Asianet Suvarna News Asianet Suvarna News

ಮನೆ ಮನೆಗೆ ತರಕಾರಿ ಮಾರಾಟ: ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ

ನಗರಸಭೆ ವತಿಯಿಂದ ಗುರುತಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ| ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಆದೇಶದ ಮೇರೆಗೆ ಆಹಾರ, ದಿನಸಿ ವಸ್ತುಗಳು, ಹಣ್ಣು, ತರಕಾರಿ ಮೊದಲಾದ ಅಗತ್ಯ ಸೇವೆ ಒದಗಿಸಲು ವಿನಾಯಿತಿ|

Identity card for street side traders in Koppal district
Author
Bengaluru, First Published Apr 11, 2020, 8:37 AM IST

ಕೊಪ್ಪಳ(ಏ.11): ಜಿಲ್ಲೆಯಲ್ಲಿ ಕೋವಿಡ್‌-19 ವೈರಾಣು ತಡೆಗಟ್ಟಲು, ನಗರದಲ್ಲಿನ ಜನರು ದಿನಬಳಕೆಯ ವಸ್ತುಗಳನ್ನು ಖರೀದಿಸಲು ಹೊರ ಸಂಚಾರ ಮಾಡದಂತೆ, ನಗರಸಭೆ ವತಿಯಿಂದ ಗುರುತಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ನೀಡಿ ನಿತ್ಯ ಅವಶ್ಯಕ ವಸ್ತುಗಳನ್ನು ಮನೆ ಮನೆಗೆ ಪೂರೈಸಲು ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ವ್ಯವಹಾರವನ್ನು ಮುಂದುವರೆಸಲು ಅನುಮತಿ ನೀಡಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ನಗರದ ಬೀದಿಬದಿ ವ್ಯಾಪಾರಿಗಳು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಆದೇಶದ ಮೇರೆಗೆ ಆಹಾರ, ದಿನಸಿ ವಸ್ತುಗಳು, ಹಣ್ಣು, ತರಕಾರಿ ಮೊದಲಾದ ಅಗತ್ಯ ಸೇವೆಗಳನ್ನು ಒದಗಿಸಲು ವಿನಾಯಿತಿಯನ್ನು ನೀಡಲಾಗಿದೆ. ಆದ್ದರಿಂದ ಕೊಪ್ಪಳ ನಗರಸಭೆ ಈಗಾಗಲೇ ಬೀದಿಬದಿ ವ್ಯಾಪಾರಿಗಳ ಅಧಿನಿಯಮ 2014 ರನ್ವಯ ಬೀದಿ ಬದಿ ವ್ಯಾಪಾರಿಗಳನ್ನು ಸರ್ವೇ ಕಾರ್ಯದ ಮೂಲಕ ಗುರುತಿಸಿ ವ್ಯಾಪಾರ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗಿದೆ.

ಕೊರೋನಾ ಪರಿಣಾಮ: ರೈತರಿಂದಲೇ ನೇರ ಮಾರಾಟಕ್ಕೆ ತೋಟಗಾರಿಕಾ ಇಲಾಖೆ ಸಾರಥ್ಯ

ಜನರು ತಮ್ಮ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸುವ ಸಾಧ್ಯತೆ ಇರುವುದರಿಂದ ಬೀದಿಬದಿ ಆಹಾರ (ಫುಟ್‌ಪಾತ್‌ ಹೋಟೆಲ್‌) ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದನ್ನು ಮುಂದುವರೆಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ವ್ಯಾಪಾರ ಮಾಡುವಾಗ ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು, ಗಾಡಿಗಳ ಸ್ವಚ್ಛತೆಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಅನುಸರಿಸಬೇಕು, ಕೈ ಸ್ವಚ್ಛಗೊಳಿಸಲು ಸೋಪು ಮತ್ತು ಸ್ಯಾನಿಟೈಸರ್‌ಗಳನ್ನು ಬಳಸಬೇಕು.

ಈ ಅಂಶಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ನೀಡಿರುವ ಗುರುತಿನ ಚೀಟಿಗಳನ್ನು/ ಪ್ರಮಾಣ ಪತ್ರವನ್ನು ರದ್ದು ಪಡಿಸಲಾಗುವುದೆಂದು ಸೂಚಿಸಿದೆ. ಜಿಲ್ಲಾಡಳಿತ ಮತ್ತು ನಗರಸಭೆಗಳಿಂದ ಸೂಚಿಸುವ ಸಲಹೆ ಹಾಗೂ ವಿಧಿಸುವ ನಿರ್ಬಂಧ ಮತ್ತು ಷರತ್ತುಗಳಿಗೆ ಒಳಪಟ್ಟು ಕೋವಿಡ್‌- 19 ವೈರಾಣು ಹರಡದಂತೆ ಸಹಕರಿಸಲು ಹಾಗೂ ಕಟ್ಟು ನಿಟ್ಟಿನ ಸೂಕ್ತ ಮುಂಜಾಗೃತ ಕ್ರಮಗಳನ್ನು ಅನುಸರಿಸಿಕೊಂಡು ಮಾರಾಟ ಮಾಡುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios