ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಗೂ ಮುನ್ನ ರೈತ ಬಣಗಳ ನಡುವೆ ತೀವ್ರ ಹೊಡೆದಾಟ ನಡೆದಿದೆ. ಇದರಿಂದ ಬೇಸರಗೊಂಡ ಅವರು ರೈತರು ಒಗ್ಗಟ್ಟಿನಿಂದ ಇರಬೇಕು ಎಂದು ಕಿವಿಮಾತು ಹೇಳಿದರು. ಸಭೆಯಲ್ಲಿ ರೈತ ಮುಖಂಡರು ಪ್ರತಿ ಟನ್ ಕಬ್ಬಿಗೆ 4500 ರೂ. ನಿಗದಿ ಸೇರಿದಂತೆ 11 ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ಬೆಳಗಾವಿ: ಇವತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸುವರ್ಣ ಸೌಧದಲ್ಲಿ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸಿದರು. ಸಭೆಗೂ ಮೊದಲು ರೈತ ಸಂಘಗಳ ಬಣಗಳ ಮಧ್ಯೆ ಅಹಿತಕರ ಘಟನೆ ನಡೆಯಿತು. ಅದಕ್ಕೆ ಮುಖ್ಯಮಂತ್ರಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೊಡೆಯೋದಾದ್ರೆ ಬಂದು ನಂಗೆ ಹೊಡೆದು ಹೋಗಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?

ಸಿಎಂ ನೇತೃತ್ವದಲ್ಲಿ ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆಯ ಸಭಾಂಗಣವೇ ರಣಾಂಗಣ ಆಗಿತ್ತು. ಸಭಾಂಗಣದಲ್ಲಿ ಕುಡಿಯಲು ನೀರಿಲ್ಲ, ಚಹಾ ಇಲ್ಲ ಎಂದು ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಕೋಡಿಹಳ್ಳಿ ಚಂದ್ರಶೇಖರ ಹಾಗೂ ಚೂನಪ್ಪ ಪೂಜಾರಿ ಬಣಗಳ ಮಧ್ಯೆ ಹೊಡೆದಾಟ ನಡೆಯಿತು. ನೀರು ಕುಡಿಯಲು ಮೇಜಿನ ಮೇಲೆ ಇಟ್ಟಿದ್ದ ಗಾಜಿನ ಗ್ಲಾಸ್ ಎಸೆದು ಹೊಡೆದಾಡಿಕೊಂಡಿರುವ ಬಗ್ಗೆ ವರದಿ ಆಗಿದೆ. ನಂತರ ಚೂನಪ್ಪ ಪೂಜಾರಿ ಎಲ್ಲರನ್ನೂ ಸಮಾಧಾನ ಮಾಡಿದ್ದರು. ಸಮಾಧಾನ ಮಾಡುತ್ತ ಮಾತು ಆರಂಭಿಸಿದ್ದ ಚೂನಪ್ಪ ಪೂಜಾರಿ, ಈ ವರ್ಷ ಪ್ರತಿ ಟನ್ ಕಬ್ಬಿಗೆ ನಾಲ್ಕೂವರೆ ಸಾವಿರ ಪಡೆದೇ ತಿರೋಣ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು, ಹೊರಗೆ ಐದೂವರೆ ಸಾವಿರ ಅಂತಿರಿ, ಒಳಗೆ ನಾಲ್ಕೂವರೆ ಸಾವಿರ ಅಂತಿರಾ? ನೀವು ಸೂಟ್‌ಗೇಸ್ ಗಿರಾಕಿ ಎಂದು ಜೋರಾಗಿ ಕೂಗಿದ್ದರು. ಆಗ ಆ ಗಲಾಟೆ ಇನ್ನಷ್ಟು ಜೋರಾಗಿತ್ತು.

ತಮ್ಮ ಆಗಮನಕ್ಕೂ ಮುನ್ನ ರೈತರ ಹೊಡೆದಾಟದ ಬಗ್ಗೆ ಮುಖ್ಯಮಂತ್ರಿಗಳ ಕಿವಿಗೆ ಬಿದ್ದಿದೆ. ಅದೇ ವಿಚಾರದ ಬಗ್ಗೆ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು.. ಹೊಡೆಯೋ ಹಾಗಾದ್ರೆ ನನಗೆ ಹೊಡೆದು ಹೋಗಿ. ರೈತರ ಸಭೆಯಲ್ಲಿ ಯಾಕೆ ನೀವು ಗಲಾಟೆ ಮಾಡ್ಕೊಂಡ್ರಿ?

ನಾವೇ ಏನೋ ರಾಜಕಾರಣಿಗಳು, ಚುನಾವಣೆ ನಿಲ್ಲುತ್ತೀವಿ, ಯುದ್ಧ ಮಾಡ್ತೀವಿ. ನೀವು ಚುನಾವಣೆಗೆ ನಿಂತರೆ ಮಾತು ಬೇರೇ. ಆದರೆ ನೀವ್ಯಾರೂ ಚುನಾವಣೆ ಗೆ ನಿಲ್ಲುವುದಿಲ್ಲ. ನೀವೆಲ್ಲರೂ ಒಂದಾಗಿ ಇರಬೇಕು. ನಮ್ಮ ರೈತರು ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ಇರಬೇಕು ಎಂದು ಸಲಹೆ ನೀಡಿದರು.

ಇನ್ನು, ಸಭೆ ಆರಂಭದಲ್ಲೇ ಸರ್ಕಾರದ ಮುಂದೆ 11 ಬೇಡಿಕೆಗಳನ್ನ ರೈತ ನಾಯಕಿ ಸುನಂದಾ ಮಂಡಿಸಿದರು. ಪ್ರತಿ ಟನ್ ಕಬ್ಬಿಗೆ 1 ಸಾವಿರ ಪ್ರೋತ್ಸಾಹ ಧನ ನೀಡಬೇಕು. ಟನ್ ಕಬ್ಬಿಗೆ 4500 ರೂಪಾಯಿ ಕೊಡಬೇಕು. ಎಫ್‌ಆರ್‍‌ಪಿಯಲ್ಲಿ ಉಂಟಾದ ನಷ್ಟ ‌ಪ್ರಮಾಣ ರಾಜ್ಯ ಸರ್ಕಾರ ಭರಿಸಬೇಕು. ಪ್ರತಿ ಕಾರ್ಖಾನೆ ಮುಂದೆ ಸರ್ಕಾರವೇ ತೂಕದ ಯಂತ್ರ ಅಳವಡಿಸಬೇಕು. ಕಬ್ಬು ಪೂರೈಕೆಯಾದ 14 ದಿನದಲ್ಲಿ ಹಣ ಪಾವತಿ ಮಾಡಬೇಕು.

ಆಲೆಮನೆ ಆರಂಭಿಸಲು ಸರ್ಕಾರ ಅನುದಾನ ಕೊಡಬೇಕು. ಹನಿ ನೀರಾವರಿಯಲ್ಲಿ ಕಬ್ಬು ಬೆಳೆಯಲು ಅವಕಾಶ ಕಲ್ಪಿಸಬೇಕು. ಸ್ವಾಮಿನಾಥನ್ ವರದಿ ಆಧಾರದ ಮೇಲೆ ಸಕ್ಕರೆ ಅಗತ್ಯ ವಸ್ತು ಪಟ್ಟಿಯಿಂದ ತೆಗೆಯಬೇಕು. ಸಕ್ಕರೆಯನ್ನು ವಾಣಿಜ್ಯ, ‌ಗೃಹಪಯೋಗಿ ಎಂದು ವಿಂಗಡಿಸಬೇಕು. ಕೃಷಿ ‌ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಬೇಕು. ಉಪ ಉತ್ಪಾದನೆಯ ಲಾಭ ಕೊಡಬೇಕು. ಕಬ್ಬಿನಿಂದ ಎಥೆನಾಲ್ ಉತ್ಪಾದನೆ ನಿಲ್ಲುಸುವ ಕೇಂದ್ರ ಸರ್ಕಾರಕ್ಕೆ ಹುನ್ನಾರ ಮಾಡ್ತಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.

ಅದಾದ ಬಳಿಕ ರೈತ ಮುಖಂಡ ಚೂನಪ್ಪ ಪೂಜಾರಿ ಮಾತು ಆರಂಭಿಸಿದರು. ಎಂಎಸ್ಪಿ ಏರಿಕೆಗಾಗಿ ನಾವು ಹುಬ್ಬಳ್ಳಿಯಲ್ಲಿ ಹೋರಾಟ ಮಾಡಿದ್ವಿ. ಬಳಿಕ ದೆಹಲಿಯಲ್ಲಿ ಸಭೆ ಮಾಡಲಾಯಿತು. ನಂತರ ಇದು ಬರೀ ರಾಜ್ಯದ ಸಮಸ್ಯೆ ಅಲ್ಲಾ ಇಡೀ ದೇಶದ ಸಮಸ್ಯೆ ಅಂತಾ ಹೇಳಿದ್ರು. ಹೀಗಾಗಿ ಸ್ವಲ್ಪ ಸಮಯವನ್ನ ಅವರು ತೆಗೆದುಕೊಂಡರು.ಪಾದಯಾತ್ರೆ ಮಾಡಿದ್ವಿ ಆಗ ರೈತರ ನೋವು ಕೇಳಲು ನೀವು ಬಂದಿದ್ದು ಸ್ವಾಗತ. ನಮ್ಮ ಭಾಗದ ರಿಕವರಿಯಲ್ಲಿ ಬಹಳಷ್ಟು ಮೋಸ ಆಗ್ತಿದೆ. ರಿಕವರಿ ಮೋಸ ಆಗದ ರೀತಿಯಲ್ಲಿ ಸ್ಯಾಂಪಲ್ ಮಷಿನ್ ಇಡುವ ಕೆಲಸ ಮುಖ್ಯಮಂತ್ರಿಗಳು ಮಾಡಿ. ಅಬಕಾರಿ ಖಾತೆಯಿಂದ ನಲವತ್ತು ಐವತ್ತು ಸಾವಿರ ಕೋಟಿ ಹಣ ಬರುತ್ತೆ. ಒಂದು ಟನ್ ಕಬ್ಬು ಬೆಳೆಯಲು ಐದಾರು ಸಾವಿರ ಖರ್ಚು ಬರುತ್ತಿದೆ. ಹೀಗಾಗಿ ಒಂದು ಟನ್ ಗೆ ಒಂದು ಸಾವಿರ ಕೋಟಿ ಕೊಡಬೇಕು. ನಾವು ಕಷ್ಟಪಡುವ ಶ್ರಮಕ್ಕೆ ನೀವು ಒಂದು ಸಾವಿರ ನೀಡಿ. ಆರನೇ ಗ್ಯಾರಂಟಿ ಎಂದು ಘೋಷಣೆ ಮಾಡಿ ಎಂದು ಮನವಿ ಮಾಡಿದರು.