ಬೆಂಗಳೂರು(ಡಿ.30): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಇದರಿಂದಾಗಿ ರಾಜ್ಯಕ್ಕೆ ಕೋಟ್ಯಂತರ ರುಪಾಯಿ ರಾಜಧನ ಕೈತಪ್ಪುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ದಕ್ಷಿಣ ಕನ್ನಡದ ಜಿಲ್ಲಾಡಳಿತವೇ ನೀಡಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕೆಂಪು ಕಲ್ಲಿನ ಕೋರೆಗಳಿದ್ದರೂ ಪರವಾನಗಿ ಪಡೆದಿರುವುದು ಕೇವಲ 40 ಮಂದಿ ಮಾತ್ರ. ಉಳಿದವರು ಪರವಾನಗಿ ಪಡೆಯದೆ ನಿರಂತರವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.

ರೈತರಿಂದ ಮತ್ತೆ 146 ಮೊಬೈಲ್‌ ಟವರ್‌ಗಳು ಧ್ವಂಸ!

ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಆದರೆ ಕೆಂಪು ಕಲ್ಲಿನ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂಬುದು ಅಲ್ಲಿನ ಸಾರ್ವಜನಿಕ ಗಂಭೀರ ಆರೋಪ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಬಾಂಬಿಲ ಪದವು ಎಂಬ ಗ್ರಾಮದಲ್ಲಿ ನಡೆಯುತ್ತಿದ್ದು ಏಳೆಂಟು ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಜಮೀನು ಮತ್ತು ಖಾಸಗಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೇ ಕೆಂಪು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ರಾಜಧನ ಕೈತಪ್ಪಿದೆ.

ಜಿಲ್ಲೆಯಲ್ಲಿ ಬಹಳಷ್ಟುಮಂದಿ ಪರವಾನಗಿ ಇಲ್ಲದೆ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವುಗಳನ್ನು ನಿಲ್ಲಿಸಲು ಗ್ರಾಮಮಟ್ಟದ ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ. ಎಲ್ಲೇ ಗಣಿಗಾರಿಕೆ ನಡೆದರೂ ಅದಕ್ಕೆ ಪರವಾನಗಿ ಇದೆಯೇ ಎಂದು ಖುದ್ದು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ರಮ ಗಣಿಗಾರಿಕೆ ನಡೆದರೆ ಗ್ರಾಮ ಲೆಕ್ಕಿಗರು, ಪಿಡಿಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿದ್ದರಿಂದ ಬಹುತೇಕ ಅಕ್ರಮ ಗಣಿಗಾರಿಕೆ ಪ್ರಸ್ತುತ ನಿಂತಿದೆ. ಈಗ ಗ್ರಾಪಂ ಚುನಾವಣಾ ಪ್ರಕ್ರಿಯೆ ಇರುವುದರಿಂದ ಜನವರಿ ಮೊದಲ ವಾರದಿಂದ ಕಟ್ಟುನಿಟ್ಟಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದ್ದಾರೆ.

ಮೂಲಸೌಕರ್ಯ ವಿಷಯದಲ್ಲಿ ರಾಜಕೀಯ ಬೇಡ: ಮೋದಿ ಘರ್ಜನೆ!

ಕಳೆದ ಏಳೆಂಟು ವರ್ಷಗಳಿಂದ ಸುಮಾರು 40 ಎಕರೆಗೂ ಅಧಿಕ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆಯನ್ನು ಎಗ್ಗಿಲ್ಲದೆ ನಡೆಸಲಾಗುತ್ತಿದೆ. ಈ ಬಗ್ಗೆ ಜವಾಬ್ದಾರಿ ವಹಿಸಬೇಕಾದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಅಕ್ರಮ ಕೆಂಪು ಗಣಿಗಾರಿಕೆ ನಡೆಸುತ್ತಿರುವವರ ಜತೆಗೆ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಅಮ್ಟಾಡಿ ಗ್ರಾಮಸ್ಥರು ಇಲಾಖೆಗೆ ಅನೇಕ ಬಾರಿ ದೂರು ನೀಡಿದರೂ ಈವರೆಗೂ ಯಾವುದೇ ಪ್ರಯೋಜವಾಗಿಲ್ಲ. ಸ್ಥಳೀಯ ಎಂಟತ್ತು ಮಂದಿ ಕೆಲ ಪಟ್ಟಭದ್ರ ಹಿತಾಸಕ್ತಿಯ ಜನ ಕೋಟ್ಯಂತರ ರು.ಬೆಲೆ ಬಾಳುವ ಕೆಂಪುಕಲ್ಲನ್ನು ಅಕ್ರಮವಾಗಿ ತೆಗೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೈಕಟ್ಟಿಕುಳಿತಿದ್ದಾರೆ. ಇದಕ್ಕೆಲ್ಲಾ ಅಕ್ರಮ ನಡೆಸುತ್ತಿರುವವರ ಹಿಂದೆ ಪ್ರಭಾವಿ ಜನಪ್ರತಿನಿಧಿಗಳ ಬೆಂಬಲವೂ ಇರುವುದು ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

