ಶಿರಾ (ಅ.16):  ಶಿರಾ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್‌ ಪಕ್ಷ ವಿಧಾನಸೌಧದ ಮೂರನೇ ಮೆಟ್ಟಿಲು ಹತ್ತಲು ಎಲ್ಲ ರೀತಿಯ ಶುಭ ಸೂಚನೆಯನ್ನು ಈ ಉಪಚುನಾವಣೆ ನೀಡುತ್ತದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ವ್ಯಕ್ತಪಡಿಸಿದರು.

ಅವರು ಶಿರಾದಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿರಾ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಬುದ್ದರು. ಬಿಜೆಪಿಯ ಯಾವುದೇ ಹಣ, ಆಮಿಷಗಳಿಗೆ ಒಳಗಾಗದೆ ಅಭಿವೃದ್ಧಿಯ ಪರ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ತಮಗಿದೆ ಎಂದರು.

'ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್‌ನದ್ದೇ ಭಯ’ ...

ಮದಲೂರು ಕೆರೆ ಇದೆ ಎಂಬುದೇ ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲ. ಈ ಹಿಂದೆ ಇದೇ ಬಿಜೆಪಿ ನಾಯಕರು ಮದಲೂರು ಕೆರೆಗೆ ನೀರು ಹರಿಸಲು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ತೆರಳಿ ಮದಲೂರು ಕೆರೆಗೆ ನೀರು ಹರಿಸದಂತೆ ತಡೆಯೊಡ್ಡಿದರು ಎಂದು ದೂರಿದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಮದಲೂರು ಕೆರೆಗೆ 15 ದಿನದಲ್ಲಿ ಹೇಮಾವತಿ ನೀರು ಹರಿಸಿದ್ದೆ. ತದ ನಂತರ ನಡೆದ ಚುನಾವಣೆಯಲ್ಲಿ ನಾನು ಸೋತಿದ್ದರಿಂದ ನೀರು ಬರಲೇ ಇಲ್ಲ. ರಾಜಕೀಯ ಇಚ್ಛಾಶಕ್ತಿ ಇಲ್ಲದಿದ್ದರೆ ನೀರು ತರಲು ಸಾಧ್ಯವಿಲ್ಲ ಎಂಬುದಕ್ಕೆ ಶಿರಾ ಸಾಕ್ಷಿಯಾಗಿದೆ ಎಂದರು.

ಆಡಳಿತಾರೂಢ ಬಿಜೆಪಿಗೆ ಅಧಿಕಾರ ಬಲ, ಹಣ ಬಲ ಇದೆ. ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರೂ ಶಿರಾ ತಾಲೂಕಿನ ಜನರ ಪ್ರಬುದ್ಧರಾಗಿದ್ದು, ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ ತಮ್ಮ ನಿರ್ಧಾರವನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಾರೆ ಎಂದರು.