ಗದಗ ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತ!
ಕೆಂಪು ಗರಸು, ಕಲ್ಲು ಮಿಶ್ರಿತ ಮಣ್ಣಿಗಾಗಿ ತಾಲೂಕಿನ ಕಳಸಾಪುರ, ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಗುಡ್ಡಗಳನ್ನು ಇದುವರೆಗೂ ಅಗೆಯುತ್ತಿದ್ದ ಭೂಗಳ್ಳತನ ಈಗ ತಾಲೂಕಿನಾದ್ಯಂತ ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ.
ಶಿವಕುಮಾರ ಕುಷ್ಟಗಿ
ಗದಗ (ಮೇ.20): ಗದಗ ನಗರದ ಸುತ್ತಮುತ್ತಲ ಪ್ರದೇಶದಲ್ಲಿರುವ ಅತ್ಯುತ್ತಮ ಗುಣಮಟ್ಟದ ಕೆಂಪು ಕಲ್ಲು ಮಿಶ್ರಿತ ಮಣ್ಣಿಗೆ ವ್ಯಾಪಕವಾದ ಬೇಡಿಕೆ ಇದ್ದು, ಇದನ್ನೇ ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡಿರುವ ರಾಜಕೀಯ ನಾಯಕರ ಹಿಂಬಾಲಕರು ಹಗಲು ರಾತ್ರಿ ಎನ್ನದೇ ಅರಣ್ಯ ಭೂಮಿ, ಪಟ್ಟಾ ಜಮೀನು, ಮಾಲೀಕರಿಲ್ಲದ ಜಮೀನು, ಗುಡ್ಡಗಳನ್ನು ಅಗೆದು ನುಂಗುತ್ತಿದ್ದಾರೆ.
ಕೆಂಪು ಗರಸು, ಕಲ್ಲು ಮಿಶ್ರಿತ ಮಣ್ಣಿಗಾಗಿ ತಾಲೂಕಿನ ಕಳಸಾಪುರ, ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಗುಡ್ಡಗಳನ್ನು ಇದುವರೆಗೂ ಅಗೆಯುತ್ತಿದ್ದ ಭೂಗಳ್ಳತನ ಈಗ ತಾಲೂಕಿನಾದ್ಯಂತ ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ತಾಲೂಕಿನ ನಭಾಪುರು, ಬಿಂಕದಕಟ್ಟಿ, ಬೆಳದಡಿ, ಸೊರಟೂರು, ಬೆಂತೂರು, ಹುಲಕೋಟಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಅವ್ಯಾತವಾಗಿ ಈ ಅಕ್ರಮ ನಡೆಸುತ್ತಿದ್ದಾರೆ. ಪ್ರತಿ ತಿಂಗಳಿಗೆ ಕೋಟ್ಯಂತರ ಮೌಲ್ಯದ ಮಣ್ಣು ಅಕ್ರಮವಾಗಿ ಸಾಗಾಟವಾಗುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ತಮ್ಮ ಎಂದಿನ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ.
ಡೆಂಗ್ಯೂ ಭೀತಿಗೆ ಆಂತಕಗೊಂಡಿರೋ ಚಿತ್ರದುರ್ಗದ ಜನರು: ಆರೋಗ್ಯ ಇಲಾಖೆಯಿಂದ ನಿಗಾ!
ಚುನಾವಣೆಯೇ ಅನುಕೂಲಕಾರಿ: ಅಧಿಕಾರಿಗಳು ಲೋಕಸಭಾ ಚುನಾವಣೆಯಲ್ಲಿದ್ದೇವೆ ಎಂದು ಹೇಳುತ್ತಲೇ ಮಾಡಿದ ಉದ್ದೇಶ ಪೂರ್ವಕ ನಿರ್ಲಕ್ಷ್ಯ ಅಕ್ರಮ ಮಣ್ಣು ಗಣಿಗಾರಿಕೆ ಮಾಡುವವರಿಗೆ ವರದಾನವಾಗಿ ಪರಿಣಮಿಸಿದೆ. ಮಣ್ಣು ಕಳ್ಳರು ನಿರಂತರವಾಗಿ ಗಣಿಗಾರಿಕೆ ನಡೆಸಿದ್ದು, ಇತ್ತೀಚಿಗಷ್ಟೇ ಗಣಿ ಇಲಾಖೆ ಅಂದಾಜಿಸಿದ ವರದಿಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾಡಿದ್ದ ಮಣ್ಣು ಗಣಿಗಾರಿಕೆಯನ್ನು ಕೇವಲ ಚುನಾವಣೆಯ ನೀತಿ ಸಂಹಿತೆಯ ಅವಧಿಯಲ್ಲಿಯೇ (ಎರಡು ತಿಂಗಳಲ್ಲಿ) ಮಾಡಿ ಮುಗಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಕಣ್ಣೆದುರಿಗೆ ಅಕ್ರಮ: ನಗರದ ಕಳಸಾಪುರ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಆರ್‌ಟಿಒ ಕಚೇರಿಯ ಕೂಗಳತೆಯ ದೂರದಲ್ಲಿಯೇ ಸರ್ಕಾರಿ ಜಮೀನಾದ ಗುಡ್ಡವನ್ನೇ ಜೆಸಿಬಿಗಳ ಮೂಲಕ ನುಂಗಿ ಹಾಕುತ್ತಿದ್ದಾರೆ. ಅವರ ಕಚೇರಿ ಮುಂಭಾಗದಲ್ಲಿಯೇ ಹಾಯ್ದು ನಿತ್ಯವೂ ಟಿಪ್ಪರ್‌ಗಳು ಸಂಚರಿಸಿದರೂ ಆರ್‌ಟಿಒ ಅಧಿಕಾರಿಗಳು ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಾರೆ. ಕಂದಾಯ ಇಲಾಖೆಯ ಸಿಬ್ಬಂದಿ ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೆಲಸ ಎನ್ನುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದು ಆಯಾ ಪಂಚಾಯಿತಿ ಕೆಲಸ ಎನ್ನುವ ಹಳೆಯ ರಾಗವನ್ನೇ ಹೊಸ ರೂಪದಲ್ಲಿ ಹೇಳುತ್ತಿದ್ದಾರೆ.
ಕಾಟಾಚಾರದ ವರದಿಯೇ?: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತೀಚೆಗೆ ಗದಗ ತಾಲೂಕಿನ ಕೆಲವೆಡೆ ದಾಳಿ ನಡೆಸಿ ಪ್ರಕರಣ ದಾಖಲಿಸಿದೆ. ಕಳಸಾಪುರ, ನಭಾಪುರ, ಬೆಳದಡಿ ಗ್ರಾಮಗಳ ವಿವಿಧ ಸರ್ವೇ ನಂಬರಗಳಲ್ಲಿ ದಾಳಿ ಮಾಡಿ, ಅಕ್ರಮ ಮತ್ತು ಅನುಮತಿ ಇಲ್ಲದ ಭೂಮಿಯಲ್ಲಿ ನಡೆದ ಮಣ್ಣು ಗಣಿಗಾರಿಕೆಯ ವರದಿ ಸಿದ್ಧಪಡಿಸಿ ಭೂ ಮಾಲೀಕರಿಗೆ ರಾಯಲ್ಟಿ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳ ವರದಿ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದ್ದು, ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಆರ್‌ಟಿಒ ಕಚೇರಿ ಸಮೀಪ, ಆರ್‌ಡಿಪಿಆರ್ ವಿವಿ ಜಮೀನು, ಹುಡ್ಕೋ ಜಮೀನುಗಳಲ್ಲಿ ನೂರಾರು ಎಕರೆ ಗುಡ್ಡವನ್ನೇ ನುಂಗಿದ್ದು, ಹೆದ್ದಾರಿಯಲ್ಲಿ ನಿಂತರೆ ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತದೆ. ಇದ್ಯಾವುದು ಇಲಾಖೆಯ ವರದಿಯಲ್ಲಿ ಉಲ್ಲೇಖವಾಗದೇ ಇರುವುದು ವರದಿ ಹಾಗೂ ಅದನ್ನು ಸಿದ್ಧಪಡಿಸಿದ ಅಧಿಕಾರಿಗಳ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ.
ನಿಶಾಚರಿಗಳಿವರು: ಸರ್ಕಾರಿ ಜಮೀನು, ಅರಣ್ಯ ಇಲಾಖೆಯ ಗುಡ್ಡಗಳನ್ನು ಬಗೆದು ಮಾರಿಕೊಳ್ಳುತ್ತಿರುವ ಭೂಗಳ್ಳರು ಹಗಲೆಲ್ಲ ಮನೆಯಲ್ಲಿಯೇ ಇದ್ದು ಏನೂ ಗೊತ್ತಿಲ್ಲದಂತೆ ಇರುತ್ತಾರೆ. ಸೂರ್ಯ ಮುಳುಗುತ್ತಿದ್ದಂತೆ ಫೀಲ್ಡಿಗಿಳಿಯುವ ಇವರು ರಾತ್ರಿಯೆಲ್ಲ ಗುಡ್ಡ ಅಗೆದು ಮಣ್ಣನ್ನು ಸಾಗಿಸುತ್ತಾರೆ. ಬೆಳಗಾಗುತ್ತಿದ್ದಂತೆ ಅಲ್ಲಿಂದ ಕಾಲ್ಕೀಳುತ್ತಾರೆ. ಒಂದು ರೀತಿಯಲ್ಲಿ ನಿಶಾಚರಿಗಳಂತೆ ವರ್ತಿಸುತ್ತಾ ಅಕ್ರಮವಾಗಿ ಸರ್ಕಾರದ ಆಸ್ತಿಯನ್ನು ಬಗೆದು ತಮ್ಮ ಮನೆ ತುಂಬಿಸಿಕೊಳ್ಳುತ್ತಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಳ: ರೈತರಿಗೆ ಸಂತಸ
ನಮ್ಮ ಇಲಾಖೆಯಿಂದ ಈಗಾಗಲೇ ಮಣ್ಣು ಗಣಿಗಾರಿಕೆ ನಡೆದಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಾಗಿದೆ. ಅಲ್ಲಿನ ಮಣ್ಣಿನ್ನು ಸಂಗ್ರಹಿಸಿ ಮಣ್ಣಿನಲ್ಲಿ ಕಬ್ಬಿಣಾಂಶದ ಸಿಗುವ ಬಗ್ಗೆ ಬಳ್ಳಾರಿಗೆ ಸ್ಯಾಂಪಲ್ ಕಳುಹಿಸಲಾಗಿದೆ. ವರದಿ ಬಂದ ಆನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಾವಿತ್ರಿ.ಬಿ., ತಿಳಿಸಿದ್ದಾರೆ.