ರೇಷ್ಮೆ ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು
ಇಲಾಖೆಯವರ ಮಾರ್ಗದರ್ಶನ ಪಡೆದು ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಬೆಳೆಯನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಮೀನಾಳ್ ಹೇಳಿದರು.
ಕೆ.ಆರ್. ನಗರ : ಇಲಾಖೆಯವರ ಮಾರ್ಗದರ್ಶನ ಪಡೆದು ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಬೆಳೆಯನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಮೀನಾಳ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ನಡೆದ ರೇಷ್ಮೆ ದ್ವಿತಳಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಈ ಬೆಳೆಯು ಉತ್ತಮ ಆದಾಯ ತರುವುದಾಗಿದ್ದು, ಇತರ ಬೆಳೆಗಳ ಜತೆಗೆ ಬೆಳೆದು ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು ಎಂದರು.
ರೇಷ್ಮೆ ಹುಳುಗಳಿಗೆ ತಗಲುವ ರೋಗ ಮತ್ತು ಅದರ ಹತೋಟಿಗೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ರೈತರಿಗೆ ಸವಿಸ್ತಾರವಾದ ಮಾಹಿತಿ ನೀಡಿದ ಅವರು, ಬೆಳೆಗಾರರು ನಿಯಮಿತವಾಗಿ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ತಜ್ಞರ ಮಾರ್ಗದರ್ಶನ ಪಡೆಯಬೇಕೆಂದು ಸಲಹೆ ನೀಡಿದರು.
ಕುದೇರು ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ಹಿಪ್ಪುನೇರಳೆ ತೋಟ ನಿರ್ವಹಣೆ ಮತ್ತು ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಅನುಸರಿಸಬಹುದಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಕೆ.ಆರ್. ನಗರ ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಂ. ಶಿವಮೂರ್ತಿ ಮಾತನಾಡಿ, ಸರ್ಕಾರದ ವತಿಯಿಂದ ಬೆಳೆಗಾರರಿಗೆ ದೊರೆಯುವ ಸವಲತ್ತು ಹಾಗೂ ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಮಾಯಗೌಡನಹಳ್ಳಿ ಗ್ರಾಪಂ ಉಪಾಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ರಾಣಿಗಣೇಶ್, ಸ್ವಾಮೀಗೌಡ, ಗ್ರಾಮದ ಮುಖಂಡರಾದ ದಾಸೇಗೌಡ, ನಿಂಗೇಗೌಡ, ರೇಷ್ಮೆ ವಿಸ್ತರಣಾಧಿಕಾರಿ ಕೆ.ಎಂ. ರವೀಶ್‌ಕುಮಾರ್, ರೇಷ್ಮೆ ನೀರೀಕ್ಷಕಿ ಎಸ್. ಆತ್ಮರಾಗಿಣಿ ಮತ್ತು ರೈತರು ಇದ್ದರು.
ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಕಾರ್ಯ
ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ರೇಷ್ಮೆ ಉತ್ಪಾದನೆಯಾಗದ ಕಾರಣ ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಿ ನೇಕಾರಿಕೆ ಮಾರುಕಟ್ಟೆವಲಯ ಬಲಿಷ್ಠಗೊಳಿಸುವುದರ ಜತೆಗೆ ರೇಷ್ಮೆ ರಫ್ತು ವಲಯವನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸಿ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್ ಹೇಳಿದರು. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ ರೇಷ್ಮೆ ಗೂಡು ಪೂರೈಕೆ, ಬೆಳೆಗಾರರಿಗೆ ಹಣ ಪಾವತಿ ವಿಧಾನ ಹಾಗೂ ಗೂಡಿನ ಗುಣಮಟ್ಟಪರಿಶೀಲನೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶೀಯ ರೇಷ್ಮೆ ನೇಕಾರಿಕೆ ಮಾರುಕಟ್ಟೆವಲಯವನ್ನು ಮತ್ತಷ್ಟುಬಲಿಷ್ಠಗೊಳಿಸಿ, ರೇಷ್ಮೆ ರಫ್ತು ವಲಯ ಹೆಚ್ಚು ಸ್ಪರ್ಧಾತ್ಮಕಗೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಇಡೀ ಪ್ರಪಂಚದಲ್ಲಿ ರೇಷ್ಮೆಗೆ ತುಂಬಾ ಬೇಡಿಕೆ ಇದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಒಟ್ಟಾರೆ ಕೃಷಿ ಉತ್ಪಾದನೆಯೊಂದಿಗೆ ತುಲನೆ ಮಾಡಿದರೆ ಶೇ.1ರಷ್ಟು ಮಾತ್ರ ಇದೆ. ಪ್ರಪಂಚದಲ್ಲಿಯೇ ಭಾರತ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಇರಬೇಕೆಂಬುದು ಬಯಕೆ. ಆದ್ದರಿಂದ ಆತ್ಮನಿರ್ಭರ್ ಭಾರತ್ ಅಭಿಯಾನದಡಿ ಜಮ್ಮುಕಾಶ್ಮೀರ, ಉತ್ತರಾಖಂಡದಂತಹ ರಾಜ್ಯಗಳಲ್ಲಿಯೂ ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು. ಕರ್ನಾಟಕ ರೇಷ್ಮೆಯಲ್ಲಿ 9 ಬೆಳೆ ತೆಗೆಯುತ್ತಿದೆ. ಉತ್ಪಾದನೆ ಚೆನ್ನಾಗಿದೆ.
ದರೆ, ಜಮ್ಮುಕಾಶ್ಮೀರದಲ್ಲಿ ಚಳಿಯ ಕಾರಣ ಕೇವಲ 1 ಬೆಳೆ ಮಾತ್ರ ತೆಗೆಯಲಾಗುತ್ತಿದೆ. ಅಲ್ಲಿಯೂ ಒಂದಕ್ಕಿಂತ ಹೆಚ್ಚಿನ ಬೆಳೆ ತೆಗೆಯಲು ಬೇಕಾದ ವಿಧಾನ ಅನುಸರಿಸುವ ಪ್ರಯತ್ನಗಳಿಗೆ ಸಂಶೋಧನೆಗಳು ನಡೆಯುತ್ತಿವೆ. ಮನರೇಗಾ ಬಳಸಿಕೊಂಡು ರೇಷ್ಮೆ ಬೆಳೆಯಲ್ಲಿ ಪ್ರಗತಿ ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆ. ಅಸ್ಸಾಂನಲ್ಲಿ ಆದಿವಾಸಿ ರೈತರಿಂದ ರೇಷ್ಮೆ ಉತ್ಪಾದನೆ ಮಾಡಿಸಿ ಸರ್ಕಾರವೇ ನೇರವಾಗಿ ಖರೀದಿ ಮಾಡುತ್ತಿದೆ. ಜಪಾನ್‌ನಂತಹ ದೇಶಗಳಲ್ಲಿ ಸಿಲ್ಕ್ ಮೆಟಿರಿಯಲ್ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಸೀರೆ ಮಾತ್ರವಲ್ಲದೆ ಫ್ಯಾಬ್ರಿಕ್ ಮೇಲೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.