ಹೊಸಕೋಟೆ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ. ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದ ಈ ಸಂದರ್ಭದಲ್ಲಿ ಫಲಿತಾಂಶದ ಬಗ್ಗೆ ಎಂಟಿಬಿ ನಾಗರಾಜ್ ಭವಿಷ್ಯ ನುಡಿದಿದ್ದಾರೆ. 

ಹೊಸಕೋಟೆ (ನ.29): ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ರಂಗೇರಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದು, ತಮ್ಮದೇ ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್ ಕೂಡ ತಾವೂ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಕಂಬಳೀಪುರದಲ್ಲಿ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು ಸಾವಿರಾರು ಮತಗಳ ಅಂತರದಲ್ಲಿ ತಾವು ಗೆಲ್ಲುತ್ತೇನೆ ಎಂದರು. 

ಎಂಟಿಬಿ ಎದುರಾಳಿಯಾಗಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಕಣದಲ್ಲಿದ್ದು, ಕಾಂಗ್ರೆಸಿನಿಂದ ಪದ್ಮಾವತಿ ಫೈಟ್ ನೀಡುತ್ತಿದ್ದಾರೆ. 

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಎಂಟಿಬಿ ಬೆಂಬಲಿಗನ ಮೇಲೆ ಗಂಭೀರ ಹಲ್ಲೆ..

ಇನ್ನು ಇಲ್ಲಿನ ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವಿನ ಅಸಮಾಧಾನದ ಬಗ್ಗೆಯೂ ಎಂಟಿಬಿ ನಾಗರಾಜ್ ಮಾತನಾಡಿದ್ದು, ಕೆಲವು ಕಡೆ ಈ ರೀತಿಯಾದ ಅಸಮಾಧಾನಗಳಿರುತ್ತದೆ. ಇದನ್ನು ಸರಿಪಡಿಸಿದ್ದಾಗಿ ಹೇಳಿದರು. 

ಇನ್ನು ಹಲವು ಮುಖಂಡರು ಎಂಟಿಬಿ ವಿರುದ್ಧ ನಿರಂತರ ವಾಕ್ ಪ್ರಹಾರ ನಡೆಸುತ್ತಿದ್ದು, ಅವರಲ್ಲ ನನಗೆ ಮತ ಹಕುವವರು. ಸಾಮಾನ್ಯ ಜನರು ಎಂದರು. 

‘ಡಿ. 9ರ ನಂತರ ಎಂಟಿಬಿ ನಾಗರಾಜು ಗಂಟು ಮೂಟೆ ಕಟ್ಟಬೇಕು’..

ಯಾರು ಯಾರಿಗೆ ಬೆಂಬಲ ನೀಡಿದ್ದಾರೆ ಎನ್ನುವುದು ಫಲಿತಾಂಶ ಬಂದ ದಿನ ಗೊತ್ತಾಗುತ್ತದೆ. 15 ವರ್ಷದಿಂದ ಈ ಕ್ಷೇತ್ರದಲ್ಲಿ ಜನ ನನ್ನ ಅಭಿವೃದ್ಧಿಯನ್ನು ನೋಡಿದ್ದಾರೆ. ಅವರು ನನ್ನನ್ನು ಕೈ ಬಿಡುವುದಿಲ್ಲ ಎನ್ನುವುದು ನನಗೆ ಗೊತ್ತು ಎಂದರು. 

ಇನ್ನು ಇಲ್ಲಿ ಯಾರೋ ಬಂದು ಕುಕ್ಕರ್ ಕೊಟ್ಟು ನಿಂತು ಬಿಟ್ಟರೆ ಗೆಲ್ಲಲು ಆಗಲ್ಲ. 25 ಸಾವಿರ ಮತಗಳ ಅಂತರದಲ್ಲಿ ನನ್ನ ಗೆಲುವು ಖಚಿತ ಎಂದು ಎಂಟಿಬಿ ನಾಗರಾಜ್ ತಮ್ಮ ಚುನಾವಣಾ ಭವಿಷ್ಯ ಹೇಳಿದರು. 

ರಾಜ್ಯದ 15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.