Asianet Suvarna News Asianet Suvarna News

2,600 ಕೋಟಿ ಕೊಡದಿದ್ದರೆ ತ್ಯಾಜ್ಯ ಸಂಗ್ರಹ ಬಂದ್‌: ಬಿಬಿಎಂಪಿಗೆ ಗುತ್ತಿಗೆದಾರರ ಡೆಡ್‌ಲೈನ್‌

ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಪಾಲಿಕೆಯ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ ಕಳೆದ 25 ತಿಂಗಳಿನಿಂದ ಬಿಡುಗಡೆ ಮಾಡಬೇಕಿದ್ದ .2600 ಕೋಟಿಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಗುತ್ತಿಗೆದಾರಿಗೆ ಕಾರ್ಯ ನಿರ್ವಹಿಸಲು, ಕೆಲಸಗಾರರಿಗೆ ವೇತನ ನೀಡಲು ಕಷ್ಟವಾಗುತ್ತಿದ್ದು, ಕೂಡಲೇ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

If 2600 Crores Not Paid Garbage Collection will be Banned in Bengaluru grg
Author
First Published Jan 10, 2023, 7:00 AM IST

ಬೆಂಗಳೂರು(ಜ.10):  ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಕಾಮಗಾರಿಯ ಬಾಕಿ .2600 ಕೋಟಿ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜ.31ರೊಳಗೆ ಈಡೇರಿಸದಿದ್ದರೆ ಘನತ್ಯಾಜ್ಯ ವಿಲೇವಾರಿ, ರಸ್ತೆ ಶುಚಿತ್ವ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಎಲ್ಲ ಕಾರ್ಯಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ. ಸೋಮವಾರ ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಪಾಲಿಕೆಯ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ ಕಳೆದ 25 ತಿಂಗಳಿನಿಂದ ಬಿಡುಗಡೆ ಮಾಡಬೇಕಿದ್ದ .2600 ಕೋಟಿಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಗುತ್ತಿಗೆದಾರಿಗೆ ಕಾರ್ಯ ನಿರ್ವಹಿಸಲು, ಕೆಲಸಗಾರರಿಗೆ ವೇತನ ನೀಡಲು ಕಷ್ಟವಾಗುತ್ತಿದ್ದು, ಕೂಡಲೇ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಲವು ವಲಯ ಆಯುಕ್ತರು ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ತಮಗೆ ಬೇಕಾದ ಗುತ್ತಿಗೆದಾರರಿಗೆ ಮಾತ್ರ ಶೀಘ್ರ ಬಿಲ್‌ ಪಾವತಿಸುತ್ತಿದ್ದು, ಉಳಿದವರ ಬಿಲ್‌ ಬಾಕಿ ಉಳಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ವಲಯ ಆಯುಕ್ತರಿಂದ ಬಿಲ್‌ ಪಾವತಿ ಮಾಡುವ ಪದ್ಧತಿ ರದ್ದುಗೊಳಿಸಿ, ಹಿಂದಿನಂತೆ ಬಿಬಿಎಂಪಿ ಕೇಂದ್ರ ಕಚೇರಿಯಿಂದಲೇ ಬಿಲ್ಲುಗಳನ್ನು ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

BBMP ಕೊಳವೆ ಬಾವಿ ಅಕ್ರಮದ ಕತೆ: 150 ಅಡಿ ಬೋರ್ ಕೊರೆದು; 700 ಅಡಿಗೆ ದಾಖಲೆ ಕೊಟ್ರು!

ಬಾಕಿ ಇರುವ ಬಿಲ್ಲುಗಳಿಗೆ 2022 ಜುಲೈ 18ರವರೆಗೆ ನೀಡಲಾಗಿರುವ ಕಾರ್ಯಾದೇಶಗಳಿಗೂ ಸಹ ಶೇ.6ರಷ್ಟುಜಿಎಸ್‌ಟಿ ವ್ಯತ್ಯಾಸದ ಮೊತ್ತವನ್ನು ಪಾಲಿಕೆಯಿಂದಲೇ ಭರಿಸಬೇಕು. ಯಾವುದೇ ಕಾಮಗಾರಿ ಮುಗಿದ ಕೂಡಲೇ ಗುಣಮಟ್ಟದ ಪರೀಕ್ಷೆ ಮಾಡಬೇಕೇ ಹೊರತು ವರ್ಷದ ಬಳಿಕ ಗುಣಮಟ್ಟದ ತಪಾಸಣೆ ನಡೆಸಬಾರದು ಎಂದು ಒತ್ತಾಯಿಸಿದರು.

