ಚಂಡೀಗಢ(ಡಿ.30): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಭಾರೀ ಪ್ರತಿಭಟನೆಯಲ್ಲಿ ನಿರತರಾಗಿರುವ ಪಂಜಾಬ್‌ ರೈತರು ಸೋಮವಾರ ಮತ್ತೆ ರಾಜ್ಯದ 146 ಮೊಬೈಲ್‌ ಟವರ್‌ಗಳನ್ನು ಧ್ವಂಸ ಮಾಡಿದ್ದಾರೆ. ಈ ಮೂಲಕ ಪಂಜಾಬ್‌ನಲ್ಲಿ ಈವರೆಗೆ ಒಟ್ಟಾರೆ 1561 ಟವರ್‌ಗಳು ಹಾನಿಯಾಗಿವೆ.

ಈ ಪೈಕಿ ಈಗಾಗಲೇ 433 ಟವರ್‌ಗಳನ್ನು ಸರಿಪಡಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಟವರ್‌ ಹಾನಿಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಎಚ್ಚರಿಸಿದ್ದಾರೆ.

ನೂತನ ಕೃಷಿ ಕಾಯ್ದೆಗಳಿಂದ ದೇಶದ ಉದ್ಯಮಿಗಳಾದ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ವದಂತಿಯಿಂದಾಗಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಟವರ್‌ಗಳನ್ನೇ ರೈತರು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಒಟ್ಟಾರೆ 2,11,206 ಟವರ್‌ಗಳಿವೆ.