ಖಾಜಾಮೈನುದ್ದೀನ್‌ ಪಟೇಲ್‌ 

ವಿಜಯಪುರ(ಏ.12): ಕೊರೋನಾ ನಿಯಂತ್ರಣಕ್ಕಾಗಿ ಇಡೀ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಸಾವಿರಾರು ಬಡ ಜನತೆ ತುತ್ತಿನ ಚೀಲ ತುಂಬಿಸಿಕೊಳ್ಳುವ ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನೊಂದೆಡೆ ಮದ್ಯ ಪ್ರಿಯರು ಮದ್ಯವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ಯ ವ್ಯಸನಿಗಳು ಮದ್ಯ ಸಿಗದೇ ಜಿಗುಪ್ಸೆ ತಾಳಿ ಆತ್ಮಹತ್ಯೆ ಮಾಡಿಕೊಂಡ ಅನೇಕ ಘಟನೆಗಳು ವರದಿಯಾಗಿವೆ.

ಇದೆಲ್ಲದರ ಪರಿಣಾಮವಾಗಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಹಿಂಬಾಗಿಲ ಮೂಲಕ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆಯು ಅನೇಕ ಕಡೆ ದಾಳಿ ನಡೆಸಿದರೂ ಅಕ್ರಮ ಮದ್ಯ ಮಾರಾಟ ನಿಂತಿಲ್ಲ. ಕೆಲವೊಂದು ಬಾರ್‌ಗಳು ಹಿಂಬದಿಯಿಂದ ಷಟರ್‌ ಓಪನ್‌ ಮಾಡಿ ಮದ್ಯಪ್ರಿಯರಿಗೆ ಮದ್ಯ ನೀಡುತ್ತಿವೆ. ಮದ್ಯವ್ಯಸನಿಗಳು ಎಲ್ಲಿಂದಲೋ ಹಣ ತಂದು ಎಷ್ಟುದುಬಾರಿಯಾದರೂ ಖರೀದಿಸುತ್ತಾರೆ ಎಂಬುದನ್ನೇ ಕೆಲವೊಬ್ಬರು ಬಂಡವಾಳ ಮಾಡಿಕೊಂಡು ದುಬಾರಿ ದರದಲ್ಲಿ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ನಗರ ಪ್ರದೇಶದಲ್ಲಿ ಮದ್ಯ ಸಿಗದಿರುವಾಗ ಪೊಲೀಸರ ಭಯದಿಂದ ಹೊರವಲಯ, ಹಳ್ಳಿಗಳಿಗೆ ಹೋಗಿ ಮದ್ಯ ಖರೀದಿಸುವ ಅನೇಕ ಉದಾಹರಣೆ ಇವೆ. ಕ್ವಾರ್ಟರ್‌ಗೆ 90 ರು. ಪಡೆಯಲಾಗುತ್ತದೆ. ಮದ್ಯದ ಬೆಲೆ ಈಗ 350 ರು. ಏರಿಕೆಯಾಗಿದೆ. ಬಿಯರ್‌ಗಳಿಗೆ ಹೆಚ್ಚಿದ ಬೇಡಿಕೆಯಿದ್ದರೂ ಏಜೆಂಟ್‌ರಿಗೆ ಇದನ್ನು ಸಾಗಿಸಲು ಕಷ್ಟವಿರುವುದರಿಂದ ಬೀಯರ್‌ಗಳು ಮದ್ಯಪ್ರಿಯರಿಗೆ ಸಿಗುವುದು ದುಸ್ತರವಾಗಿದೆ.

ಹೊಲಗಳಲ್ಲಿ ಯುವಕರ ದಂಡು:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಯುವಕರು ಕೆಲಸ ಕಾರ್ಯವಿಲ್ಲದೆ ಮನೆಯಲ್ಲಿ ಕುಳಿತು ಬೇಸತ್ತು ಹೊಲಗಳಲ್ಲಿ ದಂಡು ಸೇರಿ ಪಾರ್ಟಿ ಮಾಡುತ್ತಿದ್ದಾರೆ. ಚಿಕನ್‌, ಮಟನ್‌ ತೆಗೆದುಕೊಂಡು ಹೋಗಿ ಪಾರ್ಟಿ ಮಾಡಲು ಬಿಜಿ ಆಗಿರುವುದು ಕಂಡು ಬಂದಿದೆ. 

ನಗರ ಪ್ರದೇಶದಲ್ಲಿ ಹೊರಗೆ ಸಂಚರಿಸುವುದು ಕಷ್ಟಸಾಧ್ಯ. ಇದನ್ನು ಅರಿತ ಯುವಕರ ತಂಡ ಪೊಲೀಸರ ಕಣ್ತಪ್ಪಿಸಿಕೊಂಡು ಹೊಲಗಳಿಗೆ ಸೇರುತ್ತಿದ್ದಾರೆ. ಅಲ್ಲಿ ಹೊಲದ ಮಧ್ಯದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಕುಳಿತು ಹೊಟ್ಟೆಬಿರಿಯುವಂತೆ ಊಟ ಮಾಡಿ, ತೃಪ್ತಿಯಾಗುವವರೆಗೂ ಮದ್ಯ ಸೇವನೆಯಲ್ಲಿ ತೊಡಗಿದ್ದಾರೆ. ಈ ರೀತಿಯಾಗಿ ಅನೇಕ ಪಾರ್ಟಿಗಳು ಹೊಲಗಳಲ್ಲಿ ನಡೆಯುತ್ತಿವೆ ಎನ್ನಲಾಗಿದೆ.