ಈ ಎಲ್ಲ ಬೇಡಿಕೆಗಳನ್ನು ಜ.31ರೊಳಗೆ ಈಡೇರಿಸದಿದ್ದರೆ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಎಲ್ಲ ರೀತಿಯ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜು ಉಪಸ್ಥಿತರಿದ್ದರು.

Bengaluru: ದಾಸರಹಳ್ಳಿ ವ್ಯಾಪ್ತಿ ಫ್ಲೆಕ್ಸ್‌, ಬ್ಯಾನರ್‌ ಹಾವಳಿ; ಹೆಚ್ಚುತ್ತಿವೆ ಅಪಘಾತ!

2020ರ ನವೆಂಬರ್‌ವರೆಗೆ ಬಿಲ್‌ ಪಾವತಿ: ಆಯುಕ್ತ

ಬಿಬಿಎಂಪಿ ಗುತ್ತಿಗೆದಾರರಿಗೆ 2020 ನವೆಂಬರ್‌ವರೆಗೆ ಎಲ್ಲ ರೀತಿಯ ಬಿಲ್‌ಗಳನ್ನು ಪಾವತಿ ಮಾಡಲಾಗಿದೆ. ಡಿಸೆಂಬರ್‌ ತಿಂಗಳ 100ರಿಂದ 150 ಕೋಟಿ ರು. ಮಾತ್ರ ಬಿಲ್‌ ಬಾಕಿ ಇದ್ದು, ಅದನ್ನು ಶೀಘ್ರವೇ ಪಾವತಿ ಮಾಡುತ್ತೇವೆ. ಬಿಬಿಎಂಪಿಯಿಂದ ತೆರಿಗೆ ವಸೂಲಿ ಅಭಿಯಾನ ನಡೆಯುತ್ತಿದ್ದು, ಕಳೆದ ವಾರ 35ರಿಂದ 36 ಕೋಟಿ ರು. ಸಂಗ್ರಹವಾಗಿದೆ. ಹೀಗಾಗಿ ಗುತ್ತಿಗೆದಾರರು ಭಯಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷರ್‌ ಗಿರಿನಾಥ್‌ ತಿಳಿಸಿದ್ದಾರೆ.

2021 ಮತ್ತು 2022ರ ಬಾಕಿ ಪಾವತಿಗೂ ಕ್ರಮ ಕೈಗೊಳ್ಳುತ್ತೇವೆ. ಎರಡು ವರ್ಷ ನಿರೀಕ್ಷಣಾ ಅವಧಿ(ವೈಟಿಂಗ್‌ ಪಿರಿಯಡ್‌) ಇದೆ ಎಂಬುದು ಗುತ್ತಿಗೆದಾರರಿಗೂ ಗೊತ್ತಿದೆ. ಸಮಸ್ಯೆಯಿದ್ದರೆ ಗುತ್ತಿಗೆದಾರರು ಹೊಸ ಟೆಂಡರ್‌ನಲ್ಲಿ ಭಾಗವಹಿಸಬಾರದಿತ್ತು. ಕೆಲವರು ಮೈನಸ್‌ 20-25ಗೆ ಮೊತ್ತ ದಾಖಲಿಸಿದ್ದಾರೆ. ಬಹುತೇಕ ಗುತ್ತಿಗೆದಾರರು ಪಾಲಿಕೆ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಎಂದಿನಂತೆ ಎಲ್ಲ ಕೆಲಸಗಳು ನಡೆಯುತ್ತವೆ ಎಂದು ಹೇಳಿದರು.

Follow Us:
Download App:
  • android
  • ios