಗಿದೆ. ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೆ ನಾಮ್ ಕೆ ವಾಸ್ತೆಯಂತೆ ಬಂದು ನೋಡಿ ಹೋಗುವ ಅವರ ವರ್ತನೆ ಗಣಿಗಳ್ಳರ ಜೊತೆ ಶಾಮೀಲಾಗಿರುವಂತಿದೆ ಎಂದು ಆತಂಕ ವ್ಯಕ್ತಪಡಿಸಿದ ದಾವಲಸಾಬ್ ಹಾಗೂ ಸಣ್ಣ ಮಲ್ಲಯ್ಯ, ಗಣಿಗಾರಿಕೆ ತಮ್ಮ ಜೀವಕ್ಕೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಇತ್ತ, ಯಾದಗಿರಿ ಗಂಜ್ ಬಳಿಯ ವರ್ಕನಳ್ಳಿ ರಸ್ತೆಯಲ್ಲಿರುಬ ಹೌಸಿಂಗ್ ಬೋರ್ಡ್ ಕಾಲೋನಿಯ ಹಿಂದುಗಡೆ ಅಕ್ರಮ ಕಲ್ಲು ಗಣಿಗಾರಿಕೆ ಮಿತಿ ಮೀರಿದೆ. ಗಣಿಗಾರಿಕೆ ಅನುಮತಿ ಇರದಿದ್ದರೂ ಇಲ್ಲಿ ನೆಲವನ್ನೇ ಬಗೆದು ಕೋಟ್ಯಂತರ ರುಪಾಯಿಗಳ ಭೂಗರ್ಭ ಸಂಪತ್ತನ್ನು ಕೊಳ್ಳೆ ಹೊಡೆಯಲಾಗಿದೆ. ಅಕ್ರಮ ಗಣಿಗಾರಿಕೆ ಹಾಗೂ ವ್ಯಾಪಕ ಸ್ಪೋಟಕಗಳನ್ನು ಇಲ್ಲಿ ಬಳಸುತ್ತಿರುವುದರಿಂದ ಈ ಪ್ರದೇಶಕ್ಕೆ ಅಂಟಿ ಕೊಂಡಿರುವ ಹೌಸಿಂಗ್ ಬೋರ್ಡ್ ಮನೆಗಳು ಬಿರುಕು ಬಿಟ್ಟಿವೆ. ನೂರಾರು ಎಕರೆ ಪ್ರದೇಶದಲ್ಲಿ ಇಡೀ ಭೂಮಿಯನ್ನೆ ಬಗೆದು ಹಾಕಿದೆ. ಅನುಮತಿ ಇರದಿದ್ದರೂ ಇಲ್ಲಿ ನಡೆಸಲಾಗುತ್ತಿರುವ ಹಾಗೂ ಜನವಸತಿ ಪ್ರದೇಶದಲ್ಲಿ ಸ್ಪೋಟಕಗಳ ಬಳಕೆಯಿಂದಾಗುವ ಆತಂಕ ಬಗ್ಗೆ ಜಿಲ್ಲಾಡಳಿತಕ್ಕೆ ಅನೇಕ ಬಾರಿ ದೂರು ನೀಡಿದರೂ ಪ್ರಯೋ ಜನವಾಗಿಲ್ಲ.

