ಸರ್ಕಾರದ ಖಾಲಿ ವಸತಿಗಳಲ್ಲಿ ನಡೆಯುತ್ತಿದೆ ಇಂತಹ ಚಟುವಟಿಕೆ !

ಸರ್ಕಾರಿ ಸ್ವಾಮ್ಯದ ಖಾಲಿ ವಸತಿಗಳು ಇಂತಹ ಅನೈತಿಕ ಚಟುವಟಿಕೆಗಳಿಗೆ ತಾಣವಾಗುತ್ತಿದೆ. ಇಲ್ಲಿ ಮಹಿಳೆಯರು ಒಂಟಿಯಾಗಿ ಸಂಚರಿಸೋದು ದುಸ್ತರವಾಗಿದೆ.

Illegal Activities in APMC Building in Bhadravati

ಅನಂತಕುಮಾರ್‌

ಭದ್ರಾವತಿ (ಡಿ.04):  ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ವಸತಿ ಗೃಹಗಳು ಪಾಳುಬಿದ್ದಿದ್ದು, ಈ ವಸತಿ ಗೃಹಗಳು ಇದೀಗ ಅನೈತಿಕ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟಿವೆ.

ಸುಮಾರು 4 ವರ್ಷಗಳಿಂದ ಕಾರ್ಖಾನೆಯಲ್ಲಿ ಯಂತ್ರಗಳ ಉತ್ಪಾದನೆ ಸ್ಥಗಿತಗೊಂಡು ಸಾವಿರಾರು ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಬೀದಿಪಾಲಾಗಿದ್ದು, ನಗರಾಡಳಿತ ಪ್ರದೇಶ ಸಹ ಬರಿದಾಗಿದೆ. ನಿವೃತ್ತಿ ಹಾಗೂ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರ ಸಾವಿರಾರು ವಸತಿ ಗೃಹಗಳು ಖಾಲಿ ಬಿದ್ದಿವೆ. ಪ್ರಸ್ತುತ ವಸತಿ ಗೃಹಗಳು ಬೀದಿ ದನಗಳ, ಹಂದಿ, ನಾಯಿಗಳ, ಹಾವು-ಮುಂಗುಸಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಈ ನಡುವೆ ಪುಂಡ- ಪೋಕರಿಗಳ ಅನೈತಿಕ ತಾಣಗಳಾಗಿ ಸಹ ರೂಪುಗೊಂಡಿವೆ.

ಖಾಲಿಯಾಗಿರುವ ಬಹುತೇಕ ವಸತಿ ಗೃಹಗಳಿಗೆ ಕಿಟಕಿ, ಬಾಗಿಲುಗಳಿಲ್ಲ. ಕೆಲವು ಮನೆಗಳಿಗೆ ಕಿಟಕಿ ಬಾಗಿಲುಗಳಿದ್ದರೂ ಹೊರ ಭಾಗದಲ್ಲಿ ಕಾಂಪೌಂಡ್‌, ಬೇಲಿಗಳಿಲ್ಲ. ಈ ಭಾಗದಲ್ಲಿ ಜನ ಸಂಚಾರ ವಿರಳವಾಗಿರುವ ಕಾರಣ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದೆ. ಈ ಕುರಿತು ನಗರಾಡಳಿತ ಪ್ರದೇಶದ ಸುತ್ತಮುತ್ತಲಿನಲ್ಲಿ ವಾಸಿಸುತ್ತಿರುವ ಕಾಯಂ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಖಾಲಿ ಬಿದ್ದಿರುವ ಮನೆಗಳಲ್ಲಿ ರಾತ್ರಿ ವೇಳೆ ಸ್ಥಳೀಯರಿಗೆ ಪರಿಚಯವಿಲ್ಲದವರು ಬಂದು ಮಲಗುತ್ತಿದ್ದಾರೆ. ಈ ಭಾಗದಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದು ಅಸಾಧ್ಯವಾಗಿದೆ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆ 3ನೇ ವಾರ್ಡ್‌ನ ಖಾಲಿ ಮನೆಯೊಂದರಲ್ಲಿ ಬಂದು ಮಲಗುತ್ತಿದ್ದ ಅಪರಿಚಿತ ವ್ಯಕ್ತಿಗಳಲ್ಲಿ ಆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ಇದುವರೆಗೂ ಯಾವುದೇ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಆತಂಕ ಪಡುವಂತಾಗಿದೆ ಎಂದು ನಿವಾ​ಸಿ​ಗ​ಳು ತಿಳಿಸಿದ್ದಾರೆ.