ನಿಲ್ಲದ ಕೆಂಪು ಕಲ್ಲು ಗಣಿಗಾರಿಕೆ:

ಈ ಹಿಂದೆ 2014ರಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಕುರಿತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಅಮ್ಟಾಡಿ ಗ್ರಾಮಸ್ಥರು ತಂದಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಗಣಿಗಾರಿಕೆ ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ಈ ಪರಿಣಾಮ ಬಾಂಬಿಲ ಪದವು ಗ್ರಾಮದಲ್ಲಿ ಗಣಿಗಾರಿಕೆ ನಿಂತಿತ್ತು. ನಂತರ ಪುನಃ ಒಂದೆರಡು ವರ್ಷಗಳಲ್ಲೇ ಅಕ್ರಮವಾಗಿ ಕಲ್ಲು ತೆಗೆಯಲು ಆರಂಭಿಸಲಾಗಿತ್ತು. ಈ ಬಗ್ಗೆ 2020ರ ಆಗಸ್ಟ್‌ನಲ್ಲಿ ಬಂಟ್ವಾಳದ ತಹಸೀಲ್ದಾರರು ವರದಿಯೊಂದನ್ನು ತಯಾರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಎರಡು ಬಾರಿ ಕಳುಹಿಸಿಕೊಟ್ಟಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಈ ಅಕ್ರಮ ಕೆಂಪು ಗಣಿಗಾರಿಕೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಗಣಿ ಸಚಿವರ ಮಾತಿಗೂ ಗೌರವ ಕೊಡಲಿಲ್ಲ!?:

ಕುತೂಹಲದ ಸಂಗತಿಯೆಂದರೆ ಖುದ್ದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು, ಬಾಂಬಿಲ ಪದವು ಗ್ರಾಮದಲ್ಲಿ ನಡೆಯುವ ಕೆಂಪುಕಲ್ಲು ಗಣಿಗಾರಿಕೆ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಸೂಚನೆ ನೀಡಿದ್ದರೂ ಶಾಶ್ವತವಾಗಿ ಇಲ್ಲಿನ ಅಕ್ರಮ ನಿಲ್ಲಿಸಲು ಸಾಧ್ಯವಾಗಿಲ್ಲ.

ಅಕ್ರಮ ಕೆಂಪು ಕಲ್ಲನ್ನು ಹೊತ್ತ ಭಾರೀ ವಾಹನಗಳು ಬಂಟ್ವಾಳದ ಅಜಕಳ, ಕೆಂಪುಗುಡ್ಡೆ ಕಲ್ಪನೆಯಲ್ಲಿರುವ ಅಮ್ಟಾಡಿ ಬಾಂಬಿಲ ಪದವು ಗ್ರಾಮದಲ್ಲಿ ಓಡಾಡುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ. ಈ ಅಕ್ರಮ ದಂಧೆ ನಿಲ್ಲಿಸುವಂತೆ ಒತ್ತಾಯಿಸಿ ಹಾಲಿ ತಹಸೀಲ್ದಾರ್‌ ರಶ್ಮಿ ಅವರಿಗೆ ಬಾಂಬಿಲ ಪದವು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಕೆಂಪು ಕಲ್ಲು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿಸಿದ್ದಾರೆ. ಆದರೆ, ಗಣಿಗಾರಿಕೆ ನಡೆಸುತ್ತಿರುವವರು ಪ್ರಭಾವಿಗಳಾಗಿದ್ದು, ಪುನಃ ದಂಧೆ ಆರಂಭವಾಗುವ ಭೀತಿ ಗ್ರಾಮಸ್ಥರದ್ದು. ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ಬಂದ್‌ ಮಾಡಿಸಬೇಕು ಮತ್ತು ಈವರೆಗೂ ಅಕ್ರಮವಾಗಿ ತೆಗೆದಿರುವ ಕೆಂಪು ಕಲ್ಲಿನ ಲೆಕ್ಕಾಚಾರದಡಿ ರಾಜಧನ ವಸೂಲಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.