ಭಾರಿ ಪ್ರಮಾಣದಲ್ಲಿ ಜಿಲೇಟಿನ್ ಗಳನ್ನು ಬಳಸಿ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗಣಿ ಇಲಾಖೆಯ ಮಂತ್ರಿಯಾಗಿದ್ದ ರಾಜಶೇಖರ ಪಾಟೀಲ್ ಹುಮ್ನಾಬಾದ್ ಅವರು ಯಾದಗಿರಿ ಜಿಲ್ಲೆಯ ಉಸ್ತುವಾರಿಯಾಗಿದ್ದಾಗ, ಗಣಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೆ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ಮುಗಿಲು ಮುಟ್ಟಿತ್ತು. ಅದಕ್ಕೆ ಕಡಿ ವಾಣ ಹಾಕುವ ನಿಟ್ಟಿನಲ್ಲಿ ಸಚಿವರು ಪ್ರಯ ತ್ನಿಸಿದರಾದರೂ, ಜಿಡ್ಡುಗಟ್ಟಿದ ಆಡಳಿತ ಹಾಗೂ ಲಂಚಕೋರ ಅಧಿಕಾರಿಗಳಿಂದ ಅದಕ್ಕೆ ಅಂತ್ಯ ಹಾಡಲಾಗಲಿಲ್ಲ. ಸದ್ಯ, ಪರಿಸರಕ್ಕೆ ಧಕ್ಕೆ ಹಾಗೂ ಜೀವಕ್ಕೆ ಮಾರಕವಾಗುವ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಹಾಡುಹಗಲೇ ಪರಿಸರದ ಮೇಲಾಗುತ್ತಿರುವ ಅತ್ಯಚಾರ ಹಾಗೂ ಸರ್ಕಾರದ ಬೊಕ್ಕಸಕ್ಕೆ ವಂಚಿ ಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಇಲಾಖೆಯಲ್ಲಿ ವರ್ಷಗಳಿಂದ ಬೀಡುಬಿಟ್ಟಿರುವ, ಗಣಿಗಳ್ಳರ ಜೊತೆ ಕೈಜೋಡಿಸಿರುವಂತಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಾಗಿದೆ ಅನ್ನೋದು ಜನರ ಆಗ್ರಹವಾಗಿದೆ.

* ಹಾಡು ಹಗಲೇ ಅಕ್ರಮವಾಗಿ ಕೋಟ್ಯಂತರ ರುಪಾಯಿಗಳ ಮರಳು ಸಾಗಾಟ 

* ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೂ ಮೋಸ, ಪಕ್ಕದ ಜಮೀನು, ಮನೆಗಳಿಗೂ ಹಾನಿ 

* ಅಕ್ರಮ ತಡೆಗಟ್ಟುವಂತೆ ನ್ಯಾಯಾಲಯ ನೀಡಿದ ತಡೆಯಾಜ್ಞೆಗೂ ಬೆಲೆಯಿಲ್ಲವೆ? 

*ಯಾದಗಿರಿಯ ವರ್ಕನಳ್ಳಿ, ಹಳಿಗೇರಾ ಬಳಿ ಕರಗಿದ ಗುಡ್ಡಗಳು 

*ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇತ್ತ ಕಡೆ ಕಣ್ಣಾಡಿಸುವರೇ?

ಭಾರಿ ಮದ್ದುಗಳನ್ನು ಬಳಸಿ ಬೆಟ್ಟಗುಡ್ಡಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದ್ದು, ಇದು ಜೀವಕ್ಕೆ ಆತಂಕ ಎದುರಾಗಿದೆ. ನಾವೆಲ್ಲ ನ್ಯಾಯಾಲಯಕ್ಕೆ ಮೊರೆ ಹೋಗಿ, ತಡೆಯಾಜ್ಞೆ ತಂದರೂ ಅಕ್ರಮ ನಿಂತಿಲ್ಲ. ಅಧಿಕಾರಿಗಳು ಗಣಿಗಳ್ಳರ ಜೊತೆ ಶಾಮೀಲಾದಂತಿದೆ ಎಂದು ಹಳಿಗೇರಾ ನಿವಾಸಿ  ದಾವಲಸಾಬ್ ಹೇಳಿದ್ದಾರೆ.

ಲೈಸೆನ್ಸ್ ಪಡೆದಿರುವುದಾಗಿ ಹೇಳುವ ಗಣಿಗಾರಿಕೆ ಮಾಡುವವರು ಇಡೀ ಸುತ್ತಮುತ್ತಲಿನ ಪ್ರದೇಶವನ್ನೆ ನುಂಗಿ ಹಾಕಿದ್ದಾರೆ. ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆ ಬೆಳೆಯೋದು ಕಷ್ಟವಾಗಿದೆ. ಕೋರ್ಟ್ ಸ್ಟೇ ಇದ್ದರೂ ಯಾರೂ ಕೇಳೋರಿಲ್ಲ ಎಂದು ಹಳಿಗೇರಾ ಗ್ರಾಮಸ್ಥ ನ್ಯಾಯಾಲಯಕ್ಕೆ ಮೊರೆ ಹೋದ ಸಣ್ಣ ಮಲ್ಲಯ್ಯ ಅವರು ಹೇಳಿದ್ದಾರೆ.