ಸಿದ್ದರಾಮಯ್ಯ ಗೆದ್ದರೆ ದಾಖಲೆಯ 9ನೇ ಬಾರಿ ವಿಧಾನಸಭೆಗೆ

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಂದು ಉಪ ಚುನಾವಣೆ ಸೇರಿದಂತೆ ಈವರೆಗೆ ಎಂಟು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿ ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದು ಗೆದ್ದರೆ ದಾಖಲೆಯ ಒಂಭತ್ತನೇ ಬಾರಿ ಆಯ್ಕೆಯಾದಂತೆ ಆಗುತ್ತದೆ.

If Siddaramaiah wins, he will enter the assembly for a record 9th time snr

 ಅಂಶಿ ಪ್ರಸನ್ನಕುಮಾರ್‌

  ಮೈಸೂರು :  ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಂದು ಉಪ ಚುನಾವಣೆ ಸೇರಿದಂತೆ ಈವರೆಗೆ ಎಂಟು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿ ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದು ಗೆದ್ದರೆ ದಾಖಲೆಯ ಒಂಭತ್ತನೇ ಬಾರಿ ಆಯ್ಕೆಯಾದಂತೆ ಆಗುತ್ತದೆ.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 1983 ರಲ್ಲಿ ಲೋಕದಳ ಬೆಂಬಲಿತ ಪಕ್ಷೇತರ, 1985 ರಲ್ಲಿ ಜನತಾಪಕ್ಷ, 1994 ರಲ್ಲಿ ಜನತಾದಳ, 2004 ರಲ್ಲಿ ಜೆಡಿಎಸ್‌, 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾದರು. 1983 ರಲ್ಲಿ ಗೆದ್ದಾಗ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಸಿದ್ದರಾಮಯ್ಯ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ, ನಂತರ ಪಶುಸಂಗೋಪನಾ ಸಚಿವ ಸ್ಥಾನ ನೀಡಲಾಯಿತು. 1985 ರಲ್ಲಿ ಗೆದ್ದಾಗ ಮತ್ತೆ ರೇಷ್ಮೆ ಖಾತೆ ಮಂತ್ರಿಯಾದರು. ಟೆಲಿಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಹೆಗಡೆ ಅವರು ರಾಜೀನಾಮೆ ನೀಡಿ, ಎಸ್‌.ಆರ್‌. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಸಾರಿಗೆ ಸಚಿವರಾದರು.

1989 ರ ವೇಳೆಗೆ ಜನತಾಪಕ್ಷವು ಜನತಾದಳ- ಸಮಾಜವಾದಿ ಜನತಾಪಕ್ಷವಾಗಿ ಇಬ್ಭಾಗವಾಗಿದ್ದರಿಂದ ಸಿದ್ದರಾಮಯ್ಯ ಅವರು ಜನತಾದಳದೊಂದಿಗೆ ಗುರುತಿಸಿಕೊಂಡರು. ಆ ವರ್ಷ ನಡೆದ ಚುನಾವಣೆಯಲ್ಲಿ ಮತ ವಿಭಜನೆಯಾಗಿ ಕಾಂಗ್ರೆಸ್‌ನ ಎಂ. ರಾಜಶೇಖರಮೂರ್ತಿ ಅವರ ಎದುರು ಸೋತರು. 1994ರ ಚುನಾವಣೆ ವೇಳೆಗೆ ಜನತಾದಳ ಒಗ್ಗೂಡ ಹೋರಾಟ ನಡೆಸಿದ್ದರಿಂದ ಸಿದ್ದರಾಮಯ್ಯ ಮೂರನೇ ಬಾರಿ ಗೆದ್ದು, ಎಚ್‌.ಡಿ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. 1996 ರಲ್ಲಿ ಎಚ್‌.ಡಿ. ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿ ಪಟ್ಟಕ್ಕೇರಿದಾಗ ರಾಜ್ಯದಲ್ಲಿ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾದರು.

