ಖಾಜು ಸಿಂಗೆಗೋಳ 

ಇಂಡಿ(ಡಿ.09): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳ್ಳಿ, ಹಳ್ಳಿಗಳಲ್ಲಿ ಮಿನಿ ಬಾರ್‌ಗಳು ತಲೆ ಎತ್ತಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆ​ಯು​ತ್ತಿದ್ದು, ಮದ್ಯ ವ್ಯವಸನಿಗಳು ಅಮಲಿನಲ್ಲಿಯೇ ನಿತ್ಯ ಕಾಲಕಳೆಯುವಂತಾಗಿದೆ. ಮಕ್ಕಳು, ಮಹಿಳೆಯರು, ವೃದ್ಧ ತಂದೆ-ತಾಯಂದಿ​ರು ಅಕ್ರಮ ಮದ್ಯಮಾರಾಟಗಾರರಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ನಾಯಿ ಕೊಡೆಗಳಂತೆ ಎಲ್ಲಿ ಬೇಕೆಂದ​ರಲ್ಲಿ ಅಕ್ರಮ ಮದ್ಯದ ಅಂಡಿಗಳು ತಲೆ ಎತ್ತಿವೆ. ಪಾನ್‌, ಬೀಡಾ ಅಂಗಡಿ, ಹೋಟೆಲ್‌, ಕ್ರೋಲ್ಡ್‌ಡ್ರಿಂಕ್ಸ್‌ ಅಂಗಡಿ ಸೇರಿದಂತೆ ಇತರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ಪ್ರತಿಭಟಿಸಿ​ದರೂ ಯಾವುದೇ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸ್ಥಗಿತಗೊಂಡಿಲ್ಲ.
ಅಕ್ರಮ ಮದ್ಯ ಮಾರಾಟ ನಿಯಂತ್ರಿಸಬೇಕಾಗಿರುವುದು ಅಬಕಾರಿ ಇಲಾಖೆ ಅಧಿಕಾರಿಗಳ ಕರ್ತವ್ಯ. ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಡಾಬಾಗಳಲ್ಲಿ ಮದ್ಯ ಮಾರಾಟ:

ಅಕ್ರಮ ಮದ್ಯ ಮಾರಾಟದ ದಂಧೆ ಹಳ್ಳಿಗಳಲ್ಲಿ ಮಾತ್ರವಲ್ಲದೆ ಪಟ್ಟಣ ಪ್ರದೇಶದ ಪ್ರತಿ ಡಾಬಾದಲ್ಲೂ ನಡೆಯುತ್ತಿದೆ. ಪ್ರತಿ ತಿಂಗಳು ಸ್ಪರ್ಧೆ ಎನ್ನುವಂತೆ ಹಲವು ಧಾಬಾಗಳು ಹುಟ್ಟಿಕೊಳ್ಳುತ್ತಲಿವೆ. ಕೆಲ ಡಾಬಾಗಳಲ್ಲಿ ಮದ್ಯ ಮಾರಾಟದ ಅನುಮತಿ ಇಲ್ಲವಾದರೂ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಪ್ರತಿ ದಿನ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ದಾಳಿ ಮಾಡುವ ಅಬಕಾರಿ ಇಲಾಖೆ ಅಧಿಕಾರಿಗಳು ಚುನಾವಣೆ ಮುಗಿದ ಮೇಲೆ ಒಂದು ಸ್ಥಳದಲ್ಲೂ ದಾಳಿ ಮಾಡಿದ ಉದಾಹರಣೆ ಸಿಗುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸರ್ಕಾರದ ಪರ​ವಾ​ನಗಿ ಹೊಂದಿದರೆ ಮಾತ್ರ ಮದ್ಯ ಮಾರಾಟ ಮಾಡಬೇಕು. ಆದರೆ ಇತ್ತೀಚಿನ ದಿನದಲ್ಲಿ ಗ್ರಾಮೀಣ ಪ್ರದೇಶದ ಬೀಡಿ ಅಂಗಡಿಗಳಲ್ಲಿ, ಪಟ್ಟಣದ ಹಲವು ಧಾಬಾಗಳಲ್ಲಿ ಪ್ರತಿನಿತ್ಯ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವುದು ರಾಜಾರೋಷವಾಗಿ ನಡೆಯುತ್ತಿದೆ. ಆದರೂ ಇವರಿಗೆ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ.

ಕೂಲಿನಾಲಿ ಮಾಡಿ ಬದುಕು ಸಾಗಿಸುವ ಬಡವರು, ಕೃಷಿ ಕಾರ್ಮಿಕರು ಪ್ರತಿನಿತ್ಯ ತಾವು ದುಡಿದ ಕೂಲಿ ಹಣ ಮದ್ಯ ಕುಡಿದು ಹಾಳು ಮಾಡುತ್ತಿರುವುದರಿಂದ ಆ ಕುಟುಂಬಗಳ ಗೋಳು ಹೇಳತೀರದ್ದಾ​ಗಿದೆ. ಅಲ್ಲದೆ ಮದ್ಯ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದು, ಹಲವು ಕುಟುಂಬಗಳು ಅಕ್ರಮ ಮದ್ಯದಿಂದ ಬೀದಿ ಪಾಲಾಗುವ ಸ್ಥಿತಿಗೆ ಬಂದು ನಿಂತಿವೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದೆ ಜಾಣ ಕುರುಡುತನ ಪ್ರದರ್ಶಿಸುತ್ತ ಬಡ ಕುಟುಂಬಗಳು ಬೀದಿಗೆ ಬೀಳುವುದು ನೋಡುತ್ತ ಕುಳಿತ್ತಿದ್ದಾರೆ. ಬಾರ್‌ ಮಾಲೀಕರ ಒತ್ತಡದಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದು ಇಲಾಖೆ ಅಧಿಕಾರಿಗಳು ಕೈಬಿಟ್ಟಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಮಹಿಳೆಯರು, ಸಾರ್ವಜನಿಕರ ಆಗ್ರಹವಾಗಿದೆ.

ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಇಲ್ಲವೆ ಸಾರ್ವಜನಿಕರು ತಿಳಿಸಿದರೆ ನಿರ್ದಾಕ್ಷಿಣ್ಯ​ವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ಬಂದಿಲ್ಲ. ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಡಿ ಅಬಕಾರಿ ಇನ್ಸಪೆಕ್ಟರ್‌ ಎಂ.ಎಚ್‌. ಪಡಸಲಗಿ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಇಂಡಿ ತಹಸೀಲ್ದಾರ್‌ ಚಿದಾನಂದ ಕುಲಕರ್ಣಿ ಅವರು, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಇಲ್ಲ. ನಾನು ಅಧಿಕಾರ ವಹಿಸಿಕೊಂಡು ಒಂದೂವರೆ ತಿಂಗಳಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಗ್ರಾಮೀಣ ಪ್ರದೇಶದಲ್ಲಿನ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಲು ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಇಂಡಿ ತಾಲೂಕಿನ ಹಳ್ಳಿಗಳಲ್ಲಿರುವ ಡಬ್ಬಾ ಅಂಗಡಿ ಪಾನ್‌ಶಾಪ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ. ಇದರಿಂದ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಮಹಿಳೆಯರು ಗ್ರಾಮದಲ್ಲಿ ಭಯದಿಂದ ಅಡ್ಡಾಡು​ವಂತಾ​ಗಿದೆ. ಅಕ್ರಮ ಮದ್ಯ ಅಂಗಡಿಗಳು ಕಾಂಪಿಟೇಶನ್‌ ಮೇಲೆ ತಲೆ ಎತ್ತುತ್ತಿವೆ. ಅನುಮತಿ ಇರುವ ಮದ್ಯ ಅಂಗಡಿಗಳು ಮಾತ್ರ ಚಾಲು ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಇಂಡಿ ಮಹಿಳಾ ಹೋರಾಟಗಾರ್ತಿ ಶಶಿಕಲಾ ಅವರು ಹೇಳಿದ್ದಾರೆ.