ಮೈಸೂರು [ಡಿ.13] :  ನಾನು ಜೆಡಿಎಸ್‌ ಶಾಸಕ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಜಿಟಿಡಿ ಅವರು ಬಿಜೆಪಿ ಅಥವಾ ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹಬ್ಬಿದ್ದ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್‌ ಶಾಸಕನಾಗಿಯೇ ಇರುತ್ತೇನೆ. ಕಾಂಗ್ರೆಸ್‌ ಅಥವಾ ಬಿಜೆಪಿ ಸೇರಿದಂತೆ ಯಾವ ಪಕ್ಷದ ಕಡೆಗೂ ಮುಖ ಮಾಡುವುದಿಲ್ಲ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಉಪ ಚುನಾವಣೆ ಸೇರಿದಂತೆ ಎಲ್ಲ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಜಿಟಿಡಿ, ಇತ್ತೀಚಿನ ದಿನಗಳಲ್ಲಿ ಅನ್ಯ ಪಕ್ಷಗಳ ನಾಯಕರೊಂದಿಗೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಜೆಡಿಎಸ್‌ ತೊರೆಯಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಪರಾಜಿತ ಅಭ್ಯರ್ಥಿ ಎಚ್‌.ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಸಿಎಂ ಯಡಿಯೂರಪ್ಪ ಸೇರಿದಂತೆ ಯಾರೊಂದಿಗೂ ಮಾತನಾಡುವುದಿಲ್ಲ. ಒಂದೊಮ್ಮೆ ವಿಶ್ವನಾಥ್‌ರನ್ನು ಸಚಿವರನ್ನಾಗಿಸಿ ಎಂದು ಹೇಳಿದರೆ, ನನ್ನ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆ ಇದೆ. ಇವನ್ಯಾರು ಮಂತ್ರಿ ಮಾಡಿ ಅಂತಾ ಹೇಳೊಕೆ ಅಂತನೂ ಕೇಳಬಹುದು. ಹೀಗಾಗಿ, ನಾನು ಯಾರ ಪರವೂ ಮಾತಾನಾಡುವುದಿಲ್ಲ ಎಂದು ಹೇಳಿದ್ದಾರೆ.

'ಎಲ್ಲ ಸೇರಿ ನನ್ನ ಸೋಲಿಸಿದ್ರು: ಸಿದ್ದು, ಎಚ್‌ಡಿಕೆ, ಜಿಟಿಡಿಯಿಂದ ಹಿನ್ನಡೆ'...

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಈ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ, ಸಾಮರ್ಥ್ಯವೂ ಇದೆ. ಹಾಗೂ ಅಷ್ಟೇ ಕಷ್ಟವೂ ಇದೆ. ಅವರು ಯಶಸ್ವಿಯಾಗಿ ರಾಜ್ಯ ಅಭಿವೃದ್ಧಿ ಪಡಿಸಿ ಆಡಳಿತ ನಡೆಸಲೆಂದು ಹಾರೈಸುತ್ತೇನೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಷ್ಟುಬೇಗ ಗುಣಮುಖರಾಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ. ನಾನು ಸಿದ್ದರಾಮಯ್ಯ ಹಲವು ದಶಕಗಳಿಂದ ಸ್ನೇಹಿತರು. ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನನಗೆ ಮಾಹಿತಿ ಬಂದಿದೆ. ಅವರು ವಿಶ್ರಾಂತಿ ಪಡೆಯದೇ ಸದಾಕಾಲವೂ ಓಡಾಡುವ ವ್ಯಕ್ತಿ. ಹೀಗಾಗಿ, ಆದಷ್ಟುಬೇಗ ಅವರು ಗುಣಮುಖರಾಗಲಿ ಎಂದು ತಿಳಿಸಿದ್ದಾರೆ.