ಈ ಹಿಂದೆ ಕಾರ್ಖಾನೆಯ ನಗರಾಡಳಿತ ವ್ಯಾಪ್ತಿಯಲ್ಲಿ ಕಾರ್ಖಾನೆಯ ಭದ್ರತಾ ಸಿಬ್ಬಂದಿಗಳು ಹಾಗೂ ಕಾಗದನಗರ ಪೊಲೀಸರು ಹಗಲು-ರಾತ್ರಿ ಹೆಚ್ಚಾಗಿ ಗಸ್ತು ತಿರುಗುತ್ತಿದ್ದರು. ಇದರಿಂದಾಗಿ ಅಪರಿಚಿತರು, ಪುಂಡ-ಪೋಕರಿಗಳ ಸುಳಿವಿರಲಿಲ್ಲ. ಆದರೆ ಇದೀಗ ಕಾರ್ಖಾನೆಯ ಭದ್ರತಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಇರುವ ಸಿಬ್ಬಂದಿಗಳು ಎಲ್ಲಾ ಕಡೆ ಗಸ್ತು ತಿರುಗುವುದು ಸಹ ಅಸಾಧ್ಯವಾಗಿದೆ. ಉಳಿದಂತೆ ಕಾಗದ ನಗರ ಪೊಲೀಸ್‌ ಠಾಣೆಯಲ್ಲೂ ಹೆಚ್ಚಿನ ಸಿಬ್ಬಂದಿಗಳಿಲ್ಲ. ಇದರಿಂದಾಗಿ ಸಮಸ್ಯೆ ಎದುರಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ಖಾನೆ ಖಾಲಿ ಮನೆಗಳ​ನ್ನು ನೆಲಸಮಗೊಳ್ಳಬೇಕು. ಇಲ್ಲವಾದಲ್ಲಿ ಮನೆಗಳನ್ನು ಖಾಲಿ ಬಿಡದೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹಾಗೂ ಸ್ವಯಂ ನಿವೃತ್ತಿ ಹೊಂದಿರುವ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಲೀಸ್‌ ಆಧಾರದ ಮೇಲೆ ಅಥವಾ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು. ಈ ಬಗ್ಗೆ ಆಡಳಿತ ಗಮನ ಹರಿಸಬೇಕಾಗಿದೆ.

ಎಂಪಿಎಂ ನಗರಾಡಳಿತ ಇಲಾಖೆಯವರು ಖಾಲಿ ಬಿದ್ದಿರುವ ಎಲ್ಲಾ ಮನೆಗಳಿಗೂ ಸರಿಯಾಗಿ ಕಿಟಕಿ, ಬಾಗಿಲುಗಳನ್ನು ಅಳವಡಿಸಿ ಭದ್ರ ಪಡಿಸಿಕೊಳ್ಳಬೇಕು. ಭದ್ರತಾ ಸಿಬ್ಬಂದಿಗಳಿಗೆ ರಾತ್ರಿ ವೇಳೆ ಎಲ್ಲಾ ಭಾಗದಲ್ಲೂ ಗಸ್ತು ತಿರುಗುವ ಮೂಲಕ ಕಟ್ಟೆಚ್ಚರ ವಹಿಸುವಂತೆ ಸೂಚಿಸಬೇಕು. ಇದರಿಂದ ಸಮಸ್ಯೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು.

- ಆರ್‌. ಅರುಣ್‌, ಸ್ಥಳೀಯ ನಿವಾಸಿ, ಕಾಗದನಗರ

Latest Videos
Follow Us:
Download App:
  • android
  • ios