1999ರ ವೇಳೆಗೆ ಮತ್ತೆ ಜನತಾದಳವು ಸಂಯುಕ್ತ ಹಾಗೂ ಜಾತ್ಯತೀತ ಎಂದು ವಿಭಜನೆಯಾಗಿತ್ತು. ಆ ವೇಳೆಗೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಲಾಗಿತ್ತು. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಿತು. ಲೋಕಸಭೆಗೆ ವಿಜಯಶಂಕರ್‌, ವಿಧಾನಸಭೆಗೆ ಸಿದ್ದರಾಮಯ್ಯ ಎಂದು ಮತ ಚಲಾಯಿಸಲು ಹೋಗಿ, ಗೊಂದಲವಾಯಿತು. ಜೆಡಿಎಸ್‌ನ ಚಿಹ್ನೆ ‘ಟ್ರ್ಯಾಕ್ಟರ್‌’ ಆಗಿತ್ತು. ಅದು ಮತಯಂತ್ರದಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. (ಹೀಗಾಗಿಯೇ ನಂತರ ತೆನೆಹೊತ್ತ ಮಹಿಳೆಯ ಗುರುತು ಪಡೆಯಲಾಯಿತು). ಇದರಿಂದ ಕಾಂಗ್ರೆಸ್‌ನ ಎ.ಎಸ್‌. ಗುರುಸ್ವಾಮಿ ಅವರ ಎದುರು ಸಿದ್ದರಾಮಯ್ಯ ಸೋತರು. ನಂತರ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿದರು.

2004 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಎರಡನೇ ಬಾರಿ ಉಪ ಮುಖ್ಯಮಂತ್ರಿಯಾದರು. ಹುಬ್ಬಳ್ಳಿಯಲ್ಲಿ ‘ಅಹಿಂದ’ ಸಮಾವೇಶ ನಡೆಸುವ ಸಂಬಂಧ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೊಂದಿಗೆ ವಿರಸ ಉಂಟಾಗಿ, ಪಕ್ಷದಿಂದ ಹೊರ ನಡೆದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿದರು. 2006 ರ ಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ 257 ಮತಗಳ ಕೂದಲೆಳೆಯ ಅಂತರದಿಂದ ಜಯ ಗಳಿಸಿದರು.

2008ರ ವೇಳೆಗೆ ಚಾಮುಂಡೇಶ್ವರಿ ಕ್ಷೇತ್ರ ವಿಭಜಿಸಿ, ವರುಣ ಕ್ಷೇತ್ರ ರಚಿಸಲಾಯಿತು. ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಅಲ್ಲಿಗೆ ಸ್ಥಳಾಂತರವಾದ ಸಿದ್ದರಾಮಯ್ಯ ಗೆದ್ದರು. ಒಂದು ವರ್ಷದ ಬಳಿಕ ವಿಧಾನಸಭೆಯ ಪ್ರತಿಪಕ್ಷ ನಾಯಕರಾದರು. 2013ರ ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿ ಆದರು. ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಆಸೆ ಇರಲಿಲ್ಲ. ಆದರೆ ಹೈಕಮಾಂಡ್‌ ಸೂಚನೆ ಮೇರೆಗೆ ಸ್ಪರ್ಧಿಸಿದ್ದರು. ವರುಣ ಕ್ಷೇತ್ರವನ್ನು ಪುತ್ರ ಡಾ.ಎಸ್‌. ಯತೀಂದ್ರಗೆ ಬಿಟ್ಟುಕೊಟ್ಟು, ತಾವು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದರು. ಯತೀಂದ್ರ ಗೆದ್ದರೆ, ಸಿದ್ದರಾಮಯ್ಯ ಜೆಡಿಎಸ್‌ನ ಜಿ.ಟಿ. ದೇವೇಗೌಡರ ಎದುರು ಸೋತರು.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತರೂ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದರು. ಆ ಮೂಲಕ ಎಂಟನೇ ಬಾರಿ ವಿಧಾನಸಭೆ ಪ್ರವೇಶಿಸಿದರು.

ಎರಡು ಬಾರಿ ಲೋಕಸಭೆಗೆ ಸ್ಪರ್ಧೆ

ಸಿದ್ದರಾಮಯ್ಯ ಅವರು 1980 ರಲ್ಲಿ ಮೈಸೂರಿನಿಂದ ಜನತಾಪಕ್ಷ (ಎಸ್‌), 1991 ರಲ್ಲಿ ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 1978 ರಲ್ಲಿ ಮೈಸೂರು ಅಭಿವದ್ಧಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದರು.

13 ಬಾರಿ ಬಜೆಟ್‌ ಮಂಡನೆ

ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಒಟ್ಟು 13 ಬಾರಿ ಬಜೆಟ್‌ ಮ ಮಂಡಿಸಿದ ಹೆಗ್ಗಳಿಕೆ ಅವರದು.

ನಾಗರತ್ನಮ್ಮ ಏಳು ಬಾರಿ

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಈವರೆಗೆ ಕೆ.ಎಸ್‌. ನಾಗರತ್ನಮ್ಮ ಹಾಗೂ ಸಿದ್ದರಾಮಯ್ಯ ಅವರು ತಲಾ ಏಳು ಬಾರಿ ಗೆದ್ದಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಿಂದ ನಾಗರತ್ನಮ್ಮ ಅವರು 1957, 1962, 1967, 1972, 1983, 1985 ಹಾಗೂ 1989- ಹೀಗೆ ಒಟ್ಟು ಏಳು ಬಾರಿ ಜಯ ದಾಖಲಿಸಿದ್ದಾರೆ. ಮಹಿಳಾ ಮೀಸಲಾತಿ ಇಲ್ಲದಿದ್ದರೂ ಸಾಮಾನ್ಯ ಕ್ಷೇತ್ರದಿಂದ ಮಹಿಳೆಯೊಬ್ಬರು ಏಳು ಬಾರಿ ಗೆದ್ದಿರುವುದು ದಾಖಲೆಯೇ. ನಾಗರತ್ನಮ್ಮ ಅವರು 1972 ರಿಂದ 1978 ರವರೆಗೆ ವಿಧಾನಸಭೆಯ ಸ್ಪೀಕರ್‌ ಆಗಿದ್ದರು. 1978ರ ಚುನಾವಣೆಯಲ್ಲಿ ಅವರು ಎಚ್‌.ಕೆ. ಶಿವರುದ್ರಪ್ಪ ಅವರ ಎದುರು ಪರಾಭವಗೊಂಡರು. ಶಿವರುದ್ರಪ್ಪ ಅವರು 1952 ರಲ್ಲಿಯೂ ಇದೇ ಕ್ಷೇತ್ರದಿಂದ ಚುನಾಯಿತರಾಗಿದ್ದರು.

ನಾಗರತ್ನಮ್ಮ ಅವರು 1985 ರಲ್ಲಿ ಗೆದ್ದಾಗ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. ಆಗ ಪ್ರಪ್ರಥಮ ಮಹಿಳಾ ಪ್ರತಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದರು. 1989 ರಲ್ಲಿ ಗೆದ್ದಾಗ ಎಸ್‌. ಬಂಗಾರಪ್ಪ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಆ ಅವಧಿಯ ಶಾಸಕತ್ವ ಮುಗಿಯುವ ಮುನ್ನವೇ ಅನಾರೋಗ್ಯದಿಂದ ನಿಧನರಾದರು.

----------

ಅರಸು,ರಾಚಯ್ಯ, ಮೂರ್ತಿ, ಸೇಠ್‌, ಪುಟ್ಟಸ್ವಾಮಿ ತಲಾ ಆರು ಬಾರಿ

18 ಎಂವೈಎಸ್‌32- ಡಿ. ದೇವರಾಜ ಅರಸು, ಬಿ. ರಾಚಯ್ಯ, ಎಂ. ರಾಜಶೇಖರಮೂರ್ತಿ, ಅಜೀಜ್‌ಸೇಠ್‌, ಕೆ. ಪುಟ್ಟಸ್ವಾಮಿ

ಡಿ. ದೇವರಾಜ ಅರಸು ಅವರು 1952, 1957, 1962, 1967, 1972 ಹಾಗೂ 1978- ಹೀಗೆ ಆರು ಬಾರಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1962 ರಲ್ಲಿ ಅವರದ್ದು ಅವಿರೋಧ ಆಯ್ಕೆ. ಉಭಯ ಜಿಲ್ಲೆಗಳಲ್ಲಿ ಅವರೋಧ ಆಯ್ಕೆಯ ಗೌರವ ಸಿಕ್ಕಿರುವುದು ಅರಸರಿಗೆ ಮಾತ್ರ. 1972ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಹುಣಸೂರಿನಿಂದ ಡಿ. ಕರಿಯಪ್ಪಗೌಡ ಆಯ್ಕೆಯಾಗಿದ್ದರು. ಅರಸರು ಮುಖ್ಯಮಂತ್ರಿಯಾದ ನಂತರ ಕರಿಯಪ್ಪಗೌಡ ರಾಜೀನಾಮೆ ನೀಡಿ, ಸ್ಥಾನ ತೆರವು ಮಾಡಿಕೊಟ್ಟರು. ಆಗ ನಡೆದ ಉಪ ಚುನಾವಣೆಯಲ್ಲಿ ಅರಸರು ಆಯ್ಕೆಯಾದರು. 1978 ರಲ್ಲಿ ಮತ್ತೆ ಆಯ್ಕೆಯಾಗಿ ಎರಡನೇ ಬಾರಿ ಮುಖ್ಯಮತ್ರಿಯಾದರು. ಮೊದಲ ಬಾರಿ ಸಿಎಂ ಆದಾಗ ಪೂರ್ಣಾವಧಿ ಅಧಿಕಾರದಲ್ಲಿದ್ದರು. ಎರಡನೇ ಅವಧಿಗೆ ಸಿಎಂ ಆದಾಗ ಸ್ವಪಕ್ಷೀಯರೇ ಕೈಕೊಟ್ಟಿದ್ದರಿಂದ ಎರಡೇ ವರ್ಷಗಳಲ್ಲಿ ಅಧಿಕಾರ ಕಳೆದುಕೊಂಡರು. ಪ್ರತಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದರು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರೊಂದಿಗಿನ ವಿರಸದಿಂದಾಗಿ ಬ್ರಹ್ಮಾನಂದ ರೆಡ್ಡಿ ಮತ್ತಿತರೊಂದಿಗೆ ಸೇರಿ, ಕಾಂಗ್ರೆಸ್‌-ಯು ಆರಂಭಿಸಿದ್ದರು. ನಂತರ ಕ್ರಾಂತಿರಂಗ ಸ್ಥಾಪಿಸಿದ್ದರು.

ಬಿ. ರಾಚಯ್ಯ ಅವರು 1952 ರಲ್ಲಿ ಯಳಂದೂರು ದ್ವಿಸದಸ್ಯ ಕ್ಷೇತ್ರ, 1957 ರಲ್ಲಿ ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ, 1962, 1967, 1983, 1985 ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಗೃಹ, ಅರಣ್ಯ ಸೇರಿದಂತೆ ಹಲವಾರು ಪ್ರಮಖ ಖಾತೆಗಳನ್ನು ನಿರ್ವಹಿಸಿದ್ದರು. ಪ್ರದೇಶ ಜನತಾದಳದ ಅಧ್ಯಕ್ಷರೂ ಆಗಿದ್ದರು. 1977 ರಲ್ಲಿ ಚಾಮರಾಜನಗರದಿಂದ ಲೋಕಸಭೆಗೆ ಆಯ್ಕೆಯಾಗಿ, ಮೊರಾರ್ಜಿ ದೇಸಾಯಿ ಸರ್ಕಾರದ ಪತನಾನಂತರ ಅಸ್ತಿತ್ವಕ್ಕೆ ಬಂದ ಚರಣ್‌ಸಿಂಗ್‌ ಸಂಪುಟದಲ್ಲಿ ಮಂತ್ರಿಯಾಗಿದ್ದರು.

1989 ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್‌ ಪ್ರಧಾನಿಯಾಗಿದ್ದಾಗ ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ನೇಮಕವಾದರು. ನಂತರ ಕೇರಳಕ್ಕೆ ವರ್ಗವಾಗಿ ನಿವೃತ್ತರಾದರು.

ಎಂ. ರಾಜಶೇಖರಮೂರ್ತಿ ಅವರು 1952 ರಲ್ಲಿ ಯಳಂದೂರು ದ್ವಿಸದಸ್ಯ ಕ್ಷೇತ್ರ, 1957, 1962, 1967, 1972 ರಲ್ಲಿ ಟಿ. ನರಸೀಪುರ ಹಾಗೂ 1989 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವೀರೇಂದ್ರ ಪಾಟೀಲರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. 1980 ರಲ್ಲಿ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1993 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಕೇಂದ್ರದ ಪಿ.ವಿ. ನರಸಿಂಹರಾವ್‌ ಸಂಪುಟದಲ್ಲಿ ಭೂ ಸಾರಿಗೆ ಸಚಿವರಾಗಿದ್ದರು. 1999 ರಲ್ಲಿ ಬಿಜೆಪಿಯಿಂದ ಹಾಗೂ 2004 ರಲ್ಲಿ ಜೆಡಿಎಸ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಿಂದ ಅಜೀಜ್‌ಸೇಠ್‌ ಅವರು 1967, 1972, 1978, 1983, 1989, 1999- ಹೀಗೆ ಆರು ಬಾರಿ ಆಯ್ಕೆಯಾಗಿದ್ದರು. ಸಾರಿಗೆ, ಕಾರ್ಮಿಕ, ವಕ್ಫ್, ಪೌರಾಡಳಿತ ಸೇರಿದಂತೆ ಹಲವಾರು ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದರು.

ಪೌರಾಡಳಿತ, ಕಾನೂನು ಮತ್ತು ಸಂಸದೀಯ ವ್ಯವಹಾರ, ಕೃಷಿ, ಸಹಕಾರ, ಆರೋಗ್ಯ ಸಚಿವರಾಗಿ ಅಪಾರ ಜನಮನ್ನಣೆ ಗಳಿಸಿದ್ದ ಕೆ. ಪುಟ್ಟಸ್ವಾಮಿ ಅವರು 1957, 1962, 1967 ಹಾಗೂ 1972 ರಲ್ಲಿ ಮೈಸೂರು ತಾಲೂಕು ಕ್ಷೇತ್ರದಿಂದ (ಈಗಿನ ಚಾಮುಂಡೇಶ್ವರಿ) ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. 1978 ರಲ್ಲಿ ಚಾಮರಾಜ ಕ್ಷೇತ್ರ ರಚನೆಯಾದಾಗ ಅಲ್ಲಿಗೆ ಸ್ಥಳಾಂತರವಾಗಿಯೂ ಗೆದ್ದರು. ಆದರೆ ಅನಾರೋಗ್ಯದಿಂದಾಗಿ ಕೆಲವು ದಿನಗಳಲ್ಲಿ ನಿಧನರಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿ.ಎನ್‌. ಕೆಂಗೇಗೌಡ ಆಯ್ಕೆಯಾದರು.

ಕೆ. ಪುಟ್ಟಸ್ವಾಮಿ ಅವರು ಮೊದಲ ನಾಲ್ಕು ಅವಧಿಗೆ ಕಾಂಗ್ರೆಸ್‌ ಹಾಗೂ ಐದನೇ ಅವಧಿಗೆ ಜನತಾಪಕ್ಷದ ಟಿಕೆಟ್‌ ಮೇಲೆ ಚುನಾಯಿತರಾಗಿದ್ದರು. ಕೆ. ಪುಟ್ಟಸ್ವಾಮಿ ಅವರು 1952 ರಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕಟ್‌ ಮೇಲೆ ಚುನಾಯಿತರಾಗಿದ್ದರು. ಅದನ್ನು ಸೇರಿಸಿದರೆ ಅವರದ್ದು ಆರು ಬಾರಿ ವಿಧಾನಸಭೆ ಪ್ರವೇಶ. ಆ ಮೂಲಕ ಮೈಸೂರು ಭಾಗದಲ್ಲಿ ಡಿ. ದೇವರಾಜ ಅರಸು ಹಾಗೂ ಕೆ. ಪುಟ್ಟಸ್ವಾಮಿ ಅವರು ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದರು.

Latest Videos
Follow Us:
Download App:
  • android
  • ios