ಸಂರಕ್ಷಿತ ಅರಣ್ಯದಲ್ಲಿ ಅಕ್ರಮ ರಸ್ತೆ ನಿರ್ಮಾಣ, ಕೊಡಗು ಶಾಸಕರ ಮೇಲೆ ಶಿಕ್ಷೆ ತೂಗುಗತ್ತಿ!
ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ನಾಶ ಮಾಡಿ ರಸ್ತೆ ನಿರ್ಮಿಸಿದರು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಹಾಗೂ ಎಲ್ಲಕ್ಕಿಂತ ಹೆಚ್ಚಿನದಾಗಿ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಕೊಡಗಿನ ಇಬ್ಬರು ಶಾಸಕರ ಮೇಲೆ ಶಿಕ್ಷೆಯ ತೂಗುಗತ್ತಿ ನೇತಾಡುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.21) : ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಆಡಳಿತ ನಡುವೆ ಬಹು ಹಿಂದಿನಿಂದಲೂ ತಿಕ್ಕಾಟ ನಡೆಯುತ್ತಲೇ ಇದೆ. ಆದರೀಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ನಾಶ ಮಾಡಿ ರಸ್ತೆ ನಿರ್ಮಿಸಿದರು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಹಾಗೂ ಎಲ್ಲಕ್ಕಿಂತ ಹೆಚ್ಚಿನದಾಗಿ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಕೊಡಗಿನ ಇಬ್ಬರು ಶಾಸಕರ ಮೇಲೆ ಶಿಕ್ಷೆಯ ತೂಗುಗತ್ತಿ ನೇತಾಡುತ್ತಿದೆ.
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಮಕಲ್ಲು ಗ್ರಾಮದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ರಸ್ತೆ ನಿರ್ಮಿಸುವುದಕ್ಕಾಗಿ 2008 ರಲ್ಲಿ ಕೊಡಗಿನ ಇಬ್ಬರು ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ. ಜಿ ಬೋಪಯ್ಯ ಹಾಗೂ ಅಂದಿನ ಎಂಎಲ್‍ಸಿ ಎಸ್. ಜಿ ಮೇದಪ್ಪ ಅವರು ಪ್ರಯತ್ನಿಸಿದ್ದರು. ಆದರೆ ರಸ್ತೆ ಮಾಡಲು ಪ್ರಯತ್ನಿಸಿದ್ದ ಆ ಜಾಗ ಪುಷ್ಪಗಿರಿ ವನ್ಯಜೀವಿ ಧಾಮವಾಗಿದ್ದು ಅಲ್ಲಿ ಯಾವುದೇ ಕಾಮಗಾರಿ ಮಾಡುವಂತಿರಲಿಲ್ಲ. ಆದರೂ ಅರಣ್ಯ ಕಾನೂನನ್ನು ಉಲ್ಲಂಘಿಸಿ ರಸ್ತೆ ಕಾಮಗಾರಿ ಮಾಡಿದ್ದರು ಎನ್ನಲಾಗಿದೆ.
Kodagu: ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆಗೆ ಶಾಸಕ ಅಪ್ಪಚ್ಚುರಂಜನ್ ಸೂಚನೆ
ಇದರಿಂದ ಸಾಕಷ್ಟು ಅರಣ್ಯ ನಾಶವಾಗಿದೆ ಎಂದು ನಿವೃತ ಏರ್ ಮಾರ್ಷಲ್ ನಂದ ಕಾರ್ಯಪ್ಪ ಅವರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬಳಿಕ ಪ್ರಕರಣವನ್ನು ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧಿಕರಣ ಪೀಠಕ್ಕೆ ವರ್ಗಾಯಿಸಿತ್ತು. ಈ ವೇಳೆ ಕೋರ್ಟ್ ಸಿಇಸಿ ಕಮಿಟಿ ರಚಿಸಿ ಪ್ರಕರಣದ ಕುರಿತು ವರದಿ ನೀಡುವಂತೆ ಸೂಚಿಸಿತ್ತು.
ಕೋರ್ಟಿನಲ್ಲಿ ಪ್ರಕರಣ ಇರುವಾಗಲೇ 2012 ರಲ್ಲಿ ಮತ್ತೆ ಕಾಮಗಾರಿ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ 2017 ರಲ್ಲಿ ಕಾಮಗಾರಿಯನ್ನು ಮಾಡಲೇಬೇಕು ಎಂದು ಅಂದಿನ ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ಅಲ್ಲದೆ ಸಭೆಯಲ್ಲಿ ಅಂದಿನ ಅರಣ್ಯ ಇಲಾಖೆ ಮಡಿಕೇರಿ ಡಿಎಫ್‍ಒ ಅವರಿಗೆ ಶಾಸಕರು ತೀವ್ರ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಎಲ್ಲಾ ಸಾಕ್ಷ್ಯಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಇಬ್ಬರು ಶಾಸಕರಿಗೆ, ಪರಿಷತ್ ಸದಸ್ಯರಿಗೆ, ಅಂದಿನ ಜಿಲ್ಲಾಧಿಕಾರಿ ಬಲದೇವ ಕೃಷ್ಣ ಮತ್ತು ಕೊಡಗು ಸಿಸಿಎಫ್ ಆಗಿದ್ದ ಸುದರ್ಶನ್ ಇವರಿಗೆ ಯಾವ ರೀತಿ ಶಿಕ್ಷೆ ಪ್ರಕಟಿಸಬೇಕು ಎಂಬುದರ ಕುರಿತು ವರದಿ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ವರದಿ ನೀಡುವಂತೆ ಹಸಿರು ನ್ಯಾಯಾಧಿಕರಣದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ಅವರ ಪೀಠ ಸೂಚಿಸಿದೆ.
ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪರಿಸರವಾದಿ ತಮ್ಮು ಪೂವಯ್ಯ ಹೇಳಿದ್ದಾರೆ. ಈ ಕುರಿತು ಶಾಸಕ ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರನ್ನು ಕೇಳಿದರೆ, ನಾವು ರಸ್ತೆ ಮಾಡುವುದಕ್ಕೆ ಯಾವುದೇ ಅರಣ್ಯ ನಾಶ ಮಾಡಿಲ್ಲ. ಕುರುಚಲು ಗಿಡಗಳನ್ನು ಮಾತ್ರವೇ ತೆಗೆದಿದ್ದೆವು. ಎಲ್ಲೆಲ್ಲಾ ಗುಂಡಿಗಳಿದ್ದವು ಅಲ್ಲಿಗೆ ಮಣ್ಣು ಮುಚ್ಚುವ ಕೆಲಸ ಮಾಡಿದ್ದೆವು ಅಷ್ಟೇ. ನಾವು ಯಾರೊಂದಿಗೆ ಸೇರಿ ಅನಧಿಕೃತ ಟಿಂಬರ್ ಸಾಗಿಸುವ ಕೆಲಸ ಮಾಡಿಲ್ಲ. ಸಾರ್ವಜನಿಕರ ಹಿತಾಸಕ್ತಿಗಾಗಿ ರಸ್ತೆ ಮಾಡಲು ಮುಂದಾಗಿದ್ದೆವು. ಚುನಾವಣೆ ಹತ್ತಿರ ಇರುವುದರಿಂದ ಬೇಕೆಂದೆ ನಮ್ಮ ವಿರುದ್ಧ ಹೀಗೆಲ್ಲಾ ಮಾಡಲಾಗುತ್ತಿದೆ ಎಂದು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಹೇಳಿದ್ದಾರೆ.
Kodagu: ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆಗೆ ಶಾಸಕ ಅಪ್ಪಚ್ಚುರಂಜನ್ ಸೂಚನೆ
ಒಟ್ಟಿನಲ್ಲಿ 15 ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನಿಸಿದ್ದ ಪ್ರಕರಣ ಇತ್ಯರ್ಥ ಆಗುವ ಹಂತ ತಲುಪಿದ್ದು, ಕೊಡಗಿನ ಇಬ್ಬರು ಶಾಸಕರ ವಿರುದ್ಧ ನ್ಯಾಯಾಲಯ ಕ್ರಮ ಕೈಗೊಳ್ಳುವುದು ಖಚಿತವಾದಂತೆ ಆಗಿದೆ. ಆದರೆ ಯಾವ ಶಿಕ್ಷೆ ಪ್ರಕಟಿಸುತ್ತೆ